ಇತ್ತೀಚೆಗೆ ‘ಅಮೇರಿಕಾ ಅಮೇರಿಕಾ’ ಚಿತ್ರದ ಇಬ್ಬರು ನಾಯಕರಲ್ಲೊಬ್ಬರಾಗಿದ್ದ ನಿರೂಪ್ ಭಂಡಾರಿ, ಇದೀಗ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಎಂಬ ಚಿತ್ರದಲ್ಲಿ ನಿರೂಪ್ ನಟಿಸುತ್ತಿರುವ ಸುದ್ದಿ ಎರದು ವರ್ಷಗಳ ಹಿಂದೆಯೇ ಬಂದಿತ್ತು. ಈಗ ಚಿತ್ರ 2027ರ ಜನವರಿ 22ರಂದು ಬಿಡುಗಡೆ ಆಗುತ್ತಿದ್ದು, ಚಿತ್ರದ ಟೀಸರ್ ಲಹರಿ ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆ ಆಗಿದೆ.
ಅಂಕಿತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ, ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರವನ್ನು ನಿರ್ಮಿಸಿದ್ದು, ಸಚಿನ್ ವಾಲಿ ನಿರ್ದೇಶನದಲ್ಲಿ ಮೂಡಿಬಂದಿದೆ. ವಿಶೇಷವೆಂದರೆ, ಶಿವರಾಜಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಟೀಸರ್ಗೆ ಧ್ವನಿ ನೀಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರದಲ್ಲಿ ಹರಿಶ್ಚಂದ್ರನಾಗಿ ಹಿರಿಯ ನಟ ಸಾಯಿಕುಮಾರ್ ನಟಿಸಿದ್ದಾರೆ. ‘ರಂಗಿ ತರಂಗ’ ಚಿತ್ರದ ನಂತರ ನಿರೂಪ್ ಭಂಡಾರಿ ಮತ್ತು ಸಾಯಿಕುಮಾರ್ ಜೊತೆಯಾಗಿ ನಟಿಸಿರುವ ಚಿತ್ರವಿದು. ಇನ್ನು, ನಾಯಕಿಯರಾಗಿ ಬೃಂದಾ ಆಚಾರ್ಯ ಮತ್ತು ಅಂಕಿತಾ ಅಮರ್ ನಟಿಸಿದ್ದಾರೆ.

‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಟೀಸರ್ ಬಿಡುಗಡೆ ನಂತರ ಮಾತನಾಡಿದ ಸಾಯಿಕುಮಾರ್, ‘ರಾಜ ಹರಿಶ್ಚಂದ್ರ ಕಾಲದಿಂದಲೂ ಈ ಹೆಸರಿಗೆ ಒಂದು ದೊಡ್ಡ ಗೌರವ ಮತ್ತು ತೂಕವಿದೆ. ಕಥೆ ಕೇಳಿದ ತಕ್ಷಣ ನನಗೆ ತುಂಬಾ ಇಷ್ಟವಾಯಿತು. ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಹರಿಶ್ಚಂದ್ರ, ನಾನು ಸತ್ಯವನ್ನೇ ಹೇಳುತ್ತೇನೆ. ಇದೊಂದು ಭಾವನಾತ್ಮಕವಾದ ಸಿನಿಮಾ. ಶಿವಣ್ಣ ಅವರನ್ನು ಭೇಟಿಯಾದಾಗ ಈ ಕಥೆ ಹಾಗೂ ಪಾತ್ರದ ಬಗ್ಗೆ ಪ್ರಸ್ತಾಪಿಸಿದೆ. ಅವರು ತಕ್ಷಣವೇ ನಿರೂಪ್ಗೆ ಕರೆ ಮಾಡಲು ಹೇಳಿ, ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಪಾತ್ರ ಮಾಡಲು ಒಪ್ಪಿಕೊಂಡರು. ಅವರ ಉಪಸ್ಥಿತಿ ಸಿನಿಮಾಗೆ ಬಹುದೊಡ್ಡ ಬಲ ತಂದಿದೆ’ ಎಂದರು.
ನಾಯಕ ನಟ ನಿರೂಪ್ ಭಂಡಾರಿ ಮಾತನಾಡಿ, ‘ಈ ಸಿನಿಮಾಗಾಗಿ ನನ್ನ ಜೀವನದ ಎರಡು ವರ್ಷಗಳನ್ನು ಮೀಸಲಿಟ್ಟಿದ್ದೇನೆ. ನಿರ್ದೇಶಕ ಸಚಿನ್ ಕಥೆ ಹೇಳಿದಾಗ ಇಷ್ಟವಾಯಿತು, ನಾವಿಬ್ಬರೂ ಜೊತೆಯಾಗಿ ಕುಳಿತು ಎರಡ್ಮೂರು ತಿಂಗಳು ಲ್ಯಾಪ್ಟಾಪ್ನಲ್ಲೇ ಸಂಪೂರ್ಣ ಚಿತ್ರಕಥೆಯನ್ನು ಹೊಸದಾಗಿ ತಿದ್ದಿ ತೀಡಿದೆವು. ಹರಿಶ್ಚಂದ್ರನ ಪಾತ್ರಕ್ಕೆ ಸಾಯಿಕುಮಾರ್ ಸಾರ್ ಸೂಕ್ತ ಎಂದು ನಮ್ಮ ತಂದೆ ಸೂಚಿಸಿದರು. ಇನ್ನು ಶಿವಣ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದ ಸಮಯದಲ್ಲೂ ಅವರು ತೋರಿದ ಬದ್ಧತೆ, ಉತ್ಸಾಹ ಅದ್ಭುತ. ಪೂಣೆಯಿಂದ ಬಂದು ಕನ್ನಡದಲ್ಲೇ ಮೊದಲ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಅಂಕಿತ್ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.
ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಬೃಂದಾ ಆಚಾರ್ಯ ಮಾತನಾಡಿ, ‘ಸಾಯಿಕುಮಾರ್ ಸರ್ ಅವರಂತಹ ದಿಗ್ಗಜರ ಜೊತೆ ವೇದಿಕೆ ಹಂಚಿಕೊಳ್ಳುತ್ತಿರುವುದೇ ಒಂದು ಸೌಭಾಗ್ಯ’ ಎಂದರೆ, ಮತ್ತೊಬ್ಬ ನಾಯಕಿ ಅಂಕಿತಾ ಅಮರ್ ಮಾತನಾಡುತ್ತಾ, ‘ಚಿತ್ರದಲ್ಲಿ ನಾನು ಗಾನ’ ಎಂಬ ಪತ್ರಕರ್ತೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಸಿನಿಮಾ ಕೇವಲ ಮನರಂಜನೆಯಷ್ಟೇ ಅಲ್ಲದೆ ತಂದೆ-ತಾಯಂದಿರ ಮೇಲಿನ ಪ್ರೀತಿ ಮತ್ತು ಸಂಸ್ಕಾರದ ಮಹತ್ವವನ್ನು ಸಾರುತ್ತದೆ’ ಎಂದರು.
ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಹಾಗೂ ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣವಿರುವ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ, ಶೌರ್ಯ, ಅಭಿಷೇಕ್ ಶ್ರೀಕಾಂತ್, ಅಶ್ವಿನ್ ಹಾಸನ್ ಮುಂತಾದವರು ನಟಿಸಿದ್ದಾರೆ.


