‘ಕಾಂತಾರ’ ಅದಾಗೇ ಆಗಿದ್ದು, ‘ಚಾಪ್ಟರ್ 1’ ನಾವು ಮಾಡಿದ್ದು …

ಚಂದನವನ, ಸಂದರ್ಶನ, ಸಿನಿ ಸುದ್ದಿ

‘ಕಾಂತಾರ – ಚಾಪ್ಟರ್ 1’ ಚಿತ್ರದ ಬಿಡುಗಡೆಯ ನಂತರ ರಿಷಭ್‍ ಶೆಟ್ಟಿ ಮಾಧ್ಯಮದವರಿಗೆ ಮಾತಿಗೆ ಸಿಕ್ಕಿರಲಿಲ್ಲ. ಅದಕ್ಕೂ ಮೊದಲು ಚಿತ್ರದ ತಯಾರಿಯಲ್ಲಿದ್ದರಿಂದ ಮಾತಾಡಿರಲಿಲ್ಲ. ಈಗ ಚಿತ್ರ ಬಿಡುಗಡೆಯಾಗಿ, ಯಶಸ್ಸು ಕಂಡು, ಮುಂದಿನ ಚಿತ್ರ ಸಹ ಪ್ರಾರಂಭವಾಗಿದೆ. ಹೀಗಿರುವಾಗಲೇ, ರಿಷಭ್‍ ಬಹಳ ದಿನಗಳ ನಂತರ ಮಾಧ್ಯಮದವರೆದುರು ಒಂದಿಷ್ಟು ಮಾತನಾಡಿದರು. ಭೂತ, ವರ್ತಮಾನ, ಭವಿಷ್ಯದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು.

‘ಕಾಂತಾರ’ ಚಿತ್ರಗಳ ಗೆಲುವಿನ ಕುರಿತು …

‘ಕಾಂತಾರ’ ನನಗೆ ಏನು ಕೊಟ್ಟಿತು ಎಂದರೆ, ಅದು ನನಗೆ ಹೊಸ ಜೀವನ ಕೊಟ್ಟಿತು. ಜನರ ನಿಜವಾದ ಮುಖಗಳನ್ನು ತೋರಿಸಿತು. ನೀನಿನ್ನೂ ತುಂಬಾ ಕಲಿಯಬೇಕು ಎಂದು ತೋರಿಸಿಕೊಟ್ಟಿತು. ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿತು. ಇನ್ನೂ grounded ಆಗಿ ಇರಬೇಕು ಎಂದು ತೋರಿಸಿತು. ಹಾಗೆ ನೋಡಿದರೆ, ಒಂದು ಯಶಸ್ಸಿನಿಂದ ಎಲ್ಲವೂ ಮುಗಿಯುವುದಿಲ್ಲ. ಅದನ್ನು ಮುಂದುವರೆಸಬೇಕು. ಅದೊಂದು ನಿರಂತರವಾದ ಪ್ರಕ್ರಿಯೆ. ನಾವು ಎಷ್ಟು ಚೆನ್ನಾಗಿ ಬರೆಯುತ್ತೇವೋ, ಎಷ್ಟು ತಿದ್ದುತ್ತೇವೋ, ನಮ್ಮ ಬರವಣಿಗೆ ಅಷ್ಟೇ ಚೆನ್ನಾಗಿ ಆಗುತ್ತದೆ. ಬಿಡುಗಡೆಯಾಗುವವರೆಗೂ ‘ಕಾಂತಾರ’ದ ಬಗ್ಗೆ ಚರ್ಚೆ ಆಗುತ್ತಿರುತ್ತದೆ. ಬಿಡುಗಡೆ ಆದ ಮೇಲೆ ಮುಂದೇನು? ಎಂಬ ಪ್ರಶ್ನೆ ಕೇಳುತ್ತಾರೆ. ನನಗೂ ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ. ಮತ್ತೆ ಇನ್ನೊಂದು ಹೊಸ ಪ್ರಯತ್ನ.

