ಚಿತ್ರ: ಮದರ್ ಪ್ರಾಮಿಸ್
ನಿರ್ಮಾಣ: ಡಾಲಿ ಪಿಕ್ಚರ್ಸ್
ನಿರ್ದೇಶನ: ಪೂರ್ಣಚಂದ್ರ ಮೈಸೂರು
ತಾರಾಗಣ: ಧನಂಜಯ, ಮಹದೇವ ಪ್ರಸಾದ್, ಪೂರ್ಣಚಂದ್ರ ಮೈಸೂರು, ವಿನಯಾ ಪ್ರಸಾದ್, ಗೀತಾ, ನಾಗಭೂಷಣ್, ಅಂಜನ್, ಚಿ. ಗುರುದತ್ ಮುಂತಾದವರು
ಆ ಊರಿಗೆ ಮೂವರು ಡಾನ್‍ಗಳು. ರಾಸ್ಸಿ, ದೊನ್ನೆ ಬಿರಿಯಾನಿ ಮತ್ತು ಕಲಾವಿದ. ಈ ಪೈಕಿ ದೊನ್ನೆ ಬಿರಿಯಾನಿ, ಮೂವರು ಯುವಕರ ಕೈಗೆ ಒಂದು ಬ್ಯಾಗು ಕೊಟ್ಟು ಅದನ್ನು ಕಲಾವಿದನಿಗೆ ತಲುಪಿಸುವುದಕ್ಕೆ ಹೇಳುತ್ತಾನೆ. ಆ ಮೂವರು, ಆ ಕೆಲಸವನ್ನು ಇನ್ಯಾರಿಗೋ ಕೊಡುತ್ತಾರೆ. ಅವನು ಆ ಬ್ಯಾಗು ತಲುಪಿಸುವುದಕ್ಕೆ ಹೋಗುವಾಗ, ಏನೋ ಆಗಿ ಅವನ ಜೊತೆಗೆ ಇನ್ನಿಬ್ಬರು ಸೇರಿಕೊಳ್ಳುತ್ತಾರೆ. ಅಲ್ಲಿಗೆ ಮೂವರು ಯುವಕರ ಎರಡು ಗುಂಪುಗಳಾಗುತ್ತವೆ. ಇವೆಲ್ಲಾ ಆಗುವಾಗ ಇನ್ನ್ಯಾರೋ ಮೂವರು, ಕಲಾವಿದನನ್ನು ಕೊಲ್ಲುವುದಕ್ಕೆ ಹೊಂಚು ಹಾಕುತ್ತಿರುತ್ತಾರೆ. ಮೂವರ ಮೂರು ಗುಂಪುಗಳು ಏನೋ ಗೊಂದಲದಲ್ಲಿ ಊರು ತುಂಬಾ ಓಡುತ್ತಿರುವಾಗಲೇ, ಒಂದು ಅನಾಹುತ ನಡೆದೇ ಹೋಗುತ್ತದೆ. ಅದೇನು? ಮುಂದೇನಾಗುತ್ತದೆ? ಎಂಬ ಕುತೂಹಲವಿದ್ದರೆ ‘ಮದರ್ ಪ್ರಾಮಿಸ್’ ಚಿತ್ರ ನೋಡಬೇಕು.
ಕನ್ನಡದಲ್ಲಿ ಒಂದು ಸಿಲ್ಲಿ ಕಾಮಿಡಿ ಚಿತ್ರ ಬರದೇ ಹಲವು ದಿನಗಳೇ ಆಗಿದ್ದವು. ಕಳೆದ ವರ್ಷ ಇದೇ ಸಮಯದಲ್ಲಿ ಬಂದ ‘ಸು ಫ್ರಮ್ ಸೋ’ ಚಿತ್ರದ ನಂತರ ಮತ್ತೊಂದು ಚಿತ್ರ ನೆನಪಿಸಿಕೊಳ್ಳುವುದು ಕಷ್ಟ. ಹೀಗಿರುವಾಗಲೇ, ಎಲ್ಲವನ್ನ ಮರೆಸಿ, ಒಂದಿಷ್ಟು ಸಮಯ ನಗುವಂತೆ ಮಾಡುವುದಕ್ಕೆ ‘ಮದರ್ ಪ್ರಾಮಿಸ್’ ಬಂದಿದೆ.
