ಶಿವರಾಜಕುಮಾರ್, ಭಾನುವಾರ ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವರ್ಷ ಅವರ ಮುಂಬರುವ ಚಿತ್ರಗಳ ಹೊಸ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯ ಜೊತೆಗೆ, ಅಭಿಮಾನಿಗಳಿಗೊಂದು ಉಡುಗೊರೆ ನೀಡಿದ್ದಾರೆ.
ಬೆಂಗಳೂರಿನ ಹೃದಯಭಾಗದಲ್ಲಿರುವ ವೈದೇಹಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ – VSH (ಹಿಂದಿನ ಮಲ್ಯಾ ಆಸ್ಪತ್ರೆ) ಶಿವರಾಜಕುಮಾರ್ ಅವರ ಜನ್ಮದಿನದ ಸಂಭ್ರಮಕ್ಕೆ ಅತ್ಯಂತ ಅರ್ಥಪೂರ್ಣ ಕೊಡುಗೆ ನೀಡಿದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ಡಾ. ರಾಜಕುಮಾರ್ ಕುಟುಂಬದೊಂದಿಗೆ ದಶಕಗಳ ಆತ್ಮೀಯ ಬಾಂಧವ್ಯ ಹೊಂದಿರುವ ಈ ಆಸ್ಪತ್ರೆಯು, ಶಿವಣ್ಣನ ಹುಟ್ಟುಹಬ್ಬದ ಗೌರವಾರ್ಥವಾಗಿ ‘ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಅನ್ನು ಬಿಡುಗಡೆ ಮಾಡಿದೆ.

ವಿಶೇಷವೆಂದರೆ, ಆಸ್ಪತ್ರೆಯ ‘Minutes Matter’ (ನಿಮಿಷಗಳು ಅಮೂಲ್ಯ) ಎಂಬ ಧೈಯದ ಜಾಹೀರಾತಿನಲ್ಲಿ ಆಂಬುಲೆನ್ಸ್ ಚಾಲಕ, ವೈದ್ಯ, ಮನೋವೈದ್ಯ ಸೇರಿದಂತೆ 10 ವಿಭಿನ್ನ ಪಾತ್ರಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಜಾಗತಿಕ ಮಟ್ಟದ ಹೃದಯ ತಜ್ಞರಾದ ಡಾ. ವಿ.ಕೆ. ಶ್ರೀನಿವಾಸ್ ಅವರು ಈ ಹಿಂದೆ ಶಿವಣ್ಣ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದರು. ಶಿವಣ್ಣ ಈ ಜಾಹೀರಾತಿನಲ್ಲಿ ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ನಟಿಸಿದ್ದು, ಆ ಹಣವನ್ನು ಅಭಿಮಾನಿಗಳ ಆರೋಗ್ಯ ಸೇವೆಗೆ ಬಳಸುವಂತೆ ಮಾಡಿದ್ದಾರೆ.
ಈ ಕಾರ್ಡ್ ಪಡೆಯುವ ಅಭಿಮಾನಿಗಳಿಗೆ ಹೃದಯ ರೋಗ, ಕ್ಯಾನ್ಸರ್, ಡಯಾಲಿಸಿಸ್, ಹೊರರೋಗಿ ಮತ್ತು ಒಳರೋಗಿ ಸೇವೆಗಳು, ಲ್ಯಾಬ್ ಹಾಗೂ ರೇಡಿಯಾಲಜಿ ಪರೀಕ್ಷೆಗಳಿಗೆ ಆಸ್ಪತ್ರೆ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ ಸಿಗಲಿದೆ. 14 ವರ್ಷದೊಳಗಿನ ಮಕ್ಕಳ ಚಿಕಿತ್ಸೆಗೂ ಶೇ. 25ರಷ್ಟು ರಿಯಾಯಿತಿ ದೊರೆಯಲಿದೆ. ಶಿವರಾಜಕುಮಾರ್ ಅವರ ಹುಟ್ಟಹಬ್ಬದ ಪ್ರಯುಕ್ತ ಭಾನುವಾರ ಅವರ ನಿವಾಸದ ಬಳಿ ಸಾರ್ವಜನಿಕರಿಗೆ ಈ ಕಾರ್ಡ್‌ಗಳನ್ನು ವಿತರಿಸಲಾಗಿದೆ.


