ಮತ್ತೆ ಕನ್ನಡಕ್ಕೆ ಹಂಸಿಕಾ; ಪ್ಯಾನ್ ಇಂಡಿಯಾ ‘ಪ್ಯಾರಾಡಾಕ್ಸ್’ಗೆ ಮುಹೂರ್ತ

ಚಂದನವನ, ಸಿನಿ ಸುದ್ದಿ

ಸುಮಾರು 18 ವರ್ಷಗಳ ಹಿಂದೆ ಪುನೀತ್‍ ರಾಜಕುಮಾರ್ ಅಭಿನಯದ ‘ಬಿಂದಾಸ್‍’ ಚಿತ್ರದಲ್ಲಿ ನಾಯಕಿಯಾಗುವ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು ಹಂಸಿಕಾ ಮೋಟ್ವಾನಿ. ಅದಾದ ಮೇಲೆ ಅವರು ಯಾವ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಈಗ 18 ವರ್ಷಗಳ ನಂತರ ಕನ್ನಡ ಮೂಲದ ‘ಪ್ಯಾರಾಡಾಕ್ಸ್’ ಎಂಬ ಪ್ಯಾನ್‍ ಇಂಡಿಯಾ ಚಿತ್ರದಲ್ಲಿ ಅವರು ನಟಿಸುವುದಕ್ಕೆ ಸಜ್ಜಾಗಿದ್ದಾರೆ.

ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿರುವ ಕ್ಯಾಪ್ಟನ್ ಕಿಶೋರ್ ಈಗ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಪ್ಯಾರಾಡಾಕ್ಸ್’ ಎಂಬ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿರುವ ಅವರು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಬೆಂಗಳೂರಿನ ಮುದ್ದಿನಪಾಳ್ಯದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ಮುಹೂರ್ತ ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಕಿಶೋರ್ ಅವರ ಸಹೋದ್ಯೋಗಿಗಳಾದ ಮುರಳಿ ಮಾಸ್ಟರ್, ಗಣೇಶ್ ಮಾಸ್ಟರ್, ರಾಮು ಮಾಸ್ಟರ್ ಸೇರಿದಂತೆ ಹಲವು ನೃತ್ಯ ನಿರ್ದೇಶಕರುಗಳು ಆಗಮಿಸಿ, ಕಿಶೋರ್ ಅವರ ಚಿತ್ರಕ್ಕೆ ಶುಭ ಹಾರೈಸಿದರು.

ಮುಹೂರ್ತದ ನಂತರ ನಡೆದ ಮಾತನಾಡಿದ ನಿರ್ದೇಶಕ ಕಿಶೋರ್, ‘ನಾನು ನಿರ್ದೇಶಕನಾಗಬೇಕು ಎಂದು ಚಿತ್ರರಂಗಕ್ಕೆ ಬಂದಿದ್ದೆ. ಆದರೆ, ಚಿಕ್ಕಪ್ಪನಿಂದಾಗಿ (ರಾಮು ಮಾಸ್ಟರ್‍) ನೃತ್ಯ ನಿರ್ದೇಶಕನಾದೆ. ಒಂದಿಷ್ಟು ನಿರ್ದೇಶಕರ ಜೊತೆ ಕೆಲಸ ಮಾಡಿದ್ದು, ಈಗ ‘ಪ್ಯಾರಾಡಾಕ್ಸ್’ ಸ್ವತಂತ್ರ ನಿರ್ದೇಶನ ಮಾಡುತ್ತಿದ್ದೇನೆ’ ಎಂದರು.

