ನಾವು ಬೆಳೆಯೋದು ಬರೀ ಟೊಮ್ಯಾಟೋ; ‘ಫಾದರ್’ ಹಾಡು ಬಿಡುಗಡೆ

ಚಂದನವನ, ಸಿನಿ ಸುದ್ದಿ

‘ನಾವು ಬೆಳೆಯೋದು ಬರೀ ಟೊಮ್ಯಾಟೋ. ರೇಟ್‍ ಇರಲಿ, ಬಿಡಲಿ. ಬಿಡ್ಲಿ, ಅದನ್ನೇ ಬೆಳೀತೀವಿ. ಈಗಂತೂ ಟೊಮ್ಯಾಟೋಗೆ ಒಳ್ಳೆಯ ರೇಟ್‍ ಬಂದಿದೆ. ಎಲ್ಲರೂ ತಗೋತಿದ್ದಾರೆ, ಆರ್‍. ಚಂದ್ರುಗೆ ಲಾಟರಿ ಹೊಡೆಯಲಿ’ ಎಂದರು ‘ಡಾರ್ಲಿಂಗ್‍’ ಕೃಷ್ಣ.

ಕೃಷ್ಣ ಏನಾದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರಾ? ನಟನೆ ಜೊತೆಗೆ ಪಾರ್ಟ್ ಟೈಮ್‍ ಕೃಷಿ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲ. ಕೃಷ್ಣ ಹೇಳಿದ್ದು ಸಹ ಸಿನಿಮಾ ಬಗ್ಗೆಯೇ. ಈಗ ‘ಪ್ರೇಮದ ಊರಲ್ಲಿ’ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಕೃಷ್ಣ ಅಭಿನಯದ ‘ಫಾದರ್’ ಸಹ ಬಿಡುಗಡೆಗೆ ಸಜ್ಜಾಗಿದೆ. ಎರಡೂ ಸಹ ಫ್ಯಾಮಿಲಿ, ಸೆಂಟಿಮೆಂಟ್‍ ಚಿತ್ರಗಳು. ಕೃಷ್ಣ ಮೊದಲಿನಿಂದಲೂ ಇಂಥ ಸಿನಿಮಾಗಳಿಗೆ ಜನಪ್ರಿಯರು. ಈಗಲೂ ಅದು ಮುಂದುವರೆದಿರುವುದರಿಂದ, ಫ್ಯಾಮಿಲಿ ಚಿತ್ರಗಳನ್ನು ಟೊಮ್ಯಾಟೋಗೆ ಹೋಲಿಸಿದ್ದಾರೆ. ಫ್ಯಾಮಿಲಿ ಚಿತ್ರಗಳಿಗೆ ಜನ ಬರುತ್ತಿರುವುದರಿಂದ, ತಮ್ಮ ಚಿತ್ರಕ್ಕೂ ದೊಡ್ಡ ಮಟ್ಟದಲ್ಲಿ ಜನ ಬರುತ್ತಾರೆ ಮತ್ತು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.

ಅಂದ ಹಾಗೆ, ಕೃಷ್ಣ ಮಾತಾಡಿದ್ದು, ‘ಫಾದರ್’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ. ಆರ್.ಸಿ ಸ್ಟುಡಿಯೋಸ್ ಸಂಸ್ಥೆಯಡಿ ಆರ್. ಚಂದ್ರು ಮತ್ತು ಯಮುನಾ ಚಂದ್ರು ನಿರ್ಮಾಣ ಮಾಡಿರುವ, ರಾಜಮೋಹನ್‍ ಕಥೆ ಬರೆದು ನಿರ್ದೇಶಿಸಿರುವ ‘ಫಾದರ್’ ಚಿತ್ರದ ‘ಗಗನದ ನೇಸರ …’ ಎಂಬ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಅಪ್ಪ – ಮಗನ ಬಾಂಧವ್ಯ ಸಾರುವ ಈ ಹಾಡಿನ ಬಿಡುಗಡೆ ಸಮಾರಂಭ ನೆರವೇರಿತು. ಮಂಜುನಾಥ್ ಮಾಗೋದಿ ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಮಾಜಿ ಸಚಿವರಾದ ಎಚ್ ಎಂ ರೇವಣ್ಣ ಹಾಗೂ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬಿಡುಗಡೆ ಮಾಡಿದರು.

