‘ವಿಐಪಿ’ಯಾದ ವಸಿಷ್ಠ; ಜೊತೆಗೆ ‘ರಾಯಲ್‍ ಸ್ಟಾರ್’ ಎಂಬ ಬಿರುದು

ಚಂದನವನ, ಸಿನಿ ಸುದ್ದಿ

ವಸಿಷ್ಠ ಸಿಂಹ ಅಭಿನಯದ ಹಲವು ಚಿತ್ರಗಳು ಬಿಡುಗಡೆಯಾಗಬೇಕಿವೆ. ಇದರ ಮಧ್ಯೆ, ಅವರು ಇನ್ನೂ ಒಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರದ ಶೀರ್ಷಿಕೆಯನ್ನು ಮಕರ ಸಂಕ್ರಾಂತಿಯ ದಿನ ಅನಾವರಣ ಮಾಡಲಾಗಿದೆ.

ರಾಗಿಣಿ ಅಭಿನಯದ ‘ಸಾರಿ – ಕರ್ಮ ರಿಟರ್ನ್ಸ್’ ಚಿತ್ರವನ್ನು ನಿರ್ದೇಶಿಸಿರುವ ಬ್ರಹ್ಮ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರವು ವಿಭಿನ್ನ ಕಥೆ ಹೊಂದಿದೆಯಂತೆ. ಮತ್ತೊಂದು ವಿಶೇಷವೆಂದರೆ, ವಸಿಷ್ಠ ಸಿಂಹ ಅಭಿಮಾನಿಗಳು ಅವರಿಗೆ ‘ರಾಯಲ್ ಸ್ಟಾರ್’ ಎಂಬ ಬಿರುದು ನೀಡಿದ್ದಾರೆ. ವಸಿಷ್ಠ ಸಿಂಹ ಈ ಚಿತ್ರದಿಂದ ‘ರಾಯಲ್ ಸ್ಟಾರ್’ ವಸಿಷ್ಠ ಸಿಂಹ ಆಗಿ ಗುರುತಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ಸುತ್ತಮುತ್ತಾ ‘ವಿಐಪಿ’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಬೆಂಗಳೂರು ನಂತರ ಕೊಡಗು, ಸಕಲೇಶಪುರದಲ್ಲೂ ಚಿತ್ರೀಕರಣ ನಡೆಯಲಿದೆ.

‘ವಿಐಪಿ’ ಒಂದು ಕ್ರೈಮ್‍ ಥ್ರಿಲ್ಲರ್‍ ಆಗಿದ್ದು, ಮೋಹನ್‍ ಕುಮಾರ್‍ ಕಥೆ ಬರೆದಿದ್ದಾರೆ. ರಾಜೀವ್ ಗಣೇಶನ್ ಚಿತ್ರಕಥೆ ಬರೆದು ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.  ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸತೀಶ್ ಚಂದ್ರಯ್ಯ ಸಂಕಲನ ಹಾಗೂ ‘ಕೆಜಿಎಫ್’ ಖ್ಯಾತಿಯ ವಿಕ್ರಮ್ ಮೋರ್ ಸಾಹಸ  ನಿರ್ದೇಶನ ಈ ಚಿತ್ರಕ್ಕಿದೆ.

ಕಲಾಸೃಷ್ಠಿ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು. ಈ ಚಿತ್ರಕ್ಕೆ ಅಫ್ಜಲ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಹೊಡಿರೋ ಸೆಲ್ಯೂಟ್‍’; ‘ಶಭ್ಬಾಷ್‍’ ಚಿತ್ರಕ್ಕೆ ಚಾಲನೆ