ಮೊದಲೇ ಹೇಳಿದಂತೆ ಇದೊಂದು ಸಿಲ್ಲಿ ಕಾಮಿಡಿ. ಗೊಂದಲ, ಗದ್ದಲವೇ ಈ ಚಿತ್ರದ ಬಂಡವಾಳ. ಲಾಜಿಕ್ ಬಯಸುವವರು, ಗಂಭೀರ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಕಡ್ಡಾಯವಾಗಿ ಅಲ್ಲ. ಇಲ್ಲಿ ಯಾವುದೇ ಲಾಜಿಕ್ ಇಲ್ಲ. ಎಷ್ಟೆಂದರೆ, ಬೆಂಗಳೂರಿನಲ್ಲೊಂದು ಕತ್ರಿಗುಪ್ಪೆ ಬೀಚ್ ಇದೆ. ಒಂದಿಷ್ಟು ದೂರ ಹೋದರೆ ನಾಗರಬಾವಿ ಪೋರ್ಟ್ ಇದೆ. ಇದೆಲ್ಲದರ ಸುತ್ತವೇ ಒಂದು ಕಥೆ ನಡೆಯುತ್ತದೆ. ಈ ಚಿತ್ರದ ಏಕೈಕ ಉದ್ದೇಶವೆಂದರೆ ಅದು ನಗಿಸುವುದು. ನಗಿಸುತ್ತಲೇ, ಒಂದು ಮನಮುಟ್ಟುವಂತಹ ಸಂದೇಶವನ್ನು ಸಾರುವಂತಹ ಚಿತ್ರ ‘ಮದರ್ ಪ್ರಾಮಿಸ್’. ಹಾಗಾಗಿ, ತುಂಬಾ ಗಂಭೀರವಾಗಿ ತೆಗೆದುಕೊಳ್ಳದೆ, ಇದ್ದಷ್ಟು ಹೊತ್ತು ಕೂತು ನಕ್ಕು ಬರುವವರಿಗೆ ಈ ಚಿತ್ರ ಖುಷಿಯಾಗುತ್ತದೆ.
ಹಾಗೆ ನೋಡಿದರೆ, ಆರಂಭದಿಂದ ಕೊನೆಯವರೆಗೂ ನಗಿಸುವಂತಹ ಚಿತ್ರವೇನಲ್ಲ ಇದು. ಆರಂಭದಲ್ಲಿ ಒಂದಿಷ್ಟು ಬಿಡಿಬಿಡಿ ಘಟನೆಗಳು ನಡೆಯುತ್ತವೆ. ಕಥೆ, ಪರಿಸರ, ಪಾತ್ರಗಳು ಸೆಟ್ ಆಗುವುದಕ್ಕೆ ಮಧ್ಯಂತರದವರೆಗೂ ಸಮಯ ಬೇಕಾಗುತ್ತದೆ. ಚಿತ್ರ ನಿಧಾನವಾಗಿ, ಒಮ್ಮೊಮ್ಮೆ ದಾರಿ ತಪ್ಪುತಿದ್ದೆಯೇನೋ ಎಂಬ ಭಾವನೆ ಸಹ ಮೂಡುತ್ತದೆ. ಆ ನಂತರ ಚಿತ್ರ ಬೇರೆಯದೇ ರೂಪ ಪಡೆಯುತ್ತದೆ. ಇಲ್ಲಿ ಅಸಂಖ್ಯ ಪಾತ್ರಗಳಿವೆ. ಚಿತ್ರದ ಪೋಸ್ಟರ್‍ನಲ್ಲೇ ಒಂದು ರಾಶಿ ಜನರಿದ್ದಾರೆ. ಇನ್ನು, ಚಿತ್ರದಲ್ಲಿ ಎಷ್ಟು ಜನವರಿಬಹುದು ಊಹಿಸಿ. ಒಂದಕ್ಕಿಂತ ಒಂದು ವಿಚಿತ್ರವಾದ ಪಾತ್ರಗಳವು. ಒಂದಕ್ಕಿಂತ ಒಂದು ವಿಚಿತ್ರ ಮ್ಯಾನರಿಸಂ ಇರುವಂತವು. ಆ ಪಾತ್ರಗಳು ಮಾಡುವ ತರಲೆ, ತಮಾಷೆ, ಗೊಂದಲಗಳೇ ಪ್ರೇಕ್ಷಕರನ್ನು ನಗಿಸುವುದು.
