ಈ ಹಿಂದೆ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ್ ಅಲಿಯಾಸ್ ‘ಜಟ್ಟ’ ಗಿರಿರಾಜ್, ಈ ಬಾರಿ ‘ಕಲ್ಯಾಣಿ’ ಎಂಬ ಹೊಸ ಕಥೆಯನ್ನು ತೆರೆಗೆ ತರುವುದಕ್ಕೆ ಸಜ್ಜಾಗಿದ್ದಾರೆ.
ಸಾಮಾನ್ಯವಾಗಿ ಗಿರಿರಾಜ್ ಚಿತ್ರಗಳಿಗೆ ಅವರದ್ದೇ ಕಥೆ ಇರುತ್ತದೆ. ಆದರೆ, ಈ ಬಾರಿ ಇನ್ನೊಬ್ಬರ ಕಥೆಯನ್ನು ಗಿರಿರಾಜ್ ಚಿತ್ರ ಮಾಡಿದ್ದಾರೆ. ಬಸವ ರೆಡ್ಡಿ ಅವರ ಕಥೆಗೆ ಬಿ. ಎಂ. ಗಿರಿರಾಜ್ ಸಿನಿಮಾ ರೂಪ ಕೊಟ್ಟು ಅದನ್ನು ‘ಕಲ್ಯಾಣಿ’ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಕೆಲವು ತಿಂಗಳ ಹಿಂದೆಯೇ ಸದ್ದಿಲ್ಲದೆ ಶುರುವಾಗಿದ್ದ ಈ ಚಿತ್ರ, ಸದ್ಯ ತನ್ನ ಸಂಪೂರ್ಣ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸಿದ್ದಾರೆ.
‘ಕಲ್ಯಾಣಿ’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಬಿ. ಎಂ. ಗಿರಿರಾಜ್, ‘ಇದೊಂದು ನವಿರಾದ ಪ್ರೇಮಕಥೆ. ಬೇರೆ ಬೇರೆ ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾದಲ್ಲಿದೆ. ಉತ್ತರ ಭಾರತದಿಂದ ಬರುವ ಹುಡುಗಿ ಮತ್ತು ದಕ್ಷಿಣ ಭಾರತದ ಹುಡುಗ … ಈ ಎರಡು ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂತ ಸಿನಿಮಾ ಇದಾಗಿದೆ’ ಎಂದರು.
ತಾವು ನಂಬಿರುವ ಮೌಲ್ಯಗಳನ್ನು ಈ ಚಿತ್ರದಲ್ಲೂ ಹೇಳಿರುವುದಾಗಿ ಹೇಳಿಕೊಳ್ಳುವ ಗಿರಿರಾಜ್, ‘ಇದು ನನ್ನದೇ ಸಿನಿಮಾದ ಇನ್ನೊಂದು ಅವತರಣಿಕೆ. ‘ಜಟ್ಟ’ ಮತ್ತು ‘ಅಮರಾವತಿ’ಯಲ್ಲಿದ್ದ ಆಕ್ರೋಶ ಇಲ್ಲಿರುವುದಿಲ್ಲ. ಇಲ್ಲಿ ನವಿರಾದ ಒಲವಿನ ಕಥೆಯನ್ನು ಮುನ್ನಲೆಯಾಗಿಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ಬಸವ ರೆಡ್ಡಿ ಅವರ ಕಥೆಯನ್ನು ಮೂಲವಾಗಿಟ್ಟುಕೊಂಡು, ಚಿತ್ರಕಥೆ ಬರೆದಿದ್ದೇನೆ’ ಎಂದರು.
ಈಗಾಗಲೇ ರಂಗಭೂಮಿಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಸಾಮ್ರಾಟ್ ಶೆಟ್ಟಿ ನಾಯಕನಾಗಿ ನಟಿಸಿದರೆ, ಸಿಮ್ರಾನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್, ‘ಆರ್. ಕೆ. ಸಿನೆಮಾಸ್’ ಬ್ಯಾನರಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ಕಲ್ಯಾಣಿ’ ಚಿತ್ರದಲ್ಲಿ ಸಾಮ್ರಾಟ್ ಶೆಟ್ಟಿ ಮತ್ತು ಸಿಮ್ರಾನ್ ಜೊತೆಗೆ ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಸೇರಿದಂತೆ ಅನೇಕ ರಂಗಭೂಮಿ ಕಲಾವಿದರು ನಟಿಸಿದ್ದಾರೆ.
ಒಂದೇ ಚಿತ್ರದಲ್ಲಿ ಅಣ್ತಮ್ಮ; ಪ್ರಣಾಮ್ ‘ಶ್ರೀರಸ್ತು’ಗೆ ಪ್ರಜ್ವಲ್ ಶುಭಮಸ್ತು


