ಚಿತ್ರ: ರಕ್ಕಿ
ನಿರ್ಮಾಣ: ಸುರೇಶ್ ಸಾಲಿಗ್ರಾಮ
ನಿರ್ದೇಶನ: ವೆಂಕಟ್ ಭಾರದ್ವಾಜ್
ತಾರಾಗಣ: ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ. ಸುರೇಶ್, ಸಂಪತ್ ಮೈತ್ರೇಯ, ಹರಿಣಿ ಶ್ರೀಕಾಂತ್, ಬಲ ರಾಜ್ ವಾಡಿ ಮುಂತಾದವರು
ಅವನಿದ್ದ ಜಾಗದಿಂದ 130 ಕಿ.ಮಿ ದೂರದಲ್ಲಿ ಯಾರನ್ನೋ ಮುಗಿಸುವ ಸುಪಾರಿ ರಕ್ಕಿಗೆ ಸಿಗುತ್ತದೆ. ಸರಿ, ಅವನು ತನ್ನ ಹಿರಿಯ ಮಿತ್ರನ ಜೊತೆಗೆ ಬೈಕ್ ಹತ್ತಿರ ಹೋಗುತ್ತಾರೆ. ದಾರಿಯಲ್ಲಿ ನೂರೆಂಟು ಅಡೆತಡೆಗಳು. ಮೊದಲು ಪೊಲೀಸರು ಹಿಡಿಯುತ್ತಾರೆ. ಅವನ್ಯಾರೋ ಇವರ ಮೇಲೆ ಅನುಮಾನ ಪಡುತ್ತಾನೆ. ಎಲ್ಲವನ್ನೂ ದಾಟಿ ಅವನು ತನ್ನ ಗುರಿಯತ್ತ ಹೋಗುತ್ತಾನೆ. ಇನ್ನೇನು ಬಂದೂಕು ತೆಗೆದು, ತನ್ನ ಕೆಲಸ ಮುಗಿಸಬೇಕು ಎನ್ನುವಷ್ಟರಲ್ಲಿ ಠಣಾರ್ …
ವೆಂಕಟ್ ಭಾರದ್ವಾಜ್ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪ್ರಯತ್ನಗಳನ್ನು ಮಾಡುವವರು. ಬೇರೆಬೇರೆ ಹಿನ್ನಲೆಯ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುವವರು. ಆದರೆ, ಅವರ ಚಿತ್ರಗಳೆಲ್ಲಾ ವಿಭಿನ್ನ ಎಂದು ಹೇಳುವುದಕ್ಕೆ ಆಗುವುದಿಲ್ಲ. ಎಷ್ಟೇ ವಿಭಿನ್ನ ಯೋಚನೆಗಳಾದರೂ, ಅದು ಸಮರ್ಪಕವಾಗಿ ತೆರೆಯ ಮೇಲೆ ಬಂದಿರುವುದಿಲ್ಲ. ‘ರಕ್ಕಿ’ ಸಹ ಅದೇ ಸಾಲಿಗೆ ಇನ್ನೊಂದು ಚಿತ್ರ.
ವೆಂಕಟ್ ಈ ಚಿತ್ರದಲ್ಲಿ ಒಂದು ಸಮಾಜಿಕ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಸಮಸ್ಯೆಯನ್ನು ತೆರೆಯ ಮೇಲೆ ತರುವ ಯತ್ನ ಮಾಡಿದ್ದಾರೆ. ಅದರಿಂದ ಹೇಗೆ ನೂರಾರು ಕುಟುಂಬಗಳು ಹಾಳಾಗುತ್ತಿವೆ ಎಂದು ಹೇಳಿದ್ದಾರೆ. ಹಣಕ್ಕಾಗಿ ಮಾನವೀಯತೆ ಕಳೆದು ಹೋಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಕಮರ್ಷಿಯಲ್ ಚೌಕಟ್ಟಿನಲ್ಲಿ ಮಾನವೀಯತೆಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ದಿಕ್ಕು ತಪ್ಪಿದೆ. ಮೇಲಾಗಿ ಹೊಸ ಹುಡುಗನನ್ನು ಪರಿಚಯಿಸುವ ಜವಾಬ್ದಾರಿಯೂ ಹೆಗ್ಗಲ ಮೇಲೆ ಇರುವುದರಿಂದ, ಆ ಕಡೆಯೂ ಗಮನಹರಿಸಬೇಕಿದೆ.