‘ಪ್ಯಾರಾಡಾಕ್ಸ್’ ಕುರಿತು ಮಾತನಾಡಿದ ಅವರು, ‘ಇದು ಪ್ಯಾನ್ ಇಂಡಿಯಾ ಸಿನಿಮಾ. ಅಂಗಾಂಗ ಕಳ್ಳತನ (ಆರ್ಗನ್ ಸ್ಕ್ಯಾಮ್) ಬಗ್ಗೆ ಸಿನಿಮಾ ಇರಲಿದ್ದು, ಮಹಿಳಾ ಪ್ರಧಾನ ಕಥೆ ಒಳಗೊಂಡಿದೆ. ಇಂಗ್ಲೀಷ್ ಸಿನಿಮಾ ತರಹ ಚಿತ್ರಕಥೆ ಇರಲಿದೆ. ಈ ಕಥೆಯನ್ನು ಕೇಳಿ ತುಂಬಾ ಇಷ್ಟಪಟ್ಟು ಕಾರ್ತಿಕ್ ರೆಡ್ಡಿ ಅವರು ನಿರ್ಮಾಣ ಮಾಡಲು ಮುಂದಾದರು. ಈಗಾಗಲೇ ಅವರ ನಿರ್ಮಾಣ ಸಂಸ್ಥೆಯಲ್ಲಿ ಒಂದು ಚಿತ್ರ ತಯಾರಾಗುತ್ತಿದೆ. ಇದು ಎರಡನೇ ಸಿನಿಮಾ. ಸೋನು ಸೋದ್, ಹನ್ಸಿಕಾ ಮೊಟ್ವಾನಿ, ರವಿಶಂಕರ್ ಸೇರಿದಂತೆ ಬೇರೆ ಬೇರೆ ಭಾಷೆಯ ಹಲವು ಕಲಾವಿದರು ಇದರಲ್ಲಿ ಅಭಿನಯಿಸಲಿದ್ದಾರೆ’ ಎಂದರು.

ನಂತರ ಚಿತ್ರದ ನಿರ್ಮಾಪಕ ಕಾರ್ತಿಕ್ ರೆಡ್ಡಿ ಮಾತನಾಡಿ, ‘ಚಿತ್ರದಲ್ಲಿ ಎಲ್ಲಾ ಭಾಷೆಗೂ ಹತ್ತಿರವಾಗುವ ಕಥೆ ಇದೆ.‌ ಪ್ರೇಕ್ಷಕರಿಗೆ ಹೊಸ ಅನುಭವ ಈ ಚಿತ್ರ ನೀಡುತ್ತದೆ. ತಾಂತ್ರಿಕವಾಗಿ ಸಿನಿಮಾ ತುಂಬಾ ಶ್ರೀಮಂತವಾಗಿ ಮೂಡಿಬರಲಿದೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾ ಇದು. ಮೊದಲ ನಿರ್ಮಾಣದ ‘ಶ್ಯಾಡೋ’ ಇಂಗ್ಲಿಷ್‌ ಭಾಷೆಯಲ್ಲಿ ತಯಾರಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ. ಈ ‘ಪ್ಯಾರಾಡಾಕ್ಸ್’ ಚಿತ್ರವನ್ನು ಹಾಲಿವುಡ್ ಸಿನಿಮಾದಂತೆ ಮಾಡುವ ಯೋಚನೆ ಇದ್ದು, ಅದೇ ರೀತಿಯಲ್ಲಿ ಮಾಡುತ್ತಿದ್ದೇವೆ. ಇದೊಂದು ಅದ್ಭುತ ಫ್ಯಾಂಟಸಿ ಸಿನಿಮಾ ಆಗಲಿದೆ ಎಂಬ ನಂಬಿಕೆ ಇದೆ. ಬೇರೆ ಬೇರೆ ಭಾಷೆಯ 16 ಮುಖ್ಯ ಕಲಾವಿದರು ಈ ಚಿತ್ರದಲ್ಲಿರುತ್ತಾರೆ’ ಎಂದರು.

ಈ ಚಿತ್ರಕ್ಕೆ ರವಿವರ್ಮ ಅವರ ಸಾಹಸ ನಿರ್ದೇಶನ, ರಾಜು ಛಾಯಾಗ್ರಹಣ, ದೀಪಕ್ ಸಂಕಲನ ಇರಲಿದೆ. ಸಾಯಿರಾಮ್ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿವಣ್ಣ ಅಭಿಮಾನಿಗಳಿಗಾಗಿ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್

Discover more from KannadaScreens

Subscribe now to keep reading and get access to the full archive.

Continue reading