‘ಒಡಹುಟ್ಟಿದವಳ’ ಜೊತೆಗೆ ವಿಜಯ್‍ ರಾಘವೇಂದ್ರ ಹಾಡು …

ಚಂದನವನ, ಸಿನಿ ಸುದ್ದಿ

ವಿಜಯ್‍ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ಈ ಮಧ್ಯೆ, ಅವರು ‘ಮಹಾನ್‍’ ಚಿತ್ರವನ್ನು ಸದ್ದಿಲ್ಲದೆ ಮುಗಿಸಿದ್ದಾರೆ. ಇಷ್ಟು ದಿನ ಸದ್ದಿಲ್ಲದೆ ಕೆಲಸ ಮಾಡಿಕೊಂಡಿದ್ದ ಚಿತ್ರತಂಡ, ಇದೀಗ ಚಿತ್ರದ ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಶುರು ಮಾಡಿದ್ದಾರೆ.

ಪಿ.ಸಿ. ಶೇಖರ್ ನಿರ್ದೇಶನದ, ಆಕಾಶ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬೂದೂರು ನಿರ್ಮಿಸಿರುವ ಹಾಗೂ ವಿಜಯ್ ರಾಘವೇಂದ್ರ ನಾಯಕರಾಗಿ ನಟಿಸಿರುವ ‘ಮಹಾನ್’ ಚಿತ್ರದ ‘ಒಡಹುಟ್ಟಿದವಳು’ ಮೊದಲ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಹಾಗೂ ಸಿದ್ ಶ್ರೀರಾಮ್ – ಲಹರಿ ಹಾಡಿರುವ ಸೋದರ – ಸೋದರಿ ಬಾಂಧವ್ಯದ ಈ ಹಾಡು ಸಾರೆಗಮ ಕನ್ನಡ ಮ್ಯೂಸಿಕ್‍ ಚಾನಲ್‍ನಲ್ಲಿ ಬಿಡುಗಡೆ ಆಗಿದೆ.

ತಮ್ಮ 22 ವರ್ಷಗಳ ಸಿನಿ ಜರ್ನಿಯಲ್ಲಿ ‘ಮಹಾನ್’ ಚಿತ್ರ ವಿಭಿನ್ನ ಎಂದ ಪಿ.ಸಿ. ಶೇಖರ್‍, ‘’ಮಹಾನ್’ ಎಂದರೆ ರೈತ. ಇದು ಕೂಡ ರೈತನ ಕುರಿತಾದ ಚಿತ್ರ. ಜೊತಗೆ ಅಣ್ಣ – ತಂಗಿ ಬಾಂಧವ್ಯ ಕೂಡ ಇದೆ. ಈ ಚಿತ್ರದಲ್ಲಿ ನಾಯಕನ ಪಾತ್ರ ಬರೆಯಬೇಕಾದರೆ, ನನ್ನ ಕಣ್ಣಿದುರು ಬಂದಿದ್ದೆ ವಿಜಯ ರಾಘವೇಂದ್ರ. ಅವರು ಈ ಪಾತ್ರಕ್ಕಾಗಿ ನ್ಯಾಯ ಒದಗಿಸಿದ್ದಾರೆ. ಕನ್ನಡದವರೆ ಆದ ವರ್ಷ ಬೊಳ್ಳಮ್ಮ, ವಿಜಯ್ ರಾಘವೇಂದ್ರ ಅವರ ತಂಗಿಯಾಗಿ ನಟಿಸಿದ್ದಾರೆ. ಶಿವರಾಜಕುಮಾರ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವಿನಾಶ್‍, ಶರತ್ ಲೋಹಿತಾಶ್ವ, ಮಿತ್ರ ಅವರು ಸೇರಿದಂತೆ ಬಹು ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಾನು ಅಧ್ಯಯನ ಮಾಡಿದ ಕಾಲೇ ಜಿನ ಅಧ್ಯಾಪಕರೆ ಈ ಚಿತ್ರದ ನಿರ್ಮಾಪಕರಾಗಿರುವುದು ವಿಶೇಷ’ ಎಂದರು.

ಪಿ.ಸಿ. ಶೇಖರ್ ಜೊತೆಗೆ ಕೆಲಸ ಮಾಡುವುದು ವಿಜಯ್‍ ರಾಘವೇಂದ್ರ ಅವರ ಬಹಳ ದಿನಗಳ ಆಸೆಯಂತೆ.’ ಶೇಖರ್ ನನ್ನ ಚಿತ್ರವೊಂದರ ಟ್ರೇಲರ್ ನೋಡಿ ಫೋನ್ ಮಾಡಿ ಮೆಚ್ಚುಗೆ ಸೂಚಿಸಿದರು. ನಂತರ ಈ ಚಿತ್ರದ ಕುರಿತ ನನ್ನ ಜೊತೆ ಮಾತನಾಡಿದರು. ನಾನು ಇದುವರೆಗೂ ಮಾಡಿರದ ಪಾತ್ರ. ಇಂದು ಬಿಡುಗಡೆಯಾಗಿರುವ ಸೋದರ – ಸೋದರಿ ಬಾಂಧವ್ಯದ ಹಾಡು ನನ್ನ ಸೋದರಿ ವೀಣಾ ಅವರಿಗೆ ಬಹಳ ಇಷ್ಟವಾಗಿದೆ. ಅವರು ಇಂದು ಈ ಸಮಾರಂಭಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ’ ಎಂದರು ವಿಜಯ್ ರಾಘವೇಂದ್ರ.

ಬೇರೆ ಭಾಷೆಗಳಲ್ಲಿ ಹೆಚ್ಚು ಜನಪ್ರಿಯರಾಗಿರುವ ಕನ್ನಡತಿ ವರ್ಷ ಬೊಳ್ಳಮ್ಮ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ನಾನು ಕನ್ನಡದವಳು ಅಂತ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ನನಗೆ ಸಣ್ಣ-ಪುಟ್ಟ ಅವಕಾಶಗಳು ಸಿಗುತ್ತಿದ್ದವಾದರೂ, ಒಂದೊಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಹಾಗಾಗಿ, ನಾನು ಕನ್ನಡ ಚಿತ್ರದಲ್ಲಿ ನಟಿಸಲು ಹತ್ತು ವರ್ಷ ಬೇಕಾಯಿತು’ ಎಂದರು.

‘ಮಹಾನ್‍’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ವರ್ಷ ಬೊಳ್ಳಮ್ಮ. ರಾಧಿಕಾ ನಾರಾಯಣ್, ಮಿತ್ರ, ಅವಿನಾಶ್‍, ಶರತ್‍ ಲೋಹಿತಾಶ್ವ, ರಂಗಾಯಣ ರಘು ಮುಂತಾದವರು ನಟಿಸಿದ್ದು, ಅತಿಥಿ ಪಾತ್ರದಲ್ಲಿ ಶಿವರಾಜಕುಮಾರ್‍ ಕಾಣಿಸಿಕೊಂಡಿದ್ದಾರೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವೈದಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ನಾವು ಬೆಳೆಯೋದು ಬರೀ ಟೊಮ್ಯಾಟೋ; ‘ಫಾದರ್’ ಹಾಡು ಬಿಡುಗಡೆ