ಇದು ಬೈಕರ್ ಚಿತ್ರವೂ ಹೌದು; ಅಪ್ಪ-ಮಗನ ಬಾಂಧವ್ಯದ ಕಥೆಯೂ ಹೌದು

ಚಂದನವನ, ಸಿನಿ ಸುದ್ದಿ

ಕನ್ನಡದಲ್ಲಿ ಅಪ್ಪ-ಮಗನ ಬಾಂಧವ್ಯದ ಕಥೆಗಳು ಸಾಕಷ್ಟು ಬಂದಿವೆ. ಆಗಾಗ ಚಿತ್ರಗಳಲ್ಲಿ ನಾಯಕ ಬೈಕರ್‍ ಆಗಿರುವುದನ್ನೂ ತೋರಿಸಲಾಗಿದೆ. ಇವೆರಡ ಅಂಶಗಳನ್ನು ಬೆಸೆದು ಸದ್ದಿಲ್ಲದೆ ಒಂದು ಹೊಸ ಚಿತ್ರ ಮಾಡಲಾಗಿದೆ. ಅದೇ ‘ಫಾದರ್ಸ್ ಡೇ’. ಈ ಚಿತ್ರವು ಸದ್ದಿಲ್ಲದೆ ತಯಾರಾಗಿದ್ದು ಜುಲೈ 17ರಂದು ಬಿಡುಗಡೆಯಾಗಲಿದೆ.

ಇಲೆವೆನ್‍ ಎಲಿಮೆಂಟ್ಸ್ ಸಂಸ್ಥೆ ಲಾಂಛನದಲ್ಲಿ ರಾಜಾರಾಮ್ ರಾಜೇಂದ್ರನ್ ನಿರ್ಮಾಣದ ಜೊತೆಗೆ ನಿರ್ದೇಶನವನ್ನೂ ಮಾಡಿರುವ ಚಿತ್ರ ‘ಫಾದರ್ಸ್ ಡೇ’. ಇದು ಕನ್ನಡದ ಮೊದಲ ಬೈಕ್ ರೈಡರ್ ಚಿತ್ರವಾಗಿದೆ. ಚಿತ್ರದ ಬಿಡುಗಡೆಗೆ ಮೊದಲು ALL OK ಸಾರಥ್ಯದಲ್ಲಿ ಮೂಡಿಬಂದಿರುವ ಪ್ರಮೋಷನ್ ಸಾಂಗ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ.

‘ಫಾದರ್ಸ್ ಡೇ’ ಕುರಿತು ಮಾತನಾಡುವ ರಾಜಾರಾಮ್ ರಾಜೇಂದ್ರನ್, ‘ಇದು ಕನ್ನಡದ ಮೊದಲ ಬೈಕರ್ ಚಿತ್ರ. ಇದು ಒಂದು ದಿನದಲ್ಲಿ ನಡೆಯುವ ಕಥೆ. ಅಪ್ಪ – ಮಗನ ಬಾಂಧವ್ಯದ ಕಥೆಯೂ ಹೌದು. ಸಹ ಪಯಣಿಗರು ಅಪ್ಪ – ಮಗ ಎಂದು ನೋಡುಗರಿಗೆ ತಿಳಿದಿರುತ್ತದೆ. ಆದರೆ, ಅವರಿಗೆ ಅದು ಗೊತ್ತಿರುವುದಿಲ್ಲ. ಇದರ ಜೊತೆಗೆ ಯಾರು ನಿರೀಕ್ಷಿಸದ ಕ್ಲೈಮ್ಯಾಕ್ಸ್ ಸಹ ಈ ಚಿತ್ರದಲ್ಲಿದೆ. ಅದೇ ಚಿತ್ರದ ವಿಶೇಷ. ಇನ್ನೂ ಈ ಚಿತ್ರಕ್ಕೆ ಡಬ್ಬಿಂಗ್ ಮಾಡಿಲ್ಲ. ಚಿತ್ರೀಕರಣ ನಡೆಯುವಾಗ ಆಡಿದ ನೈಜ ಸಂಭಾಷಣೆಯನ್ನೇ ಬಳಸಿಕೊಳ್ಳಲಾಗಿದೆ’ ಎಂದರು.

