ಚಿತ್ರರಂಗ ಉದ್ಧಾರ ಆಗದಿರುವುದಕ್ಕೆ ಇದೂ ಸಹ ಕಾರಣ: ರಾಜ್‍ ಬಿ. ಶೆಟ್ಟಿ

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ಕರಾವಳಿ’ ಚಿತ್ರ ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಪ್ರಜ್ವಲ್ ದೇವರಾಜ್ ಬರದಿರುವುದಕ್ಕೆ ಏನು ಕಾರಣ? ಚಿತ್ರಕ್ಕೆ ರಾಜ್‍ ಬಿ. ಶೆಟ್ಟಿ ಎಂಟ್ರಿ ಕೊಟ್ಟ ನಂತರ ಈ ಅಸಮಾಧಾನ ಶುರುವಾಯಿತಾ? ಎಂಬ ಪ್ರಶ್ನೆಗಳು ಕೇಳ ಬರುತ್ತಿವೆ. ಈ ಬಗ್ಗೆ ಸ್ವತಃ ರಾಜ್ ಮಾತನಾಡಿದ್ದಾರೆ. ಪ್ರಜ್ವಲ್‍ ಜೊತೆಗೆ ಮಾತಾಡೋಕೆ ತಾನು ತಯಾರು ಎಂದಿದ್ದಾರೆ.

ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದೇನೆ ಎನ್ನುವ ರಾಜ್‍ ಬಿ. ಶೆಟ್ಟಿ. ಅತಿಥಿ ಪಾತ್ರವಾದರೂ ಬಹಳ ಪ್ರಮುಖವಾದ ಪಾತ್ರ ಅದು. ಇದರ ಪೋಸ್ಟರ್‍ನಿಂದ ಹಿಡಿದು, ಎಲ್ಲದರಲ್ಲೂ ಪ್ರಜ್ವಲ್‍ ಅವರ ಹೆಸರೇ ಇದೆ. ಇದು ನನಗೆ ಮೊದಲೇ ಗೊತ್ತಿದ್ದ ವಿಷಯ. ನಾನು ಈ ಪಾತ್ರದ ಮೊದಲ ಆಯ್ಕೆ ಆಗಿರಲಿಲ್ಲ. ನನಗಿಂತ ದೊಡ್ಡ ಕಲಾವಿದರು ಇವರ ಮೊದಲ ಆಯ್ಕೆಯಾಗಿದ್ದರು ಮತ್ತು ಬೇರೆಬೇರೆ ಕಾರಣಗಳಿಗಾಗಿ ಅವರು ಈ ಚಿತ್ರತಂಡದ ಭಾಗವಾಗುವುದಕ್ಕೆ ಸಾಧ್ಯವಾಗಲಿಲ್ಲ. ಅವರು ಆಗದೇ ಇದ್ದ ಕಾರಣಕ್ಕೆ ನಾನು ಚಿತ್ರತಂಡಕ್ಕೆ ಬಂದೆ. ಆ ಪಾತ್ರ ಮೊದಲಿನಿಂದ ಇತ್ತು. ನಾನು ಬಂದ ಮೇಲೆ ಆ ಪಾತ್ರ ಸೃಷ್ಟಿಯಾಗಿದ್ದಲ್ಲ’ ಎಂದರು.

