ನನಗೆ ಕೊಡಬೇಕಾದ ಸಂಭಾವನೆ ಕೊಡಲಿಲ್ಲ, ಹಾಗಾಗಿ ಡಬ್‍ ಮಾಡಲಿಲ್ಲ: ಪ್ರಜ್ವಲ್

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ಕರಾವಳಿ’ ಚಿತ್ರ ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಪ್ರಜ್ವಲ್ ದೇವರಾಜ್ ಯಾಕೆ ಬರಲಿಲ್ಲ. ತಮ್ಮದೇ ಚಿತ್ರದ ಸಮಾರಂಭವೊಂದಕ್ಕೆ ಪ್ರಜ್ವಲ್‍ ಬರದಿರುವುದು ಎಷ್ಟು ಸರಿ? ಇಂಥಾ ಪ್ರಶ್ನೆಗಳು ಸಹಜವಾಗಿಯೇ ಕೇಳಿ ಬರುತ್ತಿದೆ. ಇಷ್ಟಕ್ಕೂ ಪ್ರಜ್ವಲ್‍ ಯಾಕೆ ಬರಲಿಲ್ಲ ಎಂಬುದರ ಕುರಿತು ಟಿವಿ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ.

‘ನನಗೆ ಕೊಡುವ ಸಂಭಾವನೆ ಬಾಕಿ ಇತ್ತು. GST ಸಹ ಬಾಕಿ ಇತ್ತು. ಅದನ್ನು ಕೊಟ್ಟ ಮೇಲೆ ಡಬ್ಬಿಂಗ್‍ ಮಾಡುತ್ತೇನೆ ಎಂದು ಹೇಳಿದ್ದೆ. ಹೋದ ವರ್ಷ ನಾನು ಸುಮಾರು ಒಂದೂವರೆ ಕೋಟಿಯಷ್ಟು ಸಂಭಾವನೆಯನ್ನು ಬಿಟ್ಟಿದ್ದೇನೆ. ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂದು ಬಿಟ್ಟೆ. ಹೀಗೆ ಸಹಾಯ ಮಾಡುವ ಪರಿಸ್ಥಿತಿಯಲ್ಲಿ ನಾವು ಇರಬೇಕು. ಶಕ್ತಿ ಇದ್ದರೆ ಸಹಾಯ ಮಾಡಬಹುದು. ಸದ್ಯ ನಾನು ಆ ಪರಿಸ್ಥಿತಿಯಲ್ಲಿ ಇಲ್ಲ. ಅಷ್ಟೊಂದು ಹಣ ಬಿಡುವುದಕ್ಕೆ ಸಾಧ್ಯವಿಲ್ಲ. ಈ ಚಿತ್ರಕ್ಕಾಗಿ ಬೇರೆ ಚಿತ್ರ ಒಪ್ಪಿಲ್ಲ. ಒಪ್ಪಿಕೊಂಡಿರುವ ಸಂಭಾವನೆ ಕೊಡಿ, ನಾನು ಬಂದು ಡಬ್ಬಿಂಗ್‍ ಮಾಡುತ್ತೇನೆ ಎಂದು ಹೇಳಿದೆ. ಅವರು ಖಡಾಖಂಡಿತವಾಗಿ ಆಗೋದಿಲ್ಲ ಎಂದರು. ಅವರು ಹಠಮಾಡಿ ಕೊಡುವುದಿಲ್ಲ ಎಂದರು. ಹಾಗಾಗಿ, ಬರಲಿಲ್ಲ’ ಎಂದರು.

ನನ್ನ ವೃತ್ತಿಜೀವನದಲ್ಲಿ ಇದುವರೆಗೂ ಒಂದೂ ಕಪ್ಪುಚುಕ್ಕೆ ಇಲ್ಲ ಎನ್ನುವ ಪ್ರಜ್ವಲ್, ‘ಒಂದೂಕಾಲು ಕೋಟಿ ಮಾತಾಗಿತ್ತು. ಅದರಲ್ಲಿ ಒಂದಿಷ್ಟು ಕೊಟ್ಟಿದ್ದಾರೆ. ಅದರ ಜೊತೆಗೆ GST ಸಹ ಕೊಡಬೇಕಿದೆ. ಮಾತನಾಡಿದಷ್ಟು ಹಣ ಕೊಟ್ಟಿಲ್ಲ. ಅದೇ ಕಾರಣಕ್ಕೆ ನಾನು ಸಮಾರಂಭಕ್ಕೆ ಹೋಗಲಿಲ್ಲ. ಈ ವಿಷಯದ ಕುರಿತು ನಾನು ಮತ್ತು ಗುರು ಸಾಕಷ್ಟು ಬಾರಿ ಮಾತನಾಡಿಕೊಂಡಿದ್ದೇವೆ. ನಿನ್ನೆ ರಾತ್ರಿವರೆಗೂ ನಾನು ಟ್ರೇಲರ್‍ ನೋಡಿರಲಿಲ್ಲ. ನೋಡಬೇಕು, ಕಳಿಸಿಕೊಡಿ ಎಂದು ನಾನೂ ಕೇಳುತ್ತಲೇ ಇದ್ದೆ. ಆದರೆ, ಕಳಿಸಲಿಲ್ಲ’ ಎಂದರು.