ತಮ್ಮ ಮುಂದಿನ ಸಿನಿಮಾಗಳ ಕುರಿತು …

ಮೊದಲು ‘ಜೈ ಹನುಮಾನ್’ ಶುರುವಾಗಲಿದೆ. ನಂತರ ‘ಶಿವಾಜಿ’. ನಾನು ಒಂದು ಬಾರಿ ಒಂದೇ ಸಿನಿಮಾ ಮಾಡೋದು. ಒಟ್ಟೊಟ್ಟಿಗೆ ಎರಡು ಚಿತ್ರಗಳನ್ನು ಮಾಡೋದು ಕಷ್ಟ. ಏಕೆಂದರೆ, ಎರಡೂ ಚಿತ್ರಗಳಿಗೆ ಬೇರೆಬೇರೆ ಲುಕ್‍ ಇರುತ್ತವೆ. ಸಿನಿಮಾ ಒಂದೇ ಮಾಡುತ್ತಿದ್ದರೂ, ಜೊತೆಗೆ ಬರವಣಿಗೆ ಕೆಲಸ ನಡೆಯುತ್ತಿದೆ. ಹೈದರಾಬಾದ್‍ಗೆ ಬರಹಗಾರರನ್ನು ಕರೆದುಕೊಂಡು ಹೋಗಿ, ಅಲ್ಲಿ ಬರವಣಿಗೆ ಕೆಲಸವನ್ನು ಮುಂದುವರೆಸಿದ್ದೇನೆ. ಕೆಲಸ ಮುಗಿದ ಮೇಲೆ ಮುಂದಿನ ಯೋಚನೆ.

ಬೇರೆ ಭಾಷೆಗಳಲ್ಲಿ ಹೆಚ್ಚು ನಟಿಸುತ್ತಿರುವ ಕುರಿತು …

ನಾನು ಎಲ್ಲೂ ಹೋಗಲ್ಲ. ಇಲ್ಲೇ ಇರುತ್ತೇನೆ. ‘ಜೈ ಹನುಮಾನ್‍’ ಯಾವ ಭಾಷೆಯ ಸಿನಿಮಾ ಎಂದು ಯಾರೋ ಕೇಳಿದರು. ಕನ್ನಡ ಸಿನಿಮಾ ಅಂತ ಹೇಳಿದೆ. ಏಕೆಂದರೆ, ನಾನು ಮತ್ತು ಹನುಮಂತ ಇಬ್ಬರೂ ಕನ್ನಡದವರು. ಹಾಗಾಗಿ, ಅದು ಕನ್ನಡ ಸಿನಿಮಾ ಅಂತ ಹೇಳಿದೆ. ಅದೊಂದು ಪ್ಯಾನ್‍ ಇಂಡಿಯಾ ಸಿನಿಮಾ. ಎಲ್ಲಾ ಭಾಷೆಯವರೂ ಇದ್ದಾರೆ. ತೆಲುಗಿನವರು ತೆಲುಗಿನಲ್ಲಿ ಮಾತಾಡ್ತಾರೆ, ಕನ್ನಡದವರು ಕನ್ನಡದಲ್ಲಿ ಮಾತಾಡ್ತಾರೆ. ಮಿಕ್ಕಂತೆ ಬೇರೆ ಭಾಷೆಗಳಿಗೆ ಡಬ್‍ ಆಗುತ್ತದೆ.

ಜನ ಸಿನಿಮಾದಿಂದ ದೂರವಾಗುತ್ತಿರುವ ಕುರಿತು …

ನಾವು ಒಳ್ಳೆಯ ಸಿನಿಮಾಗಳನ್ನು ಕೊಡಬೇಕು. ‘ಸು ಫ್ರಮ್‍ ಸೋ’ ಬಗ್ಗೆ ಜನರಿಗೆ ಏನು ಗೊತ್ತಿತ್ತು? ರಾಜ್‍ ಶೆಟ್ರು ಬಿಟ್ಟರರೆ ಎಲ್ಲಾ ಹೊಸ ಕಲಾವಿದರು ಆ ಸಿನಿಮಾದಲ್ಲಿ ಇದ್ದರು. ಜನ ಪ್ರೀಮಿಯರ್ ಶೋ ನೋಡಿ ಖುಷಿಪಟ್ಟರು. ಅದೇ ರೀತಿ ಜನಪ್ರಿಯ ನಟರು ಯಾವುದೋ ಸಿನಿಮಾದಲ್ಲಿದ್ದಾರೆ ಮತ್ತು ಜನ ಆ ಸಿನಿಮಾಗಳನ್ನು ನೋಡಲಿಲ್ಲ ಎಂದರೆ, ಜನರಿಗೆ ಆ ಸಿನಿಮಾ ಇಷ್ಟವಾಗಲಿಲ್ಲ ಎಂದರ್ಥ. ಮಲಯಾಳಂನಲ್ಲಿ ‘ವಾಳಾ 2’ ಎಂಬ ಸಿನಿಮಾ ಬಂತು. ಚಿತ್ರಮಂದಿರಗಳಿಗೆ ಬಂದ ಮೇಲೆ ಅದರ ಬಗ್ಗೆ ಗೊತ್ತಾಗಿದ್ದು. ನೋಡಿದರೆ, ದೊಡ್ಡ ಕಲೆಕ್ಷನ್‍ ಮಾಡುತ್ತಿದೆ. ಒಳ್ಳೆಯ ಸಿನಿಮಾಗಳನ್ನು ಮಾಡಬೇಕು. ಜನರ ಅಭಿರುಚಿ ಬದಲಾಗುತ್ತಿದೆ.

