ಹಿರಿಯ ನಟ ಉಮೇಶಣ್ಣ, ಡಾ. ರಾಜಕುಮಾರ್ ಗೆಟಪ್ನಲ್ಲಿದ್ದಾರೆ. ಆರತಿ ತರಹ ಸಂಜನಾ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಪೋಸ್ಟರ್ಗಳು ಊರ ತುಂಬಾ ಕಾಣಿಸುತ್ತಿವೆ. ಅಂದ ಹಾಗೆ, ಇದು ಈ ವಾರ ಬಿಡುಗಡೆಯಾಗುತ್ತಿರುವ ‘ಮತ್ತೆ ಮತ್ತೆ’ ಚಿತ್ರದ್ದು. ಈ ಚಿತ್ರಕ್ಕೆ ಡಾ. ಅರುಣ್ ಹೊಸಕೊಪ್ಪ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜೊತೆಗೆ ತಮ್ಮ ನೈರುತ್ಯ ಆರ್ಟ್ ಮೀಡಿಯಾ ಬ್ಯಾನರ್ನಡಿ ನಿರ್ಮಿಸುತ್ತಿದ್ದಾರೆ.
ಈ ಚಿತ್ರವು ಅರುಣ್ ಅವರ ಕನಸಿನ ಕೂಸು ಎನ್ನುತ್ತಾರೆ ಹಿರಿಯ ನಟ ಎಂ.ಎಸ್.ಉಮೇಶ್. ‘ಇಲ್ಲಿ ಕಥೆಯೇ ಹೀರೋ. ಸಾಕಷ್ಟು ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಮನದೀಪ್ ರಾಯ್, ಸತ್ಯಜಿತ್, ರಾಕ್ಲೈನ್ ಸುಧಾಕರ್ ಇಂದು ನಮ್ಮೊಂದಿಗಿಲ್ಲ. ಆದರೆ ಈ ಚಿತ್ರ ಅವರನ್ನು ಜೀವಂತವಾಗಿರಿಸಿದೆ. ಅರುಣ್ ಈ ಚಿತ್ರವನ್ನು ಮುಗಿಸಿ, ಬಿಡುಗಡೆ ಮಾಡುವುದಕ್ಕೆ ಬಹಳ ಕಷ್ಟಪಟ್ಟಿದ್ದಾರೆ. ಬೇರೆಯವರಾಗಿದ್ದರೆ ಚಿತ್ರವನ್ನು ಅರ್ಧಕ್ಕೇ ಬಿಟ್ಟಿರುತ್ತಿದ್ದರು. ಅವರ ಶ್ರಮಕ್ಕೆ ಫಲ ಸಿಗಬೇಕು’ ಎಂದರು.
ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದ ಅವರು, ‘ಚಿತ್ರದಲ್ಲಿ ನನ್ನದು ಮನೆ ಮಾಲೀಕನ ಪಾತ್ರ. ಹೆಣ್ಣುಮಕ್ಕಳನ್ನು ಕಂಡರೆ ಜೊಲ್ಲು ಸುರಿಸುವ ಪಾತ್ರ. ಸಂಜನಾ ಅವರ ಜೊತೆಗೆ ಕನಸಿನ ಹಾಡಿನಲ್ಲಿ ಕಾಣಿಸಿಕೊಂಡಿದ್ದೇನೆ. ಅಣ್ಣಾವ್ರನ್ನು ನೆನಪಿಸುವ ಹಾಡದು’ ಎಂದರು.
