ಇದು ವಿಮಾನದಲ್ಲಿ ಬರೆದ ಕಥೆ; ಯೋಗಿ ‘ಫಾರೆವರ್’ಗೆ ಮುಹೂರ್ತ

ಚಂದನವನ, ಸಿನಿ ಸುದ್ದಿ

ಕೈಯಲ್ಲಿ ಮೂರ್ಮೂರು ಸಿಗರೇಟುಗಳು, ಹಾಸಿಗೆ ತುಂಬಾ ಸಿಗರೇಟು ತುಂಡು ಮತ್ತು ಮದ್ಯದ ಬಾಟಲಿಗಳು, ಎದೆಯಲ್ಲಿ ನೋವು, ಮುಖದಲ್ಲಿ ಯಾತನೆ … ಹಿಂದೊಮ್ಮೆ ಎಲ್ಲರನ್ನೂ ನಗಿಸುತ್ತಿದ್ದ ‘ಲೂಸ್‍ ಮಾದ’ ಯೋಗಿ, ಇವತ್ತು ಹೀಗಾಗಿದ್ದಾರೆ. ಅವರು ಹೀಗಾಗಿರುವುದು ರಿಯಲ್‍ ಲೈಫ್‍ನಲ್ಲಲ್ಲ, ಹೊಸ ಸಿನಿಮಾದಲ್ಲಿ.

‘ಲೂಸ್ ಮಾದ’ ಯೋಗಿ ಅಭಿನಯದ 51 ನೇ ಚಿತ್ರ ‘ಫಾರೆವರ್’ಗೆ ಗುರುವಾರ ಚಾಲನೆ ಸಿಕ್ಕಿದೆ. ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ವೆಂಕಟನಾರಾಯಣ್ (ಠಾಗೋರ್ ಕೃಷ್ಣ) ನಿರ್ಮಾಣದ, ‘ಚಂದ್ರಿಕ’ ಚಿತ್ರ ನಿರ್ದೇಶಿಸಿದ್ದ ಯೋಗೇಶ್ ಮುನಿಸಿದ್ಧಪ್ಪ ನಿರ್ದೇಶಿಸುತ್ತಿರುವ ‘ಫಾರೆವರ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಧ್ರುವ ಸರ್ಜಾ ಆರಂಭ ಫಲಕ ತೋರಿದರು. ವಿಜಯನಗರ ಶಾಸಕ ಕೃಷ್ಣಪ್ಪ ಕ್ಯಾಮೆರಾ ಚಾಲನೆ ಮಾಡಿದರು. ‘ನಾಗರಹಾವು’ ಚಿತ್ರದ ನಿರ್ಮಾಪಕ‌ ಸಾಜಿದ್ ಖುರೇಶಿ ಚಿತ್ರದ ಮೊದಲ ಪೋಸ್ಟರ್ ಅನಾವರಣ ಮಾಡಿದರು.

ಮುಹೂರ್ತದ ನಂತರ ಮಾತನಾಡಿದ ಯೋಗಿ. ‘ನಿರ್ದೇಶಕರು ಒಂದೊಳ್ಳೆಯ ಕಥೆ ಬರೆದಿದ್ದಾರೆ. ನಾನು ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಅಲ್ಲದೆ ಮತ್ತೊಂದು ಇದೆ. ಇದೊಬ್ಬ ಬೈಕ್‍ ರೈಡರ್‍ ಕಥೆ. ಅವನ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಈ ಚಿತ್ರದ ಕಥೆ. ಬೆಂಗಳೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ’ ಎಂದರು. ನಾಯಕ ಪ್ರೀತಿಯಲ್ಲಿ ಸಿಕ್ಕಿ ಹೀಗಾಗುತ್ತಾನಾ? ಎಂಬ ಪ್ರಶ್ನೆಗೆ, ಚಿತ್ರ ನೋಡಿ ಎಂದು ಉತ್ತರ ಕೊಟ್ಟರು.

ನಿರ್ದೇಶಕ ಯೋಗಿ ಈ ಕಥೆಯನ್ನು ವಿಮಾನದಲ್ಲಿ ಬರೆದರಂತೆ. ‘ನಾನು ಮೂರು ವರ್ಷಗಳಲ್ಲಿ ಅತೀ ಹೆಚ್ಚು ಬಾರಿ ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ವಿಮಾನ ಹತ್ತಿದ ತಕ್ಷಣ ಮೊಬೈಲ್ ಪಕ್ಕಕ್ಕೆ ಇಟ್ಟು ಈ ಚಿತ್ರದ ಕಥೆ ಬರೆಯುತ್ತಿದ್ದೆ. ಪ್ರತಿ ಬಾರಿ ಯೋಗಿ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸುವಾಗ, ಈ ವರ್ಷದ ಹುಟ್ಟುಹಬ್ಬಕ್ಕೆ ಚಿತ್ರ ಆರಂಭ‌ ಮಾಡೋಣ ಅಂತ ಹೇಳುತ್ತಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಇತ್ತೀಚೆಗಷ್ಟೇ ಯೋಗಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲೇ ಮುಹೂರ್ತ ನಡೆದಿರುವುದು ಖುಷಿಯಾಗಿದೆ’ ಎಂದರು.

ಈ ಚಿತ್ರಕ್ಕೆ ‘ಯುಗ ಮರೆಯದ ಪ್ರೇಮ ಕಥೆ’ ಎಂಬ ಅಡಿಬರಹವಿದೆ. ಈ ಕುರಿತು ಮಾತನಾಡಿದ ಯೋಗಿ, ‘ಇದೊಂದು ಪ್ರೇಮಕಥೆ. ಆದರೆ, ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿ ವಿಶೇಷವಾದ್ದದ್ದು ಮತ್ತೊಂದಿದೆ. ಅದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದರು.

ಒಂದು ತುಳು ಚಿತ್ರದಲ್ಲಿ ನಟಿಸಿರುವ ಆಕಾಂಕ್ಷ ರಾವ್ ಇದೇ ಮೊದಲ ಬಾರಿಗೆ ‘ಫಾರೆವರ್‍’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರದ್ಯೋತ್ತನ್‍ ಸಂಗೀತ ಮತ್ತು ಸಂಕೇತ್ ಅವರ ಛಾಯಾಗ್ರಹಣವಿದೆ.

‘ಡುಂ ಟಕ ಡುಂಡುಂ ಟಕ …’ ಎಂದು ಹಾಡಿ-ಕುಣಿದ ಮಿಸ್ಟರ್ ರಾಜಾಹುಲಿ

Discover more from KannadaScreens

Subscribe now to keep reading and get access to the full archive.

Continue reading