ಮಂಗಳೂರು – ಗೋವಾ ಮಾರ್ಗದಲ್ಲೊಂದು ರೋಚಕ ಥ್ರಿಲ್ಲರ್!

ಚಂದನವನ, ಸಿನಿ ಸುದ್ದಿ

ರೋಡ್‍ ಥ್ರಿಲ್ಲರ್ ಸಿನಿಮಾಗಳು ಕನ್ನಡದಲ್ಲಿ ಇತ್ತೀಚೆಗೆ ಬಂದಿದ್ದು ಕಡಿಮೆಯೇ. ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಗೋವಾ ಮಾರ್ಗವಾಗಿ ಮುಂಬೈ‌ಗೆ ಸಾಗುವ ಹೆದ್ದಾರಿಯಲ್ಲಿ ನಡೆಯುವ ರೋಚಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವನ್ನು ಇದೀಗ ಮಂಜುನಾಥ್‍ ಟಿ.ಆರ್‍ ಮಾಡಿದ್ದಾರೆ. ಅದೇ ‘NH 66’.

ಹೆದ್ದಾರಿ ಪಯಣದ ಕಥೆ ಇರುವ ಈ ಚಿತ್ರವನ್ನು ಮಂಜುನಾಥ್ ಟಿ.ಆರ್ ನಿರ್ಮಿಸಿ-ನಿರ್ದೇಶಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಒಂದು ಹೆದ್ದಾರಿ, ಅನೇಕ ರಹಸ್ಯಗಳು’ ಎಂಬ ಅಡಿಬರಹವಿರುವ ಈ ಚಿತ್ರದ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

‘NH 66’ ಚಿತ್ರದ ಕುರಿತು ಮಾತನಾಡುವ ನಿರ್ಮಾಪಕ-ನಿರ್ದೇಶಕ ಮಂಜುನಾಥ್, ‘ರಾಯರ ಕೃಪೆಯಿಂದ ಅರಂಭವಾದ ನಮ್ಮ ಚಿತ್ರ ಚೆನ್ನಾಗಿ ಬಂದಿದೆ. ಮೂರೂ ಕಲಾವಿದರು ಪ್ರತಿಯೊಂದು ಹಂತದಲ್ಲಿ ಮಾರ್ಗದರ್ಶಕರಾಗಿ ಆಗಿ, ಗುರುವಾಗಿ ಕೆಲಸ‌ ಮಾಡಿದ್ದಾರೆ. ಚಿತ್ರೀಕರಣ ಹೀಗೇ ಮಾಡಬೇಕು ಎಂದು ಮುಂಚೆಯೇ ನಿರ್ಧಾರ ಮಾಡಿದ್ದೆವು. ಅದೇ ರೀತಿ ಮಾಡಿದ್ದೆವೆ. ‘NH 66’ ಚಿತ್ರ ಪ್ರಯಾಣದ ಕಥೆ ಹೊಂದಿದೆ.‌ ಸಿನಿಮಾದ ಇಡೀ ಚಿತ್ರೀಕರಣ ಪ್ರವಾಸದಲ್ಲಿ ಮುಗಿದಿದೆ. ಇದಕ್ಕಾಗಿ 650 ಕಿಲೋ ಮೀಟರ್ ಸಂಚರಿಸಿದ್ದೇವೆ. ಮಂಗಳೂರು, ಗೋವಾ ,ಕುಂದಾಪುರ, ಮುಂಬೈ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ’ ಎಂದರು.

ರಾಜೇಶ್ ನಟರಂಗ ಮಾತನಾಡಿ, ‘ನಾವೂ ಕೂಡ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿರುತ್ತೇವೆ. ಅದರಲ್ಲಿ ನಮ್ಮ ಸ್ವಾರ್ಥವೂ ಇರಲಿದೆ. ಒಪ್ಪಿಕೊಂಡ ಚಿತ್ರದಲ್ಲಿ ಕೆಲಸ ಮಾಡುವುದು ನಮ್ಮ ಧರ್ಮ. ಈ ಚಿತ್ರದ ಪಾತ್ರ ಕೂಡ ಚೆನ್ನಾಗಿದೆ’ ಎಂದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, ‘ಇದುವರೆಗೆ ಖಾಕಿ ಹಾಕಿ ಬೆಜಾರಿತ್ತು. ಈ ಚಿತ್ರದಲ್ಲಿ ಬಿಳಿಬಟ್ಟೆ ಹಾಕಿದ್ದೇನೆ. ಪಾತ್ರ ಚೆನ್ನಾಗಿದೆ. ಚಿತ್ರದಲ್ಲಿರುವ ಮೂರು ಮಂದಿ ನಾಯಕರೇ. ಎಲ್ಲರಿಗೂ ಸಮಾನ ತೂಕವಿದೆ’ ಎಂದರು.

‘NH 66’ ಚಿತ್ರಕ್ಕೆ ಸ್ವಾಮಿನಾಥನ್ ಸಂಗೀತ, ಸುನೀತ್ ಹಲಗೇರಿ ಛಾಯಾಗ್ರಹಣ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನವಿದೆ.

‘ಒಡಹುಟ್ಟಿದವಳ’ ಜೊತೆಗೆ ವಿಜಯ್‍ ರಾಘವೇಂದ್ರ ಹಾಡು …