ಜೆಡಿಎಸ್ ನಾಯಕ ಸಾರಾ ಮಹೇಶ್ ಸಿನಿಮಾ ನಿರ್ಮಿಸುತ್ತಿರುವ ವಿಷಯ ಗೊತ್ತೇ ಇದೆ. ಅವರು ತಮ್ಮ ಗೌರಿ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಿಸುತ್ತಿರುವ ‘ಸೆಲೆಬ್ರಿಟಿ’ ಚಿತ್ರದ ಚಿತ್ರೀಕರಣ ದೊಡ್ಡ ಮಟ್ಟದಲ್ಲಿ ಪ್ರಾರಂಭವಾಗಿತ್ತು. ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪರಿಯಚವಾಗುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಇತ್ತೀಚೆಗೆ ಮೇಲುಕೋಟೆಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ನಾಯಕ ಹಾಗೂ ನಾಯಕಿ ನಡುವಿನ ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ನಾಯಕ ಅಶ್ವಿನ್ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಹೆಜ್ಜೆ ಹಾಕಿದ್ದಾರೆ.

ಹಾಡಿನ ಕುರಿತು ಮಾತನಾಡಿದ ಜಾನಿ ಮಾಸ್ಟರ್, ‘ಇದೊಂದು ಮೆಲೋಡಿ ಹಾಡು. ದೊಡ್ದ ಸ್ಟಾರ್ ನಟರಿಗೆ ನೃತ್ಯ ನಿರ್ದೇಶನ ಮಾಡುವಾಗ ಕಷ್ಟವಾಗುತ್ತದೆ. ಅವರಿಗೆ ಅವರದ್ದೇ ಆದ ಇಮೇಜ್ ಇರುತ್ತದೆ. ಆ ಇಮೇಜ್‍ಗೆ ಹೊಂದುವ ರೀತಿ ನೃತ್ಯ ನಿರ್ದೇಶನ ಮಾಡಬೇಕು. ಆದರೆ, ಹೊಸಬರು ಸಾಕಷ್ಟು ಶ್ರಮವಹಿಸುತ್ತಾರೆ. ತಮ್ಮ ಬೆಸ್ಟ್ ಕೊಡಲು ಪ್ರಯತ್ನ ಮಾಡುತ್ತಾರೆ. ಹೀಗಾಗಿ ಇವರಿಗೆ ಹೇಳಿ ಕೊಡುವುದು ಸುಲಭ. ಹೊಸಬರು ಇದ್ದರೆ ನಾವು ಮತ್ತಷ್ಟು ಚೆನ್ನಾಗಿ ಕೆಲಸ ಮಾಡುತ್ತೇವೆ. ಅಶ್ವಿನ್ ಈ ಹಾಡಿಗೆ ನಾಲ್ಕು ದಿನ ರಿಹರ್ಸಲ್ ಮಾಡಿದ್ದಾರೆ. ನನಗೋಸ್ಕರ ಈ ತಂಡ ಒಂದೂವರೆ ವರ್ಷದಿಂದ ಕಾದಿದೆ. ಹೀಗಾಗಿ ಈ ತಂಡದ ಜೊತೆ ಕೈ ಜೋಡಿಸಿದೆ’ ಎಂದರು.
ನಟ ಅಶ್ವಿನ್ ಮಾತನಾಡಿ, ‘ಚಿತ್ರದಲ್ಲಿ ಕಪಲ್ ಸಾಂಗ್ ಇದೆ. ಅದನ್ನು ಮೇಲುಕೋಟೆಯಲ್ಲಿ ಶೂಟ್ ಮಾಡಬೇಕು ಎಂಬ ಯೋಚನೆ ಇತ್ತು. ಅದರಂತೆ ಇವತ್ತು ಮೇಲುಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಾನಿ ಮಾಸ್ಟರ್ ಮೇಲುಕೋಟೆಯಲ್ಲಿ ಮೊದಲ ಬಾರಿಗೆ ಭಾಗಿಯಾಗಿ ನೃತ್ಯ ಸಂಯೋಜಿಸಿದ್ದಾರೆ. ನನಗೆ ಜಾನಿ ಮಾಸ್ಟರ್ ಎಂದರೆ ಇಷ್ಟ. ಅವರು ಸುಲಭವಾದ ಸ್ಟೆಪ್ಸ್ ಹೇಳಿ ಕೊಡುವುದಿಲ್ಲ. ಹೀರೋಯಿನ್ ಹೊಗಳುವ ಹಾಡು ಇದು’ ಎಂದರು.

ಈ ಚಿತ್ರದಲ್ಲಿ ‘ಏಳುಮಲೆ’ ಚಿತ್ರದ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ‘ಇನ್ನೂ ಹತ್ತು ದಿನ ಮಾತ್ರ ನನ್ನ ಭಾಗದ ಚಿತ್ರೀಕರಣ ಇದೆ. ಶೂಟಿಂಗ್ ಮೊದಲು ವರ್ಕ್ ಶಾಪ್ ಮಾಡಿದ್ದೇವೆ. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಸಿರಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನನ್ನದು ಯೂಟ್ಯೂಬರ್ ಪಾತ್ರ. ನನ್ನ ಹೊಗಳುವ ಹಾಡನ್ನು ಚಿತ್ರೀಕರಣ ಮಾಡಿದ್ದೇವೆ. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಹೆಜ್ಜೆ ಹಾಕಿರುವುದು ಖುಷಿ’ ಎಂದರು.
ಕಿರಣ್ ವಿಶ್ವನಾಥ್ ʻಸೆಲೆಬ್ರಿಟಿʼ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಯಾರೇ ನೀನು ಚೆಲುವೆʼ ಸಿನಿಮಾ ಖ್ಯಾತಿಯ ಸಂಗೀತಾ ಅವರು ವರ್ಷಗಳ ಬಳಿಕ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜಿಸುತ್ತಿದ್ದು, ರವಿ ವರ್ಮಾ ಸಾಹಸ ನಿರ್ದೇಶನವಿದೆ.


