ಮಂಗಳಮುಖಿಯರ ಬದುಕು, ಹೋರಾಟ ಸಾರುವ ‘ಭಾವಾಂತರ’

ಚಂದನವನ, ಸಿನಿ ಸುದ್ದಿ

ಬಾಲನಟನಾಗಿ ಗುರುತಿಸಿಕೊಂಡಿದ್ದ, ಆ ನಂತರ ಗಾಯಕ-ಸಂಗೀತ ನಿರ್ದೇಶಕರಾದ ಕಾರ್ತಿಕ್‍ ಶರ್ಮ, ಈಗ ಸದ್ದಿಲ್ಲದೆ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಗೀತ ಸಂಯೋಜಿಸುವುದರ ಜೊತೆಗೆ ನಟನೆ, ನಿರ್ದೇಶನವನ್ನೂ ಮಾಡಿದ್ದಾರೆ. ಅದೇ ‘ಭಾವಾಂತರ’.

ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ಜೊತೆಗೆ ಮಂಗಳಮುಖಿಯರ (ಟ್ರಾನ್ಸ್‌ಜೆಂಡರ್) ಸಮುದಾಯದ ಬದುಕು, ಭಾವನೆಗಳು, ನೋವು ಹಾಗೂ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ತನ್ವಿ ರಾವ್, ರಾಧೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಟ್ರೇಲರ್‍ ಇತ್ತೀಚೆಗೆ ಹೊಂಬಾಳೆ ಮ್ಯೂಸಿಕ್‍ ಚಾನಲ್‍ನಲ್ಲಿ ಬಿಡುಗಡೆ ಆಗಿದೆ.

‘ಭಾವಾಂತರ’ ಚಿತ್ರದ ಬಗ್ಗೆ ಸ್ವತಃ ವಿವರ ಹಂಚಿಕೊಂಡಿರುವ ಕಾರ್ತಿಕ್ ಶರ್ಮಾ, ‘ಹಲವು ವರ್ಷಗಳ ಹಿಂದೆ ಕೇಳಿದ್ದ ಹಳ್ಳಿಯೊಂದರ ವಿಶಿಷ್ಟ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಎಳೆಯನ್ನಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಇದುವರೆಗೂ ಬಂದಿರುವ ಮಂಗಳಮುಖಿಯರ ಕಥೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಬಹಳಷ್ಟು ಜನರಿಗೆ ತಿಳಿಯದ ಅಚ್ಚರಿಯ ಆಚರಣೆ ಹಾಗೂ ವಾಸ್ತವ ಸಂಗತಿಗಳು ಸಿನಿಮಾದಲ್ಲಿರಲಿವೆ’ ಎಂದರು.

‘ಭಾವಾಂತರ’ ಚಿತ್ರದಲ್ಲಿ ಕಾರ್ತಿಕ್‍ ಮತ್ತು ತನ್ವಿ ಜೊತೆಗೆ ಪ್ರಣವ್ ಶ್ರೀಧರ್, ಶ್ರೀ ವೈಷ್ಣವ್, ವೇದಾ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೆನಡಾದಲ್ಲಿ ಛಾಯಾಗ್ರಹಣ ಕಲಿತು, ಮರಾಠಿ ಚಿತ್ರಗಳು ಹಾಗೂ ಜಾಹೀರಾತುಗಳಿಗೆ ಕೆಲಸ ಮಾಡಿರುವ ಅನುಭವ ಹೊಂದಿರುವ ಕಾರ್ತಿಕ್ ಅವರ ಶಾಲಾ ಗೆಳೆಯ ಸಾಗರ್ ಆಥಡ್ಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಹೊಂಬಾಳೆ ಮ್ಯೂಸಿಕ್ ಸಂಸ್ಥೆಯು ‘ಭಾವಾಂತರ’ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ.

ಮಂಗಳೂರು – ಗೋವಾ ಮಾರ್ಗದಲ್ಲೊಂದು ರೋಚಕ ಥ್ರಿಲ್ಲರ್!