ಡಾ. ಅರುಣ್ ಹೊಸಕೊಪ್ಪ ಮಾತನಾಡಿ, ‘ಪತ್ರಿಕೋದ್ಯಮ ಮುಗಿಸಿದ ೫ ಜನ ವಿದ್ಯಾರ್ಥಿಗಳು ಒಂದು ಚಾನಲ್ ಪ್ರಾರಂಭಿಸುವುದಕ್ಕೆ ಮುಂದಾಗುತ್ತಾರೆ. ಅದಕ್ಕೆ ಹಣ ಬೇಕಲ್ಲ, ಅದಕ್ಕಾಗಿ ಒಂದು ಸಿನಿಮಾ ಮಾಡುತ್ತಾರೆ. ಅದರಿಂದ ಬಂದ ಹಣದಲ್ಲಿ ಒಂದು ಚಾನಲ್ ಪ್ರಾರಂಭಿಸಲು ಯೋಚಿಸುತ್ತಾರೆ. ಆ ಹಂತದಲ್ಲಿ ಏನೇನೆಲ್ಲಾ ಆಯ್ತು? ಸಾಕಷ್ಟು ಅಡೆ, ತಡೆಗಳನ್ನು ಎದುರಿಸಿ ಕೊನೆಗೂ ಅವರು ಸಿನಿಮಾ ಮಾಡಿ ಮುಗಿಸಿದರೇ? ಎನ್ನುವುದೇ ‘ಮತ್ತೆ ಮತ್ತೆ’ ಚಿತ್ರದ ಕಥಾಹಂದರ’ ಎಂದು ಕಥೆಯ ಬಗ್ಗೆ ವಿವರಿಸಿದರು.
ಈ ಚಿತ್ರದಲ್ಲಿ ಸಾಕಷ್ಟು ಹಿರಿಯ ಕಲಾವಿದರು ನಟಿಸಿದ್ದಾರೆ. ‘ಕನ್ನಡ ಚಿತ್ರರಂಗದ ಬಹುತೇಕ ಹಿರಿಯ ಹಾಸ್ಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರನ್ನೆಲ್ಲಾ ನೋಡಿ ಬೆಳೆದವನು ನಾನು. ಅವರು ಚಿತ್ರದಲ್ಲಿ ಇರಬೇಕು ಎಂದು ಅವರನ್ನು ಆಯ್ಕೆ ಮಾಡಿದೆ. ಈ ಚಿತ್ರದಲ್ಲಿ ಏನಾದರೂ ಲಾಭ ಬಂದರೆ ಶೇ. ೨೫ರಷ್ಟು ಹಣವನ್ನು ಬಡ ಕಲಾವಿದರಿಗೆ ಕೊಡಬೇಕು ಎಂದುಕೊಂಡಿದ್ದೇನೆ’ ಎಂದರು.
‘ಮತ್ತೆ ಮತ್ತೆ’ ಚಿತ್ರದಲ್ಲಿ ಉಮೇಶಣ್ಣ ಜೊತೆಗೆ ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿಯಾಗೇ ಕಾಣಿಸಿಕೊಂಡಿದ್ದಾರಂತೆ. ಉಳಿದಂತೆ ಡಿಂಗ್ರಿ ನಾಗರಾಜ್ ಸಂಜನಾ ಗಲ್ರಾನಿ, ಹೊನ್ನವಳ್ಳಿ ಕೃಷ್ಣ, ‘ಶಂಖನಾದ’ ಅಂಜನಪ್ಪ, ಕೋಟೆ ಪ್ರಭಾಕರ್, ಆರ್.ಜೆ. ವಿಕ್ಕಿ, ಸ್ವಾತಿ, ಪ್ರಕಾಶ್ ತುಮ್ಮಿನಾಡು, ಶ್ರೀನಿವಾಸಗೌಡ, ವೈಷ್ಣವಿ ಮೆನನ್, ತುಮಕೂರು ಮೋಹನ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ, ಬೆಂಗಳೂರು, ನೆಲಮಂಗಲ, ಮುರುಡೇಶ್ವರ, ಶಿರಾಲಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ., ನೃತ್ಯನಿರ್ದೇಶಕ ಅನಿ ಇವರೆಲ್ಲ ಚಿತ್ರದ ಕುರಿತಂತೆ ಮಾತನಾಡಿದರು.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ತೀರ್ಥಹಳ್ಳಿಯ ಇಮ್ತಿಯಾಜ್ ಸುಲ್ತಾನ್ ಸಂಗೀತ ಸಂಯೋಜಿಸಿದ್ದಾರೆ.