ಚಿತ್ರಮಂದಿಗಳಿಗೆ ಸ್ಪರ್ಧೆ ಒಡ್ಡುತ್ತಿರುವ ಓಟಿಟಿ ಕುರಿತು …

ಓಟಿಟಿ ಬಂದು ಎಷ್ಟೋ ಕಾಲ ಆಯ್ತು. ನಾವಿನ್ನೂ ಹಳೆಯ ಕಥೆಯನ್ನೇ ಮಾತಾಡುತ್ತಿದ್ದೇವೆ. ಇನ್ನೂ ಅದೇ ಗುಂಗಿನಲ್ಲಿ ಕೆಲವರು ಮಾತಾಡುತ್ತಿದ್ದಾರೆ. ಓಟಿಟಿ ಹಳೆಯದಾಗುತ್ತಿದೆ. ನಾವಿನ್ನೂ ಅಪ್ಡೇಟ್‍ ಆಗಿಲ್ಲ. ಅದು ಇನ್ನೊಂದು ಟಿವಿ ಆಗುತ್ತಿದೆ. ಇನ್ನೂ ನಾವು ಓಟಿಟಿ, ಓಟಿಟಿ ಅನ್ನುತ್ತಲೇ ಇದ್ದೇವೆ. ಅದಕ್ಕೆ ಬೇಕಾದ ಕಂಟೆಂಟ್‍ ಸಿಗುತ್ತದೆ. ಆದರೆ, ಚಿತ್ರಮಂದಿರಕ್ಕೆ ಏನು ಬೇಕು? ಅಂತಿಮವಾಗಿ ಚಿತ್ರಮಂದಿರವೇ ಮುಖ್ಯ. ಚಿತ್ರಮಂದಿರಗಳಿಗೆ ಜನ ಬರಬೇಕೆಂದರೆ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಯೋಚಿಸಬೇಕು.

ಸಿನಿಮಾಗಳು ತಡವಾಗುತ್ತಿರುವ ಕುರಿತು …

ನಾನೇ ಬರೆದು, ನಿರ್ದೇಶನ ಮಾಡಿ ನಟನೆ ಮಾಡುತ್ತೇನೆ ಎಂದರೆ, ಅದಕ್ಕೆ ಅದರದ್ದೇ ಆದ ಸಮಯ ತಗಲುತ್ತದೆ. ಯಾವ ಕಥೆ ಒಪ್ಪಿರುತ್ತೀವೋ, ಅದಕ್ಕೆ ಅದರದ್ದೇ ಆದ ತಯಾರಿಗಳು ಬೇಕಾಗುತ್ತವೆ. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ತರಹದ ಸಿನಿಮಾಗಳನ್ನು ಬೇಗ ಮಾಡಬಹುದು. ಆ ತರಹದ ಕಥೆಗಳು ಸಿಗಬೇಕು. ‘ಕಾಂತಾರ’ ಬಹಳ ಬೇಗವಾಯ್ತು. ಒಂದು ವರ್ಷದೊಳಗೆ ಆ ಕಥೆ ಹುಟ್ಟಿ, ಅದು ಬೆಳೆದು, ಶೂಟಿಂಗ್ ಮಾಡಿ, ಬಿಡುಗಡೆಯೂ ಆಯ್ತು. ಅದರ ಗಾತ್ರಕ್ಕೆ ಹೋಲಿಸಿದರೆ, ಅದು ಬಹಳ ವೇಗವಾಗಿ ಮಾಡಿದ ಸಿನಿಮಾ. ಸಿನಿಮಾ ಯಾವತ್ತಿದ್ದರೂ ತನ್ನಿಂತಾನೇ ಆಗೋದು. ಸಿನಿಮಾಗಳನ್ನು ಮಾಡೋಕೆ ಆಗಲ್ಲ. ‘ಕಾಂತಾರ’ ಸಿನಿಮಾ ಅದಾಗೇ ಆಗಿದ್ದು, ‘ಕಾಂತಾರ’ ಚಾಪ್ಟರ್ 1’ ಚಿತ್ರ ನಾವು ಮಾಡಿದ್ದು.

