ವಿಜಯ್ ರಾಘವೇಂದ್ರ ಅಭಿನಯದ ಬಹುತೇಕ ಚಿತ್ರಗಳ ಚಿತ್ರೀಕರಣ ಮುಗಿದು ಪತ್ರಿಕಾಗೋಷ್ಠಿಗಳು ನಡೆದಾಗಲೇ, ಆ ಚಿತ್ರದ ಬಗ್ಗೆ ವಿಷಯ ಗೊತ್ತಾಗೋದು. ಆದರೆ, ಬಹಳ ದಿನಗಳ ನಂತರ ವಿಜಯ್ ರಾಘವೇಂದ್ರ ಅಭಿನಯದ ಚಿತ್ರವೊಂದರ ಚಿತ್ರೀಕರಣ ನೋಡುವ ಅವಕಾಶವೊಂದು ಮಾಧ್ಯಮದವರಿಗೆ ಇತ್ತೀಚೆಗೆ ಸಿಕ್ಕಿದೆ.
ವಿಜಯ್ ರಾಘವೇಂದ್ರ ನಾಯಕನಾಗಿ ನಟಿಸುತ್ತಿರುವ ‘ON ಡ್ಯೂಟಿ’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ. ಮಾಕಿನೇನಿ ಸಾಯಿ ಕೃಷ್ಣರಾಜು ನಿರ್ಮಾಣದಲ್ಲಿ, ಸಂಜೀವ್ ಮೆಗೋಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳನ್ನು ಒಳಗೊಂಡಿದೆ.
ಇತ್ತೀಚೆಗೆ ಮಾಗಡಿ ರಸ್ತೆಯ ಸಾ ಮಿಲ್ವೊಂದರಲ್ಲಿ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ವಿಜಯ್ ರಾಘವೇಂದ್ರ, ಕೃಷ್ಣಸಾಯಿ, ಸ್ಮೃತಿ ವೆಂಕಟೇಶ್, ಭಾವನ ಚಂದ್ರ, ವಿನಯಾ ಪ್ರಸಾದ್ ಹಾಗೂ ಸಂಜೀವ್ ಮೆಗೋಟಿ ಅಭಿನಯದ ಸಾಹಸ ಸನ್ನಿವೇಶದ ಚಿತ್ರೀಕರಣ ನಡೆಯಿತು.

‘ಪೊಲೀಸ್ ಕಂಪ್ಲೇಂಟ್’ ಸೇರಿದಂತೆ ಕೆಲವು ಚಿತ್ರಗಳನ್ನು ನಿರ್ದೇಶಿಸಿರುವ ಮತ್ತು 45ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ ಬರೆದಿರುವ ಅನುಭವವಿರುವ ಸಂಜೀವ್ ಮೆಗೋಟಿ 12 ವರ್ಷಗಳ ಬಳಿಕ ಕನ್ನಡದಲ್ಲಿ ಚಿತ್ರ ನಿರ್ದೇಶಿಸುತ್ತಿದ್ದಾರೆ. ‘ON ಡ್ಯೂಟಿ’ ಕುರಿತು ಮಾತನಾಡುವ ನಿರ್ದೇಶಕ ಅವರು, ‘ತಾಯಿ, ಪತ್ನಿ, ಮಕ್ಕಳು ಹಾಗೂ ಕುಟುಂಬಕ್ಕಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕರ್ತವ್ಯ ನಿರ್ವಹಿಸುತ್ತಾರೆ. ಆ ಹೊಣೆಗಾರಿಕೆಯ ಭಾವವನ್ನೂ ‘ON ಡ್ಯೂಟಿ’ ಶೀರ್ಷಿಕೆ ಪ್ರತಿಬಿಂಬಿಸುತ್ತದೆ. ಈಗಾಗಲೇ ಶೇ 75ಕ್ಕೂ ಅಧಿಕ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಇನ್ನೂ ಮೂರು ಸಾಹಸ ಸನ್ನಿವೇಶಗಳು ಹಾಗೂ ಹಾಡುಗಳ ಚಿತ್ರೀಕರಣ ಬಾಕಿಯಿದೆ’ ಎಂದರು.
ನಿರ್ಮಾಪಕ ಹಾಗೂ ನಟ ಕೃಷ್ಣಸಾಯಿ ಮಾತನಾಡಿ, ‘ಚಿತ್ರದಲ್ಲಿ ಸೂರ್ಯ ಮತ್ತು ಚಂದ್ರ ಎಂಬ ಎರಡು ಪ್ರಮುಖ ಪಾತ್ರಗಳಿವೆ. ವಿಜಯ ರಾಘವೇಂದ್ರ ಅವರು ಒಂದು ಪಾತ್ರದಲ್ಲಿ, ನಾನು ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಿರ್ದೇಶಕರು ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಆದಷ್ಟು ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ’ ಎಂದು ತಿಳಿಸಿದರು.
ವಿಜಯ್ ರಾಘವೇಂದ್ರ ಮಾತನಾಡಿ, ‘ಸಂಜೀವ್ ಮೆಗೋಟಿ ಅವರ ಕಥೆ ನನಗೆ ಬಹಳ ಇಷ್ಟವಾಯಿತು. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ನನ್ನ ಪಾತ್ರವೂ ವಿಭಿನ್ನವಾಗಿದ್ದು, ಇದುವರೆಗೂ ಮಾಡಿರದ ಪಾತ್ರ ಎನ್ನಬಹುದು. ‘ಗಣೇಶ ಮತ್ತೆ ಬಂದ’ ಚಿತ್ರದ ಬಳಿಕ ಸುಮಾರು 20 ವರ್ಷಗಳ ನಂತರ ವಿನಯಾ ಪ್ರಸಾದ್ ಅವರೊಂದಿಗೆ ನಟಿಸುತ್ತಿರುವುದು ಸಂತೋಷ ತಂದಿದೆ’ ಎಂದರು.
‘ON ಡ್ಯೂಟಿ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ವಿನಯಾ ಪ್ರಸಾದ್ ಜೊತೆಗೆ ಸ್ಮೃತಿ ವೆಂಕಟೇಶ್, ಭಾವನಾ ಚಂದ್ರ, ವಿನಯಾ ಪ್ರಸಾದ್, ಥ್ರಿಲ್ಲರ್ ಮಂಜು, ಸಂಜೀವ್ ಮೆಗೋಟಿ ಮುಂತಾದವರು ನಟಿಸುತ್ತಿದ್ದು, ಹರೀಶ್ ಸೊಂಡೆಕೊಪ್ಪ ಛಾಯಾಗ್ರಹಣ, ಆರೋಹಣ ಸುಧೀಂದ್ರ ಸಂಗೀತ ನಿರ್ದೇಶನವಿದೆ.


