ಈ ವರ್ಷದ ಆರಂಭದಲ್ಲೇ ಚಿತ್ರ ಬಿಡುಗಡೆ ಆಗುತ್ತದೆ ಎಂದು ‘ಕೊರಗಜ್ಜ’ ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಕಳೆದ ವರ್ಷವೇ ಘೋಷಿಸಿದ್ದರು. 3ಡಿ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಕೆಲವು ಕಾರಣಗಳಿಂದ ಚಿತ್ರ ವಿಳಂಬವಾಯಿತು. ಈಗ ಚಿತ್ರದ ಬಿಡುಗಡೆ ಹತ್ತಿರ ಬಂದಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ವಿಶೇಷವೆಂದರೆ, ಇದುವರೆಗೂ ಯಾರೂ ಮಾಡದಂತ ರೀತಿಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ‘ಕೊರಗಜ್ಜ’ ಚಿತ್ರದ ಸ್ತಬ್ದ ಚಿತ್ರ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಸಾಗಿಬಂದು, ಬನ್ನಿ ಮಂಟಪದ ಬಳಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಟ್ರೈಲರ್ ಬಿಡುಗಡೆ ಮಾಡುವ ಮುಖಾಂತರ ಹೊಸ ಹೆಜ್ಜೆ ಇಟ್ಟಿದೆ.
ಮೈಸೂರು ಜಂಬೂ ಸವಾರಿಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಚಲನಚಿತ್ರವೊಂದರ ಸ್ತಬ್ದ ಚಿತ್ರ ಪಾಲ್ಗೊಂಡಿದೆ. 50ಕ್ಕೂ ಹೆಚ್ಚು ಟ್ಯಾಬ್ಲೋಗಳ ಭವ್ಯ ಮೆರವಣಿಗೆಯಲ್ಲಿ ‘ಕೊರಗಜ್ಜ’ ಚಿತ್ರದ ಟ್ಯಾಬ್ಲೋ ಅಂಬಾರಿಯ ಸಮೀಪವೇ ಸಾಗಿಬರುವ ಅಪರೂಪದ ಗೌರವಕ್ಕೆ ಸಾಕ್ಷಿಯಾಯಿತು. ಕೊನೆಗೆ ಬನ್ನಿ ಮಂಟಪದ ಬಳಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಯ್ತು.

ನಿರ್ದೇಶಕ ಸುಧೀರ್ ಅತ್ತಾವರ್, ಖ್ಯಾತ ನಟ ಕಬೀರ್ ಬೇಡಿ, ಮೀನಾಕ್ಷಿ ಶೇಷಾದ್ರಿ, ಹಿರಿಯ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಸಂಕಲನಕಾರ ವಿದ್ಯಾಧರ್ ಶೆಟ್ಟಿ ಮುಂತಾದವರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈಗ ಈ ಟ್ರೇಲರ್ ಜೀ ಮ್ಯೂಸಿಕ್ ಸೌಥ್ ಯೂಟ್ಯೂಬ್ ಚಾನಲ್ನಲ್ಲಿ ಲಭ್ಯವಿದೆ.
ಸಕ್ಸಸ್ ಫಿಲ್ಮ್ಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ‘ಕೊರಗಜ್ಜ’ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರಕ್ಕೆ ಸುಧೀರ್ ಅತ್ತಾವರ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಬೀರ್ ಬೇಡಿ, ಭವ್ಯ, ಶ್ರುತಿ, ಸಂದೀಪ್ ಸೋಪರ್ಕರ್ ಮುಂತಾದವರು ಅಭಿನಯಿಸಿದ್ದಾರೆ. ‘ಕೊರಗಜ್ಜ’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಗೋಪಿಸುಂದರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.


