ಶ್ರೀಮುರಳಿ ‘ಉಗ್ರಂ’ ಚಿತ್ರದ ನಂತರ ಸಿನಿಮಾಗಳಲ್ಲಿ ಅದೆಷ್ಟು ಜನರನ್ನು ಚಚ್ಚಿ ಕೆಡಿವಿದ್ದಾರೋ ಗೊತ್ತಿಲ್ಲ. ಆ ಲೆಕ್ಕವನ್ನು ಇಟ್ಟವರು ಸಿಗುವುದೂ ಇಲ್ಲ. ತಮ್ಮ ಮುಂದಿನ ಚಿತ್ರದಲ್ಲೂ ಅವರು ಅದನ್ನು ಮುಂದುವರೆಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಇದು ನಾಯಕನ ಪರಿಚಯಿಸುವ ಟೀಸರ್ ಸಹ ಹೌದು, ಹೊಡೆದಾಟದ ಟೀಸರ್ ಸಹ ಹೌದು.
ಶ್ರೀಮುರಳಿ ಅಭಿನಯದ ಹೊಸ ಚಿತ್ರ ‘ಪರಾಕ್’. ಬೆಂಗಳೂರಿನ ಖಾಸಗಿ ಮಾಲ್ ನಲ್ಲಿ ಸೋಮವಾರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕ ಹಾಲೇಶ್ ಕೊಗುಂಡಿ ಮಾತನಾಡಿ, ‘ಇದು ಜಸ್ಟ್ ಟೀಸರ್ ಅಷ್ಟೇ. ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಶ್ರೀಮುರಳಿ ಅವರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಎಂದರು.

ಶ್ರೀಮುರಳಿ ಮಾತನಾಡಿ, ‘’ಪರಾಕ್’ ಚಿತ್ರದ ಟೀಸರ್ ನೋಡಿದರೆ, ಇದು ಸುಲಭವಾಗಿ ಆದ ಕೆಲಸ ಅಲ್ಲ. ಅದಕ್ಕೆ ಆದ ಶ್ರಮ ದೊಡ್ಡದು. ಇದನ್ನು ತೆಗೆಯಲು ಎರಡೂವರೆ ವರ್ಷ ತೆಗೆದುಕೊಂಡೆವು. ‘ಪರಾಕ್’ ಸುಲಭವಾಗಿ ಶುರುವಾದ ಸಿನಿಮಾವಲ್ಲ. ಕಥೆಗೆ ಮೂರೂವರೆ ವರ್ಷ ಸಮಯ ಕೊಟ್ಟಿದ್ದೇವೆ. ಹೊಸಬರು, ಹೊಸ ನಿರ್ಮಾಣ ಸಂಸ್ಥೆಯ ಜೊತೆಗೆ ಯಾಕೆ ಸಿನಿಮಾ ಮಾಡಿದ್ದೇನೆ ಎಂದರೆ, ಅವರ ಜೊತೆ ಕೆಲಸ ಮಾಡಲು ನನಗೆ ಕಿಕ್ಕು. ನಾನು ಹೊಸಬರನ್ನು, ಅವರ ಆಲೋಚನೆಯನ್ನು ಇಷ್ಟಪಡುತ್ತೇನೆ, ನಂಬುತ್ತೇನೆ’ ಎಂದರು.
ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಚಿತ್ರ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರದ 35ರಷ್ಟು ಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂದೀಪ್ ವಲ್ಲೂರಿ ಛಾಯಾಗ್ರಹಣವಿದೆ.


