‘ಕಿತ್ತೂರು ಚೆನ್ನಮ್ಮ’ ಬಿಡುಗಡೆಯಾಗಿ 65 ವರ್ಷಗಳ ನಂತರ ಕನ್ನಡದಲ್ಲಿ ಚೆನ್ನಮ್ಮನ ಕುರಿತು ಒಂದು ಚಿತ್ರ ಸದ್ದಿಲ್ಲದೆ ತಯಾರಾಗುತ್ತಿದೆ. ವಿಶೇಷವೆಂದರೆ, ಈ ಐತಿಹಾಸಿಕ ಚಿತ್ರವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ.
ಲತಾ ಜಯಪ್ರಕಾಶ್ ತಮ್ಮ ಬಿಎಂಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಿರುವ, ಶ್ವೇತಾ ಶೆಟ್ಟಿ ನಿರ್ದೇಶನದ ‘ರಾಣಿ ಚೆನ್ನಮ್ಮ’ ಎಂಬ ಐತಿಹಾಸಿಕ ಚಿತ್ರದ ಮೊದಲ ಹಾಡಿನ ಅನಾವರಣ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ದಿನದಂದು ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು. ‘ರಾಣಿ ಚೆನ್ನಮ್ಮ’ ಚಿತ್ರಕ್ಕೆ ‘ಕಿತ್ತೂರಿನ ಗತ್ತು ದೇಶಕ್ಕೆ ಗೊತ್ತು’ ಎಂಬ ಅಡಿಬರಹವಿದೆ.
ಈ ಚಿತ್ರದ ಪ್ರಮುಖ ವಿಶೇಷವೆಂದರೆ, ಚಿತ್ರದಲ್ಲಿನ ದೃಶ್ಯ ವಿನ್ಯಾಸ, ಪಾತ್ರಗಳು, ಯುದ್ಧದ ಸನ್ನಿವೇಶಗಳು ಸೇರಿದಂತೆ ಬಹುಪಾಲು ಅಂಶಗಳನ್ನು AI ತಂತ್ರಜ್ಞಾನದಿಂದ ರೂಪಿಸಲಾಗಿದೆ. ಈ ಚಿತ್ರದ ವೀಡಿಯೋ ನಿರ್ಮಾಣದಲ್ಲಿ ಮಾತ್ರ AI ತಂತ್ರಜ್ಞಾನವನ್ನು ಬಳಸಲಾಗಿದ್ದು, ಮಿಕ್ಕಂತೆ ಈ ಚಿತ್ರಕ್ಕೆ ಶ್ರೀಹರಿ ಸಂಗೀತ ಸಂಯೋಜಿಸಿದ್ದು, ಶಿವನಂಜೆಗೌಡ ಮತ್ತು ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕಿ ಲತಾ ಜಯಪ್ರಕಾಶ್, ‘ಕಿತ್ತೂರಿನ ಗರ್ವ, ಧೈರ್ಯ, ಹೆಮ್ಮೆ ಮತ್ತು ಸ್ವಾಭಿಮಾನದ ಪ್ರತೀಕವಾದ ರಾಣಿ ಚೆನ್ನಮ್ಮ ಅವರ ಜೀವನಗಾಥೆಯನ್ನು ಆಧರಿಸಿದ ಈ ಚಿತ್ರವು, ಇತಿಹಾಸವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪುನರ್ಜೀವಗೊಳಿಸುವ ಮಹತ್ವಾಕಾಂಕ್ಷಿಯ ಪ್ರಯತ್ನವಾಗಿದೆ. ನಿರ್ದೇಶಕಿ ಶ್ವೇತಾ ಶೆಟ್ಟಿ ಅವರು ಈ ಚಿತ್ರದ ಕುರಿತು ಹೇಳಿದ ತಕ್ಷಣ ಸಂತೋಷವಾಯಿತು. ಈಗಿನ ಮಕ್ಕಳಿಗೆ AI ಮೂಲಕ ಹೇಳಿದಾಗ ಬೇಗ ಅರ್ಥವಾಗುತ್ತದೆ. ಹಾಗಾಗಿ, ನಾವು AIನಲ್ಲೇ ಈ ಚಿತ್ರ ಮಾಡಲು ನಿರ್ಧಾರ ಮಾಡಿದೆವು. ರಾಣಿ ಚೆನ್ನಮ್ಮ ಅವರ ಸಾಧನೆಗೆ ಅವರ ತಂದೆಯವರ ಬೆಂಬಲವೇ ಪ್ರಮುಖ ಕಾರಣ. ಇಂದು ರಾಣಿ ಚೆನ್ನಮ್ಮ ಹಾಗೂ ಅವರ ತಂದೆಯ ಕುರಿತಾದ ಹಾಡೇ ಅನಾವರಣವಾಗಿದೆ’ ಎಂದರು.
ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ. ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಮತ್ತು ಕೆ.ವಿ. ಚಂದ್ರಶೇಖರ್, ನಿರ್ಮಾಪಕರಾದ ಕೆ. ಮಂಜು, ಎಂ.ಎನ್ ಕುಮಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಟಿ ಗಿರಿಜಾ ಲೋಕೇಶ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕ ಮಹಿಳಾ ಸಾಧಕಿಯರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪುರುಷ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.