‘ಫಾದರ್‍’ ಚಿತ್ರದ ಕುರಿತು ಮಾತನಾಡಿದ ಚಂದ್ರು, ‘ರಾಜಾಮೋಹನ್ ಒಂದು ಮನಮುಟ್ಟುವ ಕಥೆಯನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರವನ್ನು ಎ.ಆರ್ ರೆಹಮಾನ್ ಸ್ಟುಡಿಯೋದಲ್ಲಿ ನನಗೆ ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ತೋರಿಸಿದರು. ಚಿತ್ರ ನೋಡಿದ ಮೇಲೆ ಕಣ್ಣಂಚಲಿ ನೀರು ಬಂತು. ತಕ್ಷಣ ನಮ್ಮ ಅಪ್ಪನಿಗೆ ಫೋನ್ ಮಾಡಿದೆ. ನಿರ್ದೇಶಕರು ಕಥೆಯನ್ನು ಬಹಳ ಚೆನ್ನಾಗಿ ಹೇಳಿದ್ದರು. ಅದಕ್ಕಿಂತ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಅಪ್ಪ – ಮಗನ ಪಾತ್ರದಲ್ಲಿ ಪ್ರಕಾಶ್ ರಾಜ್ ಹಾಗೂ ‘ಡಾರ್ಲಿಂಗ್’ ಕೃಷ್ಣ ಅವರ ಅಭಿನಯ ಚೆನ್ನಾಗಿದೆ. ಚಿತ್ರ ಕೂಡ‌ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ’ ಎಂದರು.

ಕೃಷ್ಣ ಮಾತನಾಡಿ, ‘ರಾಜಾಮೋಹನ್ ಅವರು ಈ ಕಥೆ ಹೇಳಿದಾಗ ಬಹಳ ಇಷ್ಟವಾಗಿತ್ತು‌. ನಾನು ಹಾಗೂ ಮಿಲನಾ ಕೇಳಿದೆವು. ನಿರ್ದೇಶಕರು ಕಥೆ ಹೇಳಿದ್ದು ತಮಿಳಿನಲ್ಲಿ. ನನಗೆ ತಮಿಳು ಬರಲ್ಲ. ಮಿಲನ ಅವರಿಗೆ ಬರುತ್ತದೆ. ಅವರು ನನಗೆ ಕಥೆ ಬಗ್ಗೆ ವಿವರಿಸುತ್ತಿದ್ದರು. ನಮ್ಮ ಸುತ್ತಲ್ಲಿನಲ್ಲೇ ನಡೆಯುವ ಕಥೆಯನ್ನು ನಿರ್ದೇಶಕ ರಾಜಾಮೋಹನ್ ಬಹಳ ಸೊಗಾಸಾಗಿ ಹೇಳುತ್ತಾರೆ. ಅವರು ಕೆಲವು ಪಾತ್ರಗಳ ಬಗ್ಗೆ ಹೇಳುತ್ತಿದ್ದಾಗ ನನ್ನ ಕಣ್ಣೆದುರು ಅಮೃತ ಅಯ್ಯಂಗಾರ್ ಹಾಗೂ ನಾಗಭೂಷಣ ಅವರೆ ಬಂದರು. ನಾನು ಚಂದ್ರು ಅವರಿಗೆ ಹೇಳಿದೆ. ಅವರು ಸಹ ಒಪ್ಪಿಕೊಂಡರು. ಅಪ್ಪ – ಮಗನ ಕುರಿತಾದ ಈ ಚಿತ್ರ ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮಾಡುವುದಿಲ್ಲ’ ಎಂದರು.

‘ಫಾದರ್‍’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಕಾಶ್ ರಾಜ್ ಹಾಗೂ ‘ಡಾರ್ಲಿಂಗ್’ ಕೃಷ್ಣ ಅಭಿನಯಿಸಿದ್ದಾರೆ. ನಾಯಕಿಯಾಗಿ ಅಮೃತ ಅಯ್ಯಂಗಾರ್ ನಟಿಸಿದ್ದಾರೆ. ನಾಗಭೂಷಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ‘ಫಾದರ್’ ಚಿತ್ರವು ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನವೆಂಬರ್ 13ಕ್ಕೆ ‘ನೀ ನಂಗೆ ಅಲ್ಲವಾ’; ಶೀರ್ಷಿಕೆ ಗೀತೆ ಬಿಡುಗಡೆ