ಸಂಭಾವನೆ ಹೊರತಾಗಿ ಬೇರೆ ಯಾವುದೇ ಸಮಸ್ಯೆ ಇಲ್ಲ ಎನ್ನುವ ಪ್ರಜ್ವಲ್‍, ‘ಟ್ರೇಲರ್‍ಗೂ ಡಬ್‍ ಮಾಡಬೇಕಿತ್ತು. ಯಾವಾಗ ಎಂದು ಕೇಳಿದಾಗ, ಮೊದಲು ಟ್ರೇಲರ್‍ ಬಿಡುಗಡೆ ಸಮಾರಂಭಕ್ಕೆ ಬರೋಕೆ ಹೇಳಿ ಎಂದರು. ನಾನು ಸೋಷಿಯಲ್‍ ಮೀಡಿಯಾದಲ್ಲಿ ಚಿತ್ರದ ಪ್ರಚಾರವನ್ನೂ ಮಾಡುತ್ತಲೇ ಇದ್ದೇನೆ. ಟ್ರೇಲರ್‍ನಲ್ಲಿ ನನ್ನ ಧ್ವನಿ ಇಲ್ಲ ಎಂದು ಗೊತ್ತಾಗಿದ್ದೇ ನಿನ್ನೆ ರಾತ್ರಿ. ಅದಕ್ಕೂ ಮೊದಲು ನನಗೆ ಗೊತ್ತಿರಲಿಲ್ಲ. ಅವರು ಮೊದಲು ಹೇಳಿದ್ದರೆ ಟ್ರೇಲರ್‍ಗೆ ಡಬ್ಬಿಂಗ್‍ ಮುಗಿಸಿಬಿಡುತ್ತಿದ್ದೆ. ಮಿಕ್ಕಿದ್ದು ಆ ನಂತರ ನೋಡಿಕೊಳ್ಳಬಹುದಿತ್ತು. ಬಿಡುಗಡೆಗೆ ಸಮಯವಿತ್ತು. ಆದರೆ, ಅದಕ್ಕೆ ಅವಕಾಶವೇ ಕೊಡಲಿಲ್ಲ. ಅದರಿಂದ ಬೇಸರವಾಗಿ ನಾನು ಸಮಾರಂಭಕ್ಕೆ ಹೋಗಲಿಲ್ಲ. ಈ ವಿಷಯವನ್ನು ಚೆನ್ನಾಗಿ ಬಗೆಹರಿಸಿಕೊಳ‍್ಳಬಹುದಿತ್ತು’ ಎಂದರು.

ರಾಜ್‍ ಬಿ. ಶೆಟ್ಟಿ ಆಗಮನದಿಂದ ಯಾವುದೇ ಸಮಸ್ಯೆ ಆಗಿಲ್ಲ ಎನ್ನುವ ಪ್ರಜ್ವಲ್‍, ‘ನಾನು ಇದಕ್ಕೂ ಮುನ್ನ ‘ಚೌಕ’ ಚಿತ್ರದಲ್ಲೂ ಬೇರೆ ಮೂರು ಹೀರೋಗಳ ಜೊತೆಗೆ ನಟಿಸಿದ್ದೆ. ಇವತ್ತಿಗೂ ನಾವೆಲ್ಲಾ ಚೆನ್ನಾಗಿದ್ದೇವೆ. ನನಗೆ ಆ ರೀತಿ ಏನೂ ಇಲ್ಲ. ನಮ್ಮ ಕೆಲಸ ಮುಖ್ಯ ಅಷ್ಟೇ. ರಾಜ್‍ ಅವರು ಅದ್ಭುತ ಪ್ರತಿಭೆ. ಅವರ ಜೊತೆಗೆ ಯಾವುದೇ ಸಮಸ್ಯೆ ಇಲ್ಲ. ಇಬ್ಬರಲ್ಲ, 10 ಹೀರೋಗಳಿದ್ದರೂ ನಾನು ನಟಿಸೋಕೆ ಸಿದ್ಧ. ಚಿತ್ರರಂಗ, ನಿರ್ಮಾಪಕರು ಚೆನ್ನಾಗಿರಬೇಕು. ಚಿತ್ರರಂಗ ಬೆಳೆಯಬೇಕು ಅನ್ನೋದಷ್ಟೇ ಮುಖ್ಯ.’ ಎಂದರು.

ರಾಜ್‍ ಶೆಟ್ಟಿ ಎಂಟ್ರಿಯಿಂದಾಗಿ ‘ಕರಾವಳಿ’ಯಿಂದ ಪ್ರಜ್ವಲ್‍ ದೂರಾದರಾ?

Latest Posts

Discover more from KannadaScreens

Subscribe now to keep reading and get access to the full archive.

Continue reading