ಯಶ್ ಅಭಿನಯದ ‘ರಾಜಾಹುಲಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹೊನ್ನರಾಜ್ ಇದೀಗ ನಾಯಕ ಕಮ್ ನಿರ್ದೇಶಕನಾಗಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ನಿರ್ದೇಶಿಸಿರುವ ‘ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ’ ಚಿತ್ರದ ಹಾಡು ಬಿಡುಗಡೆ ಸಮಾರಂಭ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ನೆರವೇರಿತು.
ಸಚಿವ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ. ‘ನೆನಪಿರಲಿ’ ಪ್ರೇಮ್ ಹಾಡು ಬಿಡುಗಡೆ ಮಾಡಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಹಿರಿಯ ನಿರ್ಮಾಪಕ ಸಾ. ರಾ.ಗೋವಿಂದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೊಂದು ಮದುವೆ ಹಾಡಾಗಿದ್ದು, ‘ಡುಂ ಟಕ ಡುಂಡುಂ ಟಕ …’ ಎಂದು ಸಾಗುವ ಈ ಹಾಡಿಗೆ ಹೊನ್ನರಾಜ್ ಸಾಹಿತ್ಯ ಬರೆದರೆ, ನವೀನ್ ಸಜ್ಜು ಧ್ವನಿಯಾಗಿದ್ದಾರೆ.

ಈ ಸಂದರ್ಭದಲ್ಲಿ ನಾಯಕ-ನಿರ್ದೇಶಕ ಹೊನ್ನರಾಜ್ ಮಾತನಾಡಿ, ‘ಇದೊಂದು ಹಳ್ಳಿ ಸೊಗಡಿನ ಚಿತ್ರ. ಯಶ್ ಅಭಿಮಾನಿಯಾದ ನಾಯಕ ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವವನು. ಸಮಾಜಸೇವೆ ಅಂತ ಹಳ್ಳಿಗೆ ಒಳ್ಳೆಯದನ್ನು ಮಾಡಲು ಹೋಗಿ ಆತ ಏನೆಲ್ಲಾ ತೊಂದರೆ ಅನುಭವಿಸುತ್ತಾನೆ ಎಂಬುದನ್ನು ಹೇಳಲು ಪ್ರಯತ್ನಿಸಿದ್ದೇನೆ. ಮದ್ದೂರು, ಹುಳಿಯಾರು, ಚಿಕ್ಕನಾಯಕನಾಹಳ್ಳಿ, ಶ್ರೀರಂಗಪಟ್ಟಣದ ಸುತ್ತಮುತ್ತ 65 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ನಾಯಕಿ ಶೃತಿ ಬಬಿತ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಂಗಿ ಪಾತ್ರವನ್ನು ರೂಪ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ನಿಂದ ‘ಯು/ಎ’ ಪ್ರಮಾಣಪತ್ರ ಸಿಕ್ಕಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆಯಿದೆ’ ಎಂದರು.
ಈ ಚಿತ್ರವನ್ನು ಶ್ರೀ ಸತ್ಯಲಕ್ಷ್ಮಿ ಕ್ರಿಯೇಶನ್ಸ್ ಮೂಲಕ ಹೊನ್ನರಾಜ್ ಅವರೇ ನಿರ್ಮಾಣ ಸಹ ಮಾಡಿದ್ದಾರೆ. ಈ ಚಿತ್ರದ ನಾಲ್ಕು ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವಪುತ್ರ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮೈಸೂರು ಮಂಜುಳ, ರೇಖಾ ದಾಸ್, ಮಂಜಣ್ಣ, ಗಿರೀಶ್ ಮುಂತಾದವರು ನಟಿಸಿದ್ದಾರೆ.