ಇಲ್ಲಿ ಯಾರ ಜೊತೆಗೂ ಸ್ಪರ್ಧಿಸೋಕೆ ತಾನು ಬಂದಿಲ್ಲ ಎನ್ನುವ ಶೆಟ್ಟಿ, ‘ನಾವು ಸಿನಿಮಾ ಮಾಡುತ್ತಿದ್ದೇವೆ. ಒಬ್ಬ ಮನುಷ್ಯ ಸಿನಿಮಾ ಮಾಡೋದಕ್ಕೆ ಎಷ್ಟು ಕಷ್ಟಪಡುತ್ತಾರೆ ಎಂದು ನನಗೆ ಗೊತ್ತಿದೆ. ಎಷ್ಟು ಬದುಕುಗಳು ಅದರಲ್ಲಿರುತ್ತವೆ. ನನ್ನೊಬ್ಬನ ಜೀವನ, ನನ್ನ ಹೆಸರು, ಸ್ಪರ್ಧೆ … ಇವೆಲ್ಲಾ ನಾನು ಒಪ್ಪಲ್ಲ. ಅದೆಲ್ಲಾ ನನಗೆ ಇಷ್ಟವಾಗಲ್ಲ. ಸಿನಿಮಾ ನನಗಿಂತ ಬಹಳ ದೊಡ್ಡದು. ಈ ತರಹದ ಘಟನೆಗಳು ಆಗಬಾರದಿತ್ತು. ಸಿನಿಮಾದ ಗುಣಮಟ್ಟ ನೋಡಿ. ಇಡೀ ಭಾರತ ತಿರುಗಿ ನೋಡುವಂತಹ ಚಿತ್ರದ ಕೆಲಸದ ಬಗ್ಗೆ ಮಾತನಾಡುವುದನ್ನು ಬಿಟ್ಟು, ನಾವು ಬೇರೇನನ್ನೋ ಮಾತಾಡುತ್ತಿದ್ದೇವೆ. ಇದು ಬಹಳ ಬೇಸರ ವಿಷಯ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜ್ವಲ್‍ ಜೊತೆಗೆ ಒಮ್ಮೆ ಮಾತನಾಡಬೇಕು ಎಂದ ರಾಜ್‍ ಬಿ. ಶೆಟ್ಟಿ, ‘ನಾನು ಅವರೊಂದಿಗೆ ಒಮ್ಮೆ ಮಾತನಾಡಬೇಕು. ಅದರು ಮನುಷ್ಯರ ತರಹ ಕೂತು ಮಾತನಾಡುವುದಾದರೆ ಮಾತ್ರ. ಮನುಷ್ಯತ್ವ ಮುಖ್ಯ. ಹಾಗೆ ಮಾತನಾಡಿದರೆ ಮಾತನಾಡಬಹುದು. ಇಲ್ಲಿ ಯಾವ ಸ್ಪರ್ಧೆ ಇದೆ. ಇದು ನನ್ನೊಬ್ಬನ ಸಿನಿಮಾ ಅಲ್ಲ. ನೂರಾರು ಜನ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಮಿತ್ರ, ಶ್ರೀಧರ್‍ ಮುಂತಾದ ದೊಡ್ಡ ಕಲಾವಿದರಿದ್ದರು. ಎಷ್ಟು ಸಿನಿಮಾ ಮಾಡಿದವರು ಅವರು. ಅವರಿಗಿಂತ ದೊಡ್ಡ ಕಲಾವಿದನಾ ನಾನು? ಪೋಸ್ಟರ್‍ನಲ್ಲಿ ಅವರ ಹೆಸರಿಲ್ಲ. ಇದು ದುರದೃಷ್ಟಕರ. ಈ ರೀತಿ ಆಗಬಾರದಿತ್ತು. ಯಾಕೆ ನಮ್ಮ ಚಿತ್ರರಂಗ ಉದ್ಧಾರ ಆಗುತ್ತಿಲ್ಲ ಎಂದು ಮಾತನಾಡುತ್ತೀವಲ್ಲ. ಅದಕ್ಕೆ ಇದೂ ಸಹ ಒಂದು ಕಾರಣ. ಈ ಚಿತ್ರದಲ್ಲಿ ಪ್ರಜ್ವಲ್‍ ಅವರಿಗೆ ದೊಡ್ಡ ಹೆಸರು ಬಂದರೆ, ನನಗೆ ಹೆಚ್ಚು ಖುಷಿ. ಕನ್ನಡದ ಇನ್ನೊಬ್ಬ ನಟ, ಇನ್ನೂ ದೊಡ್ಡ ಸ್ಟಾರ್‍ ಆದ ಎಂಬ ಹೆಮ್ಮೆ. ಮಿತ್ರ ಅವರಿಗೆ ಹೆಸರು ಬಂದರೆ ಇನ್ನೂ ಖುಷಿ. ಅವರು ಅರ್ಹರು. ಅವರಿಂದ ಕಿತ್ತುಕೊಂಡು ನಾನೇನು ಸಾಧಿಸುತ್ತೇನೆ ಹೇಳಿ? ನಾನು ಖಳನಾಯಕನಾಗಿಯೂ ನಟಿಸಿದ್ದೇನೆ. ನಗೆನಟನಾಗಿಯೂ ಕಾಣಿಸಿಕೊಂಡಿದ್ದೇನೆ. ಅಲ್ಲೆಲ್ಲೂ ನನ್ನ ಕಟೌಟ್‍ ಹಾಕಿ ಅಂತ ಹೇಳಿಲ್ಲ. ನನ್ನ ಜೀವನದಲ್ಲಿ ಅವೆಲ್ಲಾ ಮಾಡಿಲ್ಲ. ಮಾಡಿದ ದಿನ ನಾನು ಚಿತ್ರರಂಗ ಬಿಡಬೇಕು ಎಂದು ನನ್ನ ಭಾವನೆ’ ಎಂದರು.

ನನಗೆ ಕೊಡಬೇಕಾದ ಸಂಭಾವನೆ ಕೊಡಲಿಲ್ಲ, ಹಾಗಾಗಿ ಡಬ್‍ ಮಾಡಲಿಲ್ಲ: ಪ್ರಜ್ವಲ್

Discover more from KannadaScreens

Subscribe now to keep reading and get access to the full archive.

Continue reading