ಹಾಗಾಗಿ, ಮೊದಲಾರ್ಧ ನಾಲ್ಕು ಹಾಡು, ಎರಡು ಫೈಟು, ಒಂದಿಷ್ಟು ರಾಜಕೀಯ, ಪ್ರೀತಿ ಇವೆಲ್ಲವುದರ ಸುತ್ತಲೇ ಸುತ್ತುತ್ತದೆ. ನಾಯಕ ಯಾರು? ಅವನ ಕಸುಬೇನು? ಎಂಬ ಪ್ರಶ್ನೆ ಕಾಡುತ್ತದೆ. ಚಿತ್ರ ಪ್ರಾರಂಭವಾಗುವುದು ಇವತ್ತಿನ ಕೆ.ಜಿ.ಎಫ್‍ನಿಂದ. ಅಲ್ಲಿನ ರಾಜಕೀಯ, ಪರಿಸ್ಥಿತಿ, ಸಮಸ್ಯೆಗಳ ಬಗ್ಗೆ ಚಿತ್ರ ಸಾಗಬಹುದು ಅಂದುಕೊಂಡರೆ ಅದು ಸುಳ್ಳಾಗುತ್ತದೆ. ಕೆ.ಜಿ.ಎಫ್‍ನಿಂದ ಸೀದಾ ಡಾನ್ ಒಬ್ಬನ ಅಡ್ಡಕ್ಕೆ ಶಿಫ್ಟ್ ಆಗುತ್ತದೆ. ಅಲ್ಲೇ ಸುತ್ತಾಮುತ್ತಾ ಸಿಕ್ಕಿಕೊಳ್ಳುವ ಕಥೆಗೆ ಒಂದು ದಾರಿ ಸಿಗುವುದು ದ್ವಿತೀಯಾರ್ಧದಲ್ಲೇ. ದ್ವಿತೀಯಾರ್ಧದಲ್ಲಿ ಚಿತ್ರ ಬೇರೆ ರೂಪ ಪಡೆಯುತ್ತದೆ. ಅಲ್ಲಿಯವರೆಗೂ ಸಹಿಸಿಕೊಳ್ಳುವ ಸಂಯಮ ಮುಖ್ಯೆ.
ದ್ವಿತೀಯಾರ್ಥಕ್ಕೆ ಚಿತ್ರಕ್ಕೆ ಥ್ರಿಲ್ಲರ್ ಸ್ಪರ್ಶ ಸಿಗುತ್ತದೆ. ರಕ್ಕಿ ಯಾರನ್ನು ಕೊಲ್ಲುವುದಕ್ಕೆ ಹೊರಟಿದ್ದಾನೆ, ಮುಂದೇನಾಗುತ್ತದೆ ಎಂಬ ವಿಷಯಗಳು ಸೀಟಿನ ಅಂಚಿಗೆ ತಂದು ಕೂರಿಸದಿದ್ದರೂ, ಕುತೂಹಲವನ್ನು ಖಂಡಿತಾ ಮೂಡಿಸುತ್ತವೆ. ಚಿತ್ರದಲ್ಲೊಂದು ಒಳ್ಳೆಯ ಆಶಯವಿದೆ. ಕಾನೂನನ್ನು ತಮ್ಮ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ಕಾಳಜಿ ಇದೆ. ಇವೇ ಚಿತ್ರವನ್ನು ಕಾಪಾಡುವುದು.
ಮೊದಲ ಬಾರಿಗೆ ನಾಯಕನಾಗಿ ಬಣ್ಣ ಹಚ್ಚುತ್ತಿರುವ ರಕ್ಕಿ ಸುರೇಶ್ ನೃತ್ಯ, ಹೊಡೆದಾಟದಲ್ಲಿ ಚೆನ್ನ. ಅಭಿನಯ ಮತ್ತು ಸಂಭಾಷಣೆ ಹೇಳುವ ಶೈಲಿಯಲ್ಲಿ ಮಾಗಬೇಕು. ನಾಯಕಿಯರ ಪೈಕಿ ಆಶಿಕಾ ಸೋಮಶೇಖರ್ ಹೆಚ್ಚು ಅಂಕ ಗಿಟ್ಟಿಸುತ್ತಾರೆ. ತಮ್ಮ ಚೆಲುವು ಮತ್ತು ಅಭಿನಯದಿಂದ ಇಷ್ಟವಾಗುತ್ತಾರೆ. ಬಿ. ಸುರೇಶ, ಸಂಪತ್ ಮೈತ್ರೇಯ, ಹರಿಣಿ ಮತ್ತು ಗೋವಿಂದೇಗೌಡ ತಮ್ಮ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಲೋಕಿ ತವಸ್ಯ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಚೆನ್ನಾಗಿವೆಯಾದರೂ, ಚಿತ್ರದ ಓಟಕ್ಕೆ ಅಗತ್ಯವಿರಲಿಲ್ಲ.