ಈ ಚಿತ್ರದಲ್ಲಿ ಅಜಿತ್ ಹಂದೆ ಹಾಗೂ ಹರ್ಷಿಲ್ ಕೌಶಿಕ್ ಅಪ್ಪ – ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮ್ರಾಗ್ನಿ ರಾಜನ್, ALL OK, ಕ್ಷೇಮ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಜಿತ್‍ ಹಂದೆ ಮಾತನಾಡಿ, ‘ಇದು ಕನ್ನಡಕ್ಕೆ ಹೊಸ ತರಹದ ಸಿನಿಮಾ. ಅಪ್ಪನನ್ನು ಹುಡುಕಿ ಬರುವ ಮಗನ ಕಥೆಯೂ ಹೌದು. ಈ ಚಿತ್ರದಲ್ಲಿ 1200 ಸಿಸಿ ಬೈಕ್ ಓಡಿಸಿದ್ದು ಒಳ್ಳೆಯ ಅನುಭವ. ಬೈಕ್ ಓಡಿಸಲು ಶುರು ಮಾಡಿದಾಗ ನನಗೆ ಹೇಳಿ ಮಾಡಿಸಿದ ಬೈಕ್ ಅನಿಸಿತು. ಬೈಕ್ ಕೂಡ ಚಿತ್ರದ ಪ್ರಮುಖ ಪಾತ್ರಧಾರಿ ಎನ್ನಬಹುದು. ಚಿತ್ರೀಕರಣದ ಅನುಭವ ಕೂಡ ಚೆನ್ನಾಗಿತ್ತು’ ಎಂದರು.

ಈ ಹಿಂದೆ ‘ಆಚಾರ್ & ಕೋ’, ‘ಅನಾಮಧೇಯ ಅಶೋಕ್ ಕುಮಾರ್’ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಹರ್ಷಿಲ್ ಕೌಶಿಕ್, ‘’ಫಾದರ್ಸ್ ಡೇ’ ಎಲ್ಲಾ ವಯಸ್ಸಿನವರು ಮುಜುಗರವಿಲ್ಲದೆ ನೋಡಬಹುದಾದ ತಿಳಿಹಾಸ್ಯ ಹಾಗೂ ಶುದ್ದ ಮನೋರಂಜನೆಯ ಚಿತ್ರ. ಎಲ್ಲರಿಗೂ ಇಷ್ಟವಾಗುವಂತಹ ಚಿತ್ರ ಇದು’ ಎಂದರು.

ALL OK ಮಾತನಾಡಿ, ‘ನಾನು ಪ್ರಚಾರ ಗೀತೆಗೆ ಮಾತ್ರ ಸಂಗೀತ ನಿರ್ದೇಶನ ಮಾಡಿದ್ದೇನೆ. ಈ ಹಾಡಿಗೆ ಚಿರಾಯು, ರಿಯಲ್‍ ರನ್ನ ಮತ್ತು Su5 ಸಾಹಿತ್ಯ ಬರೆದು, ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ‘ಬ್ಲೂಸ್’ ಶೈಲಿಯ ಸಂಗೀತವಿರುವುದು ವಿಶೇಷ’ ಎಂದು ಹೇಳಿದರು.

ಪಿ.ವಿ.ಆರ್ – ಐನಾಕ್ಸ್ ಪಿಕ್ಚರ್ಸ್ ಈ ಚಿತ್ರವನ್ನು ವಿತರಣೆ ಮಾಡುತ್ತಿದೆ. ಜ್ಯೋಲ್ಸ್ನಾ ಪ್ಯಾನಿಕರ್ ಈ ಚಿತ್ರಕ್ಕೆ ಸಂಕಲನ ಕಾರ್ಯ ಮಾಡಿದ್ದಾರೆ.

ಮತ್ತೆ ಕನ್ನಡಕ್ಕೆ ಹಂಸಿಕಾ; ಪ್ಯಾನ್ ಇಂಡಿಯಾ ‘ಪ್ಯಾರಾಡಾಕ್ಸ್’ಗೆ ಮುಹೂರ್ತ

Discover more from KannadaScreens

Subscribe now to keep reading and get access to the full archive.

Continue reading