ಕಿಶೋರ್ ಇದುವರೆಗೂ ಅದೆಷ್ಟು ಚಿತ್ರಗಳಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದರೆ, ಅವರು ಯಾವುದಾದರೂ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರೆ ಅದು ಇನ್‍ಸ್ಪೆಕ್ಟರ್ ಪಾತ್ರವೇ ಇರಬೇಕು ಎಂದನಿಸುವುದು ಮಾಮೂಲಿಯಾಗಿದೆ. ಅದಕ್ಕೆ ಸರಿಯಾಗಿ ಇತ್ತೀಚೆಗೆ ‘ಏಳುಮಲೆ’, ‘ಕಮಲ್ ಶ್ರೀದೇವಿ’ ಮುಂತಾದ ಹಲವು ಚಿತ್ರಗಳಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈಗ ಬಹಳ ದಿನಗಳ ನಂತರ ಒಂದು ಚಿತ್ರದಲ್ಲಿ ಅವರು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿಲ್ಲ ಎಂಬುದು ವಿಶೇಷ. ಅದೇ ‘ಡಿಟಾಕ್ಸ್’.
ಈ ಹಿಂದೆ ‘ಲಂಕೆ’ ಚಿತ್ರವನ್ನು ನಿರ್ದೇಶಿಸಿದ್ದ, ‘ಬಣ್ಣಬಣ್ಣದ ಲೋಕ’ ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದ ರಾಮ್‍ಪ್ರಸಾದ್ ದಾಸಪ್ಪ ನಿರ್ದೇಶನದ ಎರಡನೇ ಚಿತ್ರ ‘ಡೀಟಾಕ್ಸ್’. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಿಶೋರ್ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ನಡೆಯಿತು. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಸೆಪ್ಟೆಂಬರ್ ಕೊನೆಯಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.
ಈ ಚಿತ್ರದ ಕುರಿತು ಮಾತನಾಡುವ ರಾಮ್‍ಪ್ರಸಾದ್, ‘ಈ ಚಿತ್ರದ ಚಿತ್ರೀಕರಣ ಈಗ ಮುಕ್ತಾಯ ಹಂತ ತಲುಪಿದೆ. ಸೆಪ್ಟೆಂಬರ್ ಕೊನೆಯಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ‘ಡೀಟಾಕ್ಸ್’ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಏಳರಿಂದ 70ರ ವಯಸ್ಸಿನ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಯಾವ ರೀತಿ ಹೋರಾಟ ನಡೆಯುತ್ತದೆ ಎಂಬ ಸೂಕ್ಷ್ಮ ವಿಷಯಗಳನ್ನಿಟ್ಟುಕೊಂಡು ಈ ಕಥೆ ಬರೆದಿದ್ದೇನೆ’ ಎಂದರು.

ಸಮಾಜದಲ್ಲಿರುವ ತೊಡಕುಗಳನ್ನು ಸಿನಿಮಾ ಮಾಧ್ಯಮದ ಮೂಲಕ ‘ಡೀಟಾಕ್ಸ್’ ಮಾಡುವ ಪ್ರಯತ್ನ ಮಾಡಿದ್ದೇನೆ ಎನ್ನುವ ಅವರು, ’ಇದೊಂದು ಸಮಾಜಕ್ಕೆ ಹತ್ತಿರವಾಗುವ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಭಾಷೆಯಲ್ಲಿ ಮಾತ್ರ ಆರಂಭವಾದ ಈ ಚಿತ್ರ ಇಂದು ಐದು ಭಾಷೆಗಳಲ್ಲಿ ಬರುತ್ತಿದೆ. ಎಲ್ಲರಿಗೂ ಸಲ್ಲುವ ವಿಷಯವಾದ್ದರಿಂದ ಈ ಪ್ರಯತ್ನ ಮಾಡಿದ್ದೇವೆ. ಕನ್ನಡ ಸೇರಿದಂತೆ ಹಲವು ಭಾಷೆಗಳ ಅನೇಕ ಕಲಾವಿದರು ನಟಿಸಿರುವ ಚಿತ್ರವಿದು. ಇದೊಂದು ತಂತ್ರಜ್ಞರ ಸಿನಿಮಾ ಕೂಡ ಹೌದು’ ಎಂದರು ನಿರ್ದೇಶಕ ರಾಮ್‍ಪ್ರಸಾದ್ ದಾಸಪ್ಪ.
ಕಿಶೋರ್ ಮಾತನಾಡಿ, ‘ನನಗೆ ರಾಮಪ್ರಸಾದ್ ಅವರು ಬಂದು ಕಥೆ ಹೇಳಿದಾಗ ಇನ್ಸ್‌ಪೆಕ್ಟರ್ ಪಾತ್ರ ಆದರೆ ಬೇಡ ಅಂತ ಹೇಳಿದೆ. ಅವರು, ಇದು ಇನ್ಸ್‌ಪೆಕ್ಟರ್ ಪಾತ್ರ ಅಲ್ಲ ಎಂದರು. ಅವರು ಹೇಳಿದ ಹಾಗೆ, ನಾನು ಈ ಚಿತ್ರದಲ್ಲಿ ಇನ್ಸ್‌ಪೆಕ್ಟರ್ ಪಾತ್ರ ಮಾಡುತ್ತಿಲ್ಲ. ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ರಾಮ್‍ಪ್ರಸಾದ್ ಒಂದೊಳ್ಳೆ ಕಥೆ ಮಾಡಿಕೊಂಡಿದ್ದಾರೆ’ ಎಂದರು.
ಸುಚೇಂದ್ರ ಪ್ರಸಾದ್ ಮಾತನಾಡಿ, ‘ಎಲ್ಲರೂ ವಶೀಕರಣದ ಸಿನಿಮಾ ಮಾಡುತ್ತಿರುವ ಈ ಸಮಯದಲ್ಲಿ ನಿರ್ವಿಶೀಕರಣ ಮಾಡುವ ಸಿನಿಮಾ ಮಾಡಲು ರಾಮ್‍ಪ್ರಸಾದ್ ಹೊರಟಿದ್ದಾರೆ. ನಾನು ಈ ಹಿಂದಿನ ಅವರ ಚಿತ್ರದಲ್ಲೂ ನಟಿಸಿದ್ದೆ. ಈ ಚಿತ್ರದಲ್ಲೂ ನಟಿಸಿದ್ದೇನೆ’ ಎಂದರು.
‘ಡಿಟಾಕ್ಸ್’ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಅದ್ಭುತ್, ಕಿರಿಶಾ ತಾರಿಕಾ ದೇವಿ, ತುಮುಲ್ ಬಾಲ್ಯನ್, ವಾಣಿಶ್ರೀ ಮುಂತಾದವರು ನಟಿಸಿದ್ದಾರೆ. ಹಾಲೇಶ್ ಛಾಯಾಗ್ರಹಣ ಮತ್ತು ಎಲ್ವಿನ್ ಜೋಶ್ವ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನು ದಿ ಗ್ರೇಟ್ ಎಂಟರ್ ಟೇನರ್ಸ್ ಲಾಂಛನದಲ್ಲಿ ಸುರೇಖಾ ರಾಮ್‍ಪ್ರಸಾದ್ ನಿರ್ಮಿಸುತ್ತಿದ್ದಾರೆ.
ಈ ಚಿತ್ರಕ್ಕೆ ಬೈಕ್ ಹೀರೋ; ಯತಿರಾಜ್ ನಿರ್ದೇಶನದ ‘ರಾ ರಾ RX’ಗೆ ಚಾಲನೆ


