ಚಿತ್ರ ವಿಮರ್ಶೆ: ಕಗ್ಗತ್ತಲೆಯಲ್ಲಿ ಇರುವವರಿಗೆ ‘ಶ್ರೀಕೃಷ್ಣ’ನ ಬೆಳಕು

ಚಂದನವನ, ಚಿತ್ರ ವಿಮರ್ಶೆ, ಸಿನಿ ಸುದ್ದಿ

ಚಿತ್ರ: ಶ್ರೀಕೃಷ್ಣ
ನಿರ್ಮಾಣ: ಶಂಕರ್ ರಾಜ ವರ್ಮ
ನಿರ್ದೇಶನ: ಶಂಕರ್ ರಾಜ ವರ್ಮ
ತಾರಾಗಣ: ಶಂಕರ್ ರಾಜ ವರ್ಮ, ಚೈತ್ರಾ ತೋಟದ್‍, ಪ್ರದೀಪ್‍ ಪೂಜಾರಿ, ಭುವನ್‍ ಗೌಡ, ಸ್ನೇಹಾ, ಈಶ್ವರ್‍ ಶೆಟ್ಟಿ ಮುಂತಾದವರು

ಅವನು ‘ದೃಶ್ಯಂ’ನ ಜಾರ್ಜ್‍ ಕುಟ್ಟಿ ತರಹ ಪಕ್ಕಾ ಕಿಲಾಡಿ. ಸಿಕ್ಕಾಪಟ್ಟೆ ಕ್ರೈಂ ಥ್ರಿಲ್ಲರ್‍ ಚಿತ್ರಗಳನ್ನು ನೋಡಿ ಬೆಳೆದವನು. ಅದೇ ಅನುಭವದ ಮೇಲೆ ಎಂಥಾ ಪ್ರಕರಣವನ್ನಾದರೂ ಬಗೆಹರಿಸುವ ಶಕ್ತಿ ಇರುವವನು. ಒಮ್ಮೊಮ್ಮೆ ಪೊಲೀಸರು ಒಂದು ಕೇಸು ಬಗೆಹರಿಸಲಿಕ್ಕಾಗದೇ ತಲೆ ಮೇಲೆ ಕೈಹೊತ್ತು ಕೂತಿರುವಾಗ, ಅವನು ಅವರಿಗೆ ದಾರಿ ತೋರಿಸುವನು. ಹೀಗಿರುವಾಗ, ಅವನೇ ಒಂದು ಕೊಲೆ ಕೇಸಿನಲ್ಲಿ ಸಿಕ್ಕಿಬೀಳುತ್ತಾನೆ. ಕೊಲೆಗಾರನೆಂಬ ಆರೋಪ ಹೊತ್ತಿರುವ ಅವನು, ಹೇಗೆ ತನ್ನ ಬುದ್ಧಿಶಕ್ತಿಯಿಂದ ನಿರಪರಾಧಿ ಎಂದು ಸಾಬೀತು ಮಾಡುತ್ತಾನೆ ಎಂದು ಗೊತ್ತಾಗಬೇಕಿದ್ದರೆ ‘ಶ್ರೀಕೃಷ್ಣ’ ನೋಡಬೇಕು.

