‘ಕರಾವಳಿ’ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿಲ್ಲ ಎನ್ನುವ ಗೊಂದಲ, ಗಲಾಟೆಗಳ ನಡುವೆಯೇ ಮಂಗಳವಾರ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಇಷ್ಟಕ್ಕೂ ಪ್ರಜ್ವಲ್ ಯಾಕೆ ಸಮಾರಂಬಕ್ಕೆ ಬರಲಿಲ್ಲ. ಅವರ ಮತ್ತು ಚಿತ್ರತಂಡದವರ ನಡುವೆ ಏನಾದರೂ ಮನಸ್ಥಾಪ ಉಂಟಾಗಿದೆಯೇ? ಈ ಬಗ್ಗೆ ನಿರ್ದೇಶಕ ಗುರುದತ್ ಗಾಣಿಗ ವಿವರವಾಗಿ ಮಾತನಾಡಿದ್ದಾರೆ.
ಪ್ರಜ್ವಲ್ ದೇವರಾಜ್ ಅವರು ಈ ಚಿತ್ರಕ್ಕೆ ಡಬ್ ಮಾಡಿಲ್ಲ. ಅವರ ಧ್ವನಿ ಹೊಂದುತ್ತದಾ? ಇಲ್ಲವಾ? ಎಂಬ ಜಿಜ್ಞಾಸೆ ಇದ್ದೇ ಇತ್ತು. ಏಕೆಂದರೆ, ಮಂಗಳೂರು ಶೈಲಿಯ ಕನ್ನಡವಾದ್ದರಿಂದ ಅವರಿಂದ ಮಾಡಿಸಬಹುದಾ, ಇಲ್ಲವಾ ಎಂಬ ಗೊಂದಲದಲ್ಲೇ ಇದ್ದೇವೆ. ಜುಲೈ 24ಕ್ಕೆ ಬಿಡುಗಡೆಯಾದ್ದರಿಂದ ಡಬ್ಬಿಂಗ್ ಸ್ಟುಡಿಯೋ ಬ್ಲಾಕ್ ಮಾಡಿಟ್ಟಿದ್ದೇವೆ. ಒಮ್ಮೆ ಡಬ್ಬಿಂಗ್ ಮಾಡಿಸಿ, ಚೆನ್ನಾಗಿ ಬಂದರೆ ಅದನ್ನು ಉಳಿಸಿಕೊಳ್ಳೋಣ ಎಂಬ ಯೋಚನೆ ಇದೆ. ಆದರೆ, ಇವತ್ತಿನ ಘಟನೆಯನ್ನು ನಿರೀಕ್ಷಿಸಿರಲಿಲ್ಲ.
ಇವರೆಲ್ಲರೂ ಗೊತ್ತಿರುವವರೇ. ಯಾರೋ ಹೊಸಬರಲ್ಲ ಎನ್ನುವ ಗುರುದತ್, ‘ಗೊತ್ತಿರುವವರೇ ಈ ರೀತಿ ಬಂದು ಸಮಾರಂಭದಲ್ಲಿ ಅಡಚಣೆ ಉಂಟು ಮಾಡಿದ್ದು ಯಾಕೆ ಎಂದು ಇದುವರೆಗೂ ಅರ್ಥವಾಗಿಲ್ಲ. ಅವರೆಲ್ಲರೂ ಕಾರ್ಯಕ್ರಮಕ್ಕೆ ಬಂದವರು. ಅವರು ಹಾಗೆ ಮಾಡಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇದು ಪ್ರಜ್ವಲ್ ಅವರ ಸಿನಿಮಾ. ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಎಂಬ ಹೆಸರಿದೆ ಅನ್ನೋದು ಬಿಟ್ಟರೆ, ಬೇರೆ ಯಾರ ಹೆಸರೂ ಇಲ್ಲ. ಪ್ರಜ್ವಲ್ ಈ ಚಿತ್ರದ ಕಥಾನಾಯಕ. ಈ ತರಹದ ಘಟನೆ ಮಾಡಬೇಕೆಂದುಕೊಂಡೇ ಬಂದಿರುವ ಹಾಗೆ ಕಾಣುತ್ತಿದೆ. ಯಾಕೆ ಎಂಬ ಪ್ರಶ್ನೆ ನನ್ನನ್ನೂ ಕಾಡುತ್ತಿದೆ. ಯಾಕಾಗಿದೆ ಎಂದು ಕೇಳುತ್ತಿನಿ. ಏನು ಸಮಸ್ಯೆ ಆದರೂ ಕೂತು ಬಗೆಹರಿಸಿಕೊಳ್ಳಬಹುದಿತ್ತು’ ಎಂದರು.