ಚಿತ್ರದಲ್ಲಿ ಹಿರಿಯರ ಜೊತೆಗೆ ಸಾಕಷ್ಟು ಹೊಸ ಮುಖಗಳಿವೆ. ಅವರೆಲ್ಲರನ್ನೂ ಬಳಸಿಕೊಂಡಿರುವ ರೀತಿ ಖುಷಿಕೊಡುತ್ತದೆ. ಅದರಲ್ಲೂ ಕೆಲವರು ಹೆಚ್ಚು ಶ್ರಮ ಹಾಕದೆ, ಬಹಳ ನೈಜವಾಗಿ ತಮ್ಮ ಪಾತ್ರಗಳನ್ನು ತೆರೆಯ ಮೇಲೆ ತಂದಿದ್ದಾರೆ. ಇನ್ನೂ ಕೆಲವರು ತಿಣುಕಾಡಿ ನಗಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಹಿರಿಯರ ಪೈಕಿ ಧನಂಜಯ ಇಲ್ಲಿ ಮಹಾನ್ ಮೌನಿ. ಹೆಚ್ಚು ಮಾತಿಲ್ಲದೆ, ಮೌನದಲ್ಲೇ ನೋವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ವಿನಯಾ ಪ್ರಸಾದ್ ಮತ್ತು ಗೀತಾ ಅವರ ಪಾತ್ರಗಳು ಚಿಕ್ಕವಾದರೂ, ಮನಸ್ಸಿನಲ್ಲುಳಿಯುತ್ತಾರೆ. ಮಹದೇವ ಪ್ರಸಾದ್, ನಾಗಭೂಷಣ್, ಅಂಜನ್ ಎಲ್ಲರೂ ತಮ್ಮ ಪಾತ್ರಗಳಿಂದ ಇಷ್ಟವಾಗುತ್ತಾರೆ.
ಇಡೀ ಚಿತ್ರವನ್ನು ಮುನ್ನಡೆಸುವುದು ಪೂರ್ಣಚಂದ್ರ ಮೈಸೂರು. ಪೂರ್ಣ ಇಲ್ಲಿ ನಟರಷ್ಟೇ ಅಲ್ಲ, ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಎರಡನ್ನೂ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಪ್ರೇಮ ಮತ್ತು ಭೂಗತಲೋಕದ ಕಥೆಗಳನ್ನು ಬಿಟ್ಟು, ಮೊದಲ ಚಿತ್ರದಲ್ಲೇ ಒಂದು ಬೇರೆ ತರಹದ ಪ್ರಯತ್ನ ಮಾಡುವುದು ಅಷ್ಟು ಸುಲಭದ ಮಾತಲ್ಲ. ನವನೀತ್ ಶ್ಯಾಮ್ ಸಂಗೀತ ನಿರ್ದೇಶನದ ಮೂರು ಹಾಡುಗಳು ಗುನುಗುವಂತಿವೆ.