ಈ ಹಿಂದೆ, ‘ಬ್ರಹ್ಮರಾಕ್ಷಸ’ ಎಂಬ ಚಿತ್ರ ನಿರ್ದೇಶಿಸಿದ್ದರು ಶಂಕರ್‍ ರಾಜ ವರ್ಮ. ಕಾರಣಾಂತರಗಳಿಂದ, ಚಿತ್ರ ಬಿಡುಗಡೆ ಆಗದೇ ಇದ್ದಾಗ, ಅವರು ಮುಂದೇನು ಎಂದು ಕಂಗಾಲಾಗಿದ್ದರಂತೆ. ಹಾಗಿರುವಾಗಲೇ, ಅವರಿಗೆ ಭಗವಾನ್‍ ಕೃಷ್ಣನ ಮಾತೊಂದು ನೆನಪಾಯಿತಂತೆ. ಅದೇ ಖುಷಿಯಲ್ಲಿ ಅವರು ಇನ್ನೊಂದು ಹೊಸ ಚಿತ್ರ ಮಾಡಿದ್ದಾರೆ. ಅದೇ ‘ಶ್ರೀಕೃಷ್ಣ’. ಹಾಗಂತ ಈ ಚಿತ್ರಕ್ಕೂ ಶ್ರೀಕೃಷ್ಣನಿಗೂ ಯಾವುದೇ ಸಂಬಂಧವಿಲ್ಲ ಅಥವಾ ಭಗವದ್ಗೀತೆಯ ಯಾವುದೇ ಉಲ್ಲೇಖವಿಲ್ಲ. ನಾಯಕ ಟೆನ್ಶನ್‍ನಲ್ಲಿ ಕೂತಿರುವಾಗ, ಮುಂದೇನು ಮಾಡಬೇಕು ಎಂದು ಗೊತ್ತಾಗದೇ ಇರುವಾಗ ಚಿತ್ರದಲ್ಲಿ ಶ್ರೀಕೃಷ್ಣ ಕಾಣಿಸಿಕೊಳ್ಳುವುದು ಬಿಟ್ಟರೆ, ಮಿಕ್ಕಂತೆ ಅವರ ಪಾತ್ರವೇನಿಲ್ಲ. ಕೃಷ್ಣನ ಪ್ರೇರಣೆಯಿಂದ ಚಿತ್ರ ಶುರುವಾಗಿರುವುದರಿಂದ, ಚಿತ್ರಕ್ಕೆ ‘ಶ್ರೀಕೃಷ್ಣ’ ಎಂದು ಹೆಸರಿಡಲಾಗಿದೆ ಅಷ್ಟೇ.

ಶ್ರೀಕೃಷ್ಣ ಒಂದು ಸರಳವಾದ ಚಿತ್ರ. ಮೂರು ಅನಾಥರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರ ಹೇಳುತ್ತದೆ. ಇಲ್ಲಿ ನಾಯಕಿ ಸಹ ಅನಾಥೆ. ಎಲ್ಲರೂ ಜೊತೆಯಾಗಿರುವಾಗ, ಅವರ ಜೀವನದಲ್ಲೊಂದು ಘಟನೆ ನಡೆಯುತ್ತದೆ. ಇದರಿಂದ ಮೂವರು ಯುವಕರು ಜೈಲಿಗೂ ಹೋಗಬೇಕಾಗುತ್ತದೆ. ಜೈಲಿಂದ ತಪ್ಪಿಸಿಕೊಂಡು ಬಂದ ನಂತರ ಅವರು ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಚಿತ್ರದ ಕಥೆ.

ಚಿತ್ರದ ಒಂದೆಳೆ ಅದೆಷ್ಟು ಸರಳವಾಗಿದೆಯೋ, ಚಿತ್ರವೂ ಅಷ್ಟೇ ಸರಳವಾಗಿದೆ. ಇಲ್ಲಿ ಯಾವುದೇ ವೈಭವ, ಅದ್ದೂರಿತನ, ಆಡಂಬರ ಕಾಣಸಿಗುವುದಿಲ್ಲ. ಒಂದು ಸೀಮಿತ ಪ್ರದೇಶದಲ್ಲಿ, ಕೆಲವೇ ಪಾತ್ರಗಳ ನಡುವೆ ಕಥೆ ಸಾಗುತ್ತದೆ. ಇಲ್ಲಿ ನಾಯಕ ಸೇರಿದಂತೆ ಎಲ್ಲರೂ ಹೊಸಬರೇ. ಹಾಗಾಗಿ, ತಾಂತ್ರಿಕ ವಿಷಯಗಳ ಬಗ್ಗೆಯಾಗಲೀ, ಅಭಿನಯದ ಬಗ್ಗೆಯಾಗಲೀ ಹೆಚ್ಚು ನಿರೀಕ್ಷಿಸುವುದು ಕಷ್ಟ. ಒಂದು ಚಿತ್ರ ಮಾಡಬೇಕು, ಚಿತ್ರರಂಗದಲ್ಲಿ ಏನೋ ಸಾಧಿಸಬೇಕು ಎಂಬ ಅದಮ್ಯ ಉತ್ಸಾಹ ಬಿಟ್ಟರೆ, ತೆರೆಯ ಮೇಲೆ ಹೆಚ್ಚೇನೂ ಕಾಣುವುದಕ್ಕೆ ಸಾಧ್ಯವಿಲ್ಲ. ಚಿತ್ರದಲ್ಲಿ ಗಮನಸೆಳೆಯು ವಿಷಯವೆಂದರೆ, ಕ್ಲೈಮ್ಯಾಕ್ಸ್ನೊಂದಿಗೆ ಚಿತ್ರ ಶುರುವಾಗುತ್ತದೆ. ಆ ನಂತರ ಫ್ಲಾಶ್‍ಬ್ಯಾಕ್‍ ಮೂಲಕ ಕಥೆಯನ್ನು ಹೇಳಲಾಗಿದೆ.