ಈ ತರಹದ ಘಟನೆ ಇದುವರೆಗೂ ನಾನು ನೋಡಿಲ್ಲ ಎನ್ನುವ ಗುರುದತ್, ‘ನಾನು ಮೊದಲ ಚಿತ್ರ ಮಾಡಿದ್ದು ಅಂಬರೀಶ್ ಅವರ ಬಳಿ. ಸುದೀಪ್ ಅವರ ಹತ್ತಿರ 10 ವರ್ಷಗಳ ಕಾಲ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಈ ತರಹದ ಘಟನೆ ಇದುವರೆಗೂ ನಾನು ನೋಡಿಲ್ಲ. ಕಳೆದ ಎರಡು ತಿಂಗಳಿನಿಂದ ಪ್ರಜ್ವಲ್ ಅವರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಅವರು ಬ್ಯುಸಿ ಇದ್ದಾರೆ ಎಂಬ ಉತ್ತರ ಬರುತ್ತಿದೆ. ನಾನು ನನ್ನ ಕೆಲಸಗಳಲ್ಲಿ ಬ್ಯುಸಿ ಇದ್ದೆ. ಈ ಸಮಸ್ಯೆ ನಿನ್ನೆ ರಾತ್ರಿವರೆಗೂ ಇಲ್ಲ. ನಾನು ಅವರ ಹತ್ತಿರ ಮಾತಾಡಿ ಎರಡು ತಿಂಗಳಾಗಿದೆ. ನನ್ನ ಫೋನ್ ಅಥವಾ ಮೆಸೇಜ್ಗಳಿಗೆ ಅವರು ಪ್ರತಿಕ್ರಿಯಿಸುತ್ತಿಲ್ಲ’ ಎಂದರು.
ಪ್ರಜ್ವಲ್ಗೆ ಪೂರ್ತಿ ಸಂಭಾವನೆ ಕೊಟ್ಟಿಲ್ಲ ಎಂಬ ವಿಷಯದ ಕುರಿತು ಮಾತನಾಡಿದ ಅವರು, ‘ಪ್ರಜ್ವಲ್ ಅವರಿಗೆ 1.25 ಕೋಟಿ ರೂ. ಸಂಭಾವನೆ ಮಾತಾಡಿದ್ದೆವು. ಅದರಲ್ಲಿ ಒಂದು ಕೋಟಿ ರೂ. ಕೊಟ್ಟಾಗಿದೆ. 25 ಲಕ್ಷ ರೂ. ಮಾತ್ರ ಕೊಡುವುದಿದೆ. ಅದನ್ನು ಕೊಡ್ತೀವಿ. ಅವರೂ ಒಪ್ಪಿದ್ದಾರೆ. ಆದರೆ, ಈ ಸಮಸ್ಯೆ ಯಾಕೆ ಎದುರಾಯಿತು ಗೊತ್ತಿಲ್ಲ. ಟ್ರೇಲರ್ ಆದ ಮೇಲೆ ಅವರ ಹತ್ತಿರ ಹೋಗಿ ಮಾತಾಡಿ, ಉಳಿದಿರುವ ವಿಷಯಗಳನ್ನು ಮಾತಾಡಿ ಬಗೆಹರಿಸಿಕೊಳ್ಳೋಣ ಎಂಬ ಯೋಚನೆಯಲ್ಲಿದ್ದೆವು. ಈ ವಿಷಯವನ್ನು ಅವರಿಗೆ ಹೇಳಿದ್ದೂ ಆಗಿದೆ. ಅವರಿಂದ ಉತ್ತರ ಬಂದಿಲ್ಲ’ ಎಂದರು.
ರಾಜ್ ಬಿ. ಶೆಟ್ಟಿ ಆಗಮನದಿಂದ ಪ್ರಜ್ವಲ್ ದೇವರಾಜ್ಗೆ ಇರುಸುಮುರುಸು ಆಗಿದೆ ಎಂಬ ಮಾತನ್ನು ತಳ್ಳಿಹಾಕಿದ ಗುರುದತ್, ‘ಆ ಪಾತ್ರ ಮೊದಲಿನಿಂದಲೂ ಕಥೆಯಲ್ಲಿ ಇತ್ತು. ಅದು ಪ್ರಜ್ವಲ್ ಅವರಿಗೂ ಗೊತ್ತಿತ್ತು. ದೊಡ್ಡ ಹೆಸರಿನ ಕಲಾವಿದರಿಂದ ಮಾಡಿಸಬೇಕು ಎಂಬ ಯೋಚನೆ ಇತ್ತು. ನಮ್ಮ ಪುಣ್ಯಕ್ಕೆ ರಾಜ್ ಶೆಟ್ಟರು ಬಂದರು. ಅದರಲ್