‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರದ ನಂತರ ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸುತ್ತಿರುವ ಹಲವು ಚಿತ್ರಗಳ ಪೈಕಿ, ‘ನೀ ನಂಗೆ ಅಲ್ಲವಾ’ ಎಂಬ ಹೊಸಬರ ಚಿತ್ರವೂ ಒಂದು. ಈ ಚಿತ್ರವು ಸದ್ದಿಲ್ಲದೆ ಮುಗಿದಿದ್ದು, ನವೆಂಬರ್ 13ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆ ಆಗಿದೆ.
ಮನೋಜ್ ಪಿ. ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿಮಾ ನಾಯಕ – ನಾಯಕಿಯಾಗಿ ನಟಿಸಿರುವ ‘ನೀ ನಂಗೆ ಅಲ್ಲವಾ’ ಚಿತ್ರದ ಶೀರ್ಷಿಕೆ ಗೀತೆಯ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ನಿರ್ದೇಶಕ ಮನೋಜ್ ಪಿ. ನಡಲುಮನೆ ಬರೆದಿರುವ ಈ ಹಾಡನ್ನು ಜಸ್ಕರಣ್ ಸಿಂಗ್ ಹಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಮ್ ಕಿರಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ರಾಹುಲ್ ಆರ್ಕಟ್ – ಕಾಶಿಮಾ ಹೆಜ್ಜೆ ಹಾಕಿದ್ದಾರೆ. ಸರಿಗಮ ಯೂಟ್ಯೂಬ್ ಚಾನಲ್‍ನಲ್ಲಿ ಈ ಹಾಡು ಬಿಡುಗಡೆ ಆಗಿದೆ.
ಹಾಡು ಬಿಡುಗಡೆಯ ನಂತರ ಮಾತನಾಡಿದ ನಿರ್ಮಾಪಕ ಜಯರಾಮ್ ದೇವಸಮುದ್ರ, ‘ಈ ಶೀರ್ಷಿಕೆ ಗೀತೆ ನಮ್ಮ ಇಡೀ ತಂಡದ ಅಚ್ಚುಮೆಚ್ಚು. ನಿರ್ದೇಶಕರ ಸಾಹಿತ್ಯ, ಸೂರಜ್ ಜೋಯಿಸ್ ಅವರ ಸಂಗೀತ ಹಾಗೂ ಜಸ್ಕರಣ್ ಸಿಂಗ್ ಅವರ ಗಾಯನ ತುಂಬಾ ಚೆನ್ನಾಗಿದೆ. ಈ ಹಾಡಿಗೂ ಮುಂಚೆ ಒಂದು ಗ್ಲಿಂಪ್ಸ್ ಸಹ ಬಿಡುಗಡೆ ಮಾಡಿದ್ದೇವೆ. ಕೆಲವು ನಿಮಿಷಗಳ ಗ್ಲಿಂಪ್ಸ್ ನಲ್ಲೇ ನಿರ್ದೇಶಕರು ಚಿತ್ರದ ಕಥೆ ಹೇಳಿದ್ದಾರೆ. ನಮ್ಮ ಚಿತ್ರವನ್ನು ನವೆಂಬರ್ 13 ರಂದು ಬಿಡುಗಡೆ ಮಾಡುತ್ತಿದ್ದೇವೆ. ಪ್ರೇಕ್ಷಕರ ಪ್ರೋತ್ಸಾಹ ಸದಾ ಇರಲಿ’ ಎಂದರು.

ನಿರ್ದೇಶಕ ಮನೋಜ್ ಪಿ ನಡಲುಮನೆ ಮಾತನಾಡಿ, ‘ಇದು ನಾವು ಸಂಯೋಜನೆ ಮಾಡಿದ ಮೊದಲ ಗೀತೆ. ಶೀರ್ಷಿಕೆ ಅಂತಿಮ ಆದ ತಕ್ಷಣ ಈ ಹಾಡನ್ನು ಸಂಯೋಜನೆ ಮಾಡಲಾಯಿತು. ನನಗೆ ಈ ಹಾಡಿನ ಸಾಹಿತ್ಯ ಬಹಳ ಖುಷಿಕೊಟ್ಟಿದೆ. ಚಿತ್ರತಂಡದ ಸಹಕಾರದಿಂದ ಅಂದುಕೊಂಡ ಹಾಗೆ ಚಿತ್ರ ಬಂದಿದೆ. ಚಿತ್ರರಂಗದಲ್ಲಿ ಈಗ ‘ಪ್ರೇಮದ ಊರಲಿ’ ಮೂಲಕ ಯಶಸ್ಸಿನ ಕಾಮನಬಿಲ್ಲು ಮೂಡಿದೆ. ನಮ್ಮ ಚಿತ್ರ ಕೂಡಾ ಜನರಿಗೆ ಇಷ್ಟವಾಗುವ ಭರವಸೆ ಇದೆ’ ಎಂದರು.
ನಾಯಕ ರಾಹುಲ್ ಆರ್ಕಟ್, ‘ಶೀರ್ಷಿಕೆ ಗೀತೆ ಸುಮಧುರವಾಗಿದೆ. ಚಿತ್ರ ಸಹ ಎಲ್ಲರಿಗೂ ಪ್ರಿಯವಾಗಲಿದೆ’ ಎಂದರೆ, ‘ಇದು ನನಗೂ ಕೂಡ ಬಹಳ ಪ್ರಿಯವಾದ ಗೀತೆ’ ಎಂದು ನಾಯಕಿ ಕಾಶಿಮಾ ಹೇಳಿದರು.
‘ನೀ ನಂಗೆ ಅಲ್ಲವಾ’ ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನವಿದೆ.