ಇಲ್ಲಿ ಶಂಕರ್‍ ರಾಜ ವರ್ಮ ಹಲವು ಜವಬ್ದಾರಿಗಳನ್ನು ಹೆಗಲ ಮೇಲೆ ಹೊತ್ತಿದ್ದಾರೆ. ನಿರ್ಮಾಣ, ನಿರ್ದೇಶನ, ಬರವಣಿಗೆ, ನಟನೆ ಎಲ್ಲವೂ ಅವರದ್ದೇ. ಅದೇ ಚಿತ್ರದ ಪ್ಲಸ್ಸು ಮತ್ತು ಮೈನಸ್ಸು ಎಂದರೆ ತಪ್ಪಿಲ್ಲ. ಇಷ್ಟೆಲ್ಲಾ ಜವಾಬ್ದಾರಿಗಳ ಭಾರ ಅವರ ಮುಖದಲ್ಲಿ ಕಾಣುತ್ತದೆ. ಹಾಗಾಗಿ, ದುಗುಡದ ಸನ್ನಿವೇಶಗಳಿರಲಿ, ಸಂತೋಷದ ಸಮಯದಲ್ಲೂ ಅವರು ಸುಸ್ತಾಗಿಯೇ ಕಾಣುತ್ತಾರೆ. ಇಷ್ಟೆಲ್ಲಾ ಜವಾಬ್ದಾರಿಗಳ ಪೈಕಿ ಅವರು ಗಮನಸೆಳೆಯುವುದು ಬರವಣಿಗೆಯಲ್ಲಿ. ಹಾಗಂತ ಅದ್ಭುತ ಚಿತ್ರಕಥೆ ಏನಲ್ಲ. ಅಲ್ಲೂ ಸಮಸ್ಯೆಗಳಿವೆ. ಆದರೂ ಅವರು ಚಿತ್ರಕಥೆಯನ್ನು ಕಟ್ಟಿಕೊಟ್ಟಿರುವ ರೀತಿ ಗಮನಾರ್ಹ. ಮೊದಲಾರ್ಧ ಹೆಚ್ಚೇನೂ ಆಗುವುದಿಲ್ಲ. ದ್ವಿತೀಯಾರ್ಧ ಚಿತ್ರ ಟ್ರಾಕ್‍ಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಅವರು ಬರವಣಿಗೆಯಲ್ಲಿ ಹೆಚ್ಚು ಗಮನಹರಿಸಿದರೆ ಚೆಂದ.

ಅಷ್ಟೊಂದು ಕಲಾವಿದರ ಪೈಕಿ ನಾಯಕಿ ಚೈತ್ರಾ ತೋಟದ ಅಭಿನಯ ಅಚ್ಚುಕಟ್ಟಾಗಿದೆ. ಮಿಕ್ಕಂತೆ ಸಾಕಷ್ಟು ಹೊಸಬರಿದ್ದಾರೆ. ಅವರು ಹೊಸಬರು ಎನ್ನುವುದು ಅವರ ಅಭಿನಯ ನೋಡಿಯೇ ತಿಳಿಯುತ್ತದೆ. ಎಂ.ಎಸ್‍. ತ್ಯಾಗರಾಜ್‍ ಅವರ ಹಾಡುಗಳ ಪೈಕಿ ಎರಡು ಹಾಡುಗಳು ಖುಷಿಕೊಡುತ್ತವೆ. ತಾಂತ್ರಿಕವಾಗಿ ಚಿತ್ರ ಇನ್ನಷ್ಟು ಗಟ್ಟಿಯಾಗಿರಬೇಕಿತ್ತು.

ಉತ್ಸಾಹದ ಜೊತೆಗೆ ಕೌಶಲ್ಯವೂ ಸೇರಿದ್ದರೆ ‘ಶ್ರೀಕೃಷ್ಣ’ ಇನ್ನಷ್ಟು ಆಪ್ತವಾಗುವ ಸಾಧ್ಯತೆ ಇತ್ತು.

Review: ಕಮರ್ಷಿಯಲ್ ಚೌಕಟ್ಟಿನಲ್ಲಿ ಮಾನವೀಯತೆ ಹುಡುಕಾಟ

Discover more from KannadaScreens

Subscribe now to keep reading and get access to the full archive.

Continue reading