ಕನ್ನಡದಲ್ಲಿ ಬರಹಗಾರರಿಲ್ಲ ಎಂಬ ವಿಷಯದ ಕುರಿತು …

ನಮ್ಮಲ್ಲಿ ಮುಖ್ಯವಾಗಿ ಬರವಣಿಗೆಯಲ್ಲಿ ಸಮಸ್ಯೆ ಇದೆ. ಇದು ಇವತ್ತಿನ ಸಮಸ್ಯೆ ಅಲ್ಲ. ತುಂಬಾ ಹಿಂದೆ ಆದಂತಹ ತಪ್ಪುಗಳು effect ಈಗ ಹೊಡೆಯುತ್ತಿದೆ. ನಮ್ಮಲ್ಲಿ ಬರಹಗಾರರ ಸಂಖ್ಯೆ ಬಹಳ ಕಡಿಮೆ ಇದೆ. ಇವತ್ತು ನಮ್ಮ ಅದೆಷ್ಟೋ ಬರಹಗಾರರು, ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಓಟಿಟಿಗೆ ಬರೆಯುತ್ತಿದ್ದಾರೆ. ಅವರ ಹೆಸರುಗಳು ಸಹ ನಮಗೆ ಗೊತ್ತಿರುವುದಿಲ್ಲ. ಏಕೆಂದರೆ, ಅವರು ಇಲ್ಲಿ ಬಂದು ಸುದ್ದಿ ಮಾಡುವುದಿಲ್ಲ. ತಮ್ಮ ಬಗ್ಗೆ ಎಲ್ಲೂ ಹೇಳಿಕೊಳ್ಳುವುದಿಲ್ಲ. ಅವರು ಸದ್ದಿಲ್ಲದೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲೆಲ್ಲಾ ರೀಮೇಕ್‍ ಹಕ್ಕುಗಳಿಗೆ ಇಷ್ಟು ದುಡ್ಡು ಕೊಡುತ್ತಿದ್ದರು. ಅದರಲ್ಲಿ 10 ಪರ್ಸೆಂಟ್‍ ಹಣವನ್ನೂ ಬರಹಗಾರರಿಗೆ ಕೊಡುತ್ತಿರಲಿಲ್ಲ. ಬರಹಗಾರರಿಗೂ ಅದು ಜೀವನ ಪ್ರಶ್ನೆ. ಅವರಿಗೂ ಒಳ್ಳೆಯ ಸಂಭಾವನೆ ಕೊಟ್ಟರೆ, ಇನ್ನಷ್ಟು ಬರಹಗಾರರು ಬರುತ್ತಾರೆ. ಇಲ್ಲವಾದರೆ ಎಷ್ಟು ದಿನ ಸಮಾಜ ಸೇವೆ ಮಾಡೋಕೆ ಸಾಧ್ಯ? ಒಂದು ಹಂತದವರೆಗೂ ಪ್ಯಾಶನ್‍. ಆ ನಂತರ ಹೊಟ್ಟೆಬಟ್ಟೆ ನೋಡಿಕೊಳ್ಳಬೇಕಲ್ಲ …

ತಮ್ಮ ಸಂಸ್ಥೆಯಡಿ ವಿಭಿನ್ನ ಚಿತ್ರ ಮಾಡುವುದರ ಕುರಿತು …

ವಿಭಿನ್ನ ಕಥೆಗಳನ್ನು ಮಾಡಬೇಕು ಅಂತಲೇ ನನ್ನ ಬ್ಯಾನರ್‍ನಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮಾಡಿದೆ. ಆರಂಭದಲ್ಲಿ ಒಳ್ಳೆಯ ಪ್ರತಿಕ್ರಿಯೆಗಳೇನೋ ಸಿಕ್ಕವು. ಆದರೆ, ಒಂದು ಹಂತದಲ್ಲಿ ಕೆಲವು ಸಿನಿಮಾಗಳಿಂದ ಕೆಟ್ಟ ಅನುಭವಗಳಾದವು. ‘ಪೆದ್ರೋ’ ತರಹದ ಸಿನಿಮಾಗಳನ್ನು ಆಚೆ ತರುವುದಕ್ಕೇ ಆಗಲಿಲ್ಲ. ಅದೇ ಸಮಯದಲ್ಲಿ ಕೆಲವು ಚಿತ್ರಗಳಿಗೆ ಓಟಿಟಿಯಲ್ಲಿ ಅವಕಾಶಗಳು ಸಿಗುತ್ತವೆ. ಹಾಕಿದ ಬಂಡವಾಳ ವಾಪಸ್ಸು ಸಿಗುತ್ತದೆ. ಕನ್ನಡ ಎಂಬ ಕಾರಣಕ್ಕೆ ಯಾರೂ ಖರೀದಿಸುವುದಿಲ್ಲ. ಹಾಗಿರುವಾಗ ಹಾಕಿದ ಹಣ? ದುಡ್ಡು ಬರಲಿಲ್ಲ ಎಂದರೆ ಹೆಚ್ಚು ಸಿನಿಮಾ ಮಾಡುವುದು ಕಷ್ಟ.

ಗಣೇಶ್‍ ಅಭಿನಯದ ‘ಪಿನಾಕ’ ಅ.02ಕ್ಕೆ; 16ರಂದು ‘ಬೃಂದಾವಿಹಾರಿ’

Discover more from KannadaScreens

Subscribe now to keep reading and get access to the full archive.

Continue reading