ಗುರುನಂದನ್ ‘MR ಜಾಕ್’ ಆಗಿರುವುದು, ಚಿತ್ರ ಡಿಸೆಂಬರ್ 04ರಂದು ತೆರೆಗೆ ಬರುತ್ತಿರುವ ವಿಷಯ ಗೊತ್ತೇ ಇದೆ. ಈಗಾಗಲೇ ಚಿತ್ರದ ಒಂದು ಹಾಡು ಬಿಡುಗಡೆ ಆಗಿದ್ದು, ಈಗ ಎರಡನೇ ಹಾಡು ‘ಆರಂಭ ವಸಂತ ಆರಂಭ …’ ಇತ್ತೀಚೆಗೆ ಬಿಡುಗಡೆಯಾಗಿದೆ.
‘ಫಸ್ಟ್ ರ್ಯಾಂಕ್ ರಾಜು’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ಗುರುನಂದನ್ ಹಾಗೂ ‘ಪ್ರೇಮದ ಊರಲಿ’ ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಛ ಅಭಿನಯದ ‘MR ಜಾಕ್’ ಚಿತ್ರದ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಜಸ್ಕರಣ್ ಸಿಂಗ್ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡು ಬಿಡುಗಡೆಯಾಗಿದೆ.
ಈ ಹಾಡಿನ ಕುರಿತು ಮಾತನಾಡಿದ ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಪ್ರತಿಯೊಂದು ಚಿತ್ರದಲ್ಲೂ ಒಂದು ಉತ್ತಮ ಮೆಲೋಡಿ ಹಾಡು ಇರಬೇಕು ಎಂಬುದು ನನ್ನ ಆಶಯ. ‘ಆರಂಭ ವಸಂತ ಆರಂಭ …’ ಹಾಡು ಎಲ್ಲ ತಲೆಮಾರಿನ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ’ ಎಂದರು.

ಈ ಹಾಡನ್ನು ಮೊದಲು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವ ಯೋಚನೆ ಚಿತ್ರತಂಡಕ್ಕಿತ್ತಂತೆ. ಗುರುನಂದನ್ ಬಳಿ ಹೇಳಿದಾಗ, ‘ಅಷ್ಟು ದೂರ ಯಾಕೆ? ಮಲೆನಾಡಿನಲ್ಲಿ ಚಿತ್ರೀಕರಣ ಮಾಡೋಣ ಎಂದರಂತೆ. ‘ಇದು ಮದುವೆಯ ಸಂಭ್ರಮ ಸಾರುವ ಹಾಡು. ಮೂಡಿಗೆರೆ ಸಮೀಪದ ಕಳಸ ಬಳಿಯ ಮೈದಾಡಿ ಗುಡ್ಡದಲ್ಲಿ ಮೂರು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಸಿದ್ದೇವೆ. ಹವಾಮಾನದ ಸವಾಲುಗಳ ನಡುವೆಯೂ ಇಡೀ ತಂಡ ಶ್ರಮಿಸಿದೆ. ಡಿಸೆಂಬರ್ 4ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಟ್ರೇಲರ್ ಹಾಗೂ ಇನ್ನಷ್ಟು ಹಾಡುಗಳನ್ನು ಬಿಡುಗಡೆ ಮಾಡಲಿದ್ದೇವೆ’ ಎಂದು ತಿಳಿಸಿದರು.
‘ಪ್ರೇಮದ ಊರಲಿ’ ಖ್ಯಾತಿಯ ನಾಯಕಿ ತಪಸ್ವಿನಿ ಪೂಣಚ್ಛ ಮಾತನಾಡಿ, ‘ಚಿತ್ರದ ಟೀಸರ್ ಹಾಗೂ ಮೊದಲ ಶೀರ್ಷಿಕೆ ಗೀತೆಗೆ ಪ್ರೇಕ್ಷಕರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರದಲ್ಲಿ ನಂದಿನಿ ಎಂಬ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಂಪ್ರದಾಯಗಳನ್ನು ಪಾಲಿಸುವ ಕುಟುಂಬದಿಂದ ಬಂದಿರುವ ಶಿಕ್ಷಕಿಯ ಪಾತ್ರ ನನ್ನದು’ ಎಂದರು.
‘ಆರಂಭ ವಸಂತ ಆರಂಭ …’ ಹಾಡು ಬಿಡುಗಡೆ ಸಮಾರಂಭದಲ್ಲಿ ನಟ ಧರ್ಮಣ್ಣ, ನಟಿ ಸುಶ್ಮಿತ ಜಗ್ಗಪ್ಪ, ಛಾಯಾಗ್ರಾಹಕ ಶಿವಸೇನ, ನೃತ್ಯ ನಿರ್ದೇಶಕ ಆನಂದ್ ಮಠದ್ ಮುಂತಾದವರು ಹಾಜರಿದ್ದರು. ಈ ಚಿತ್ರವನ್ನು ಮಂಡಿಮನೆ ಟಾಕೀಸ್ ನಿರ್ಮಿಸಿದ್ದು, ಸುಮಂತ್ ಗೌಡ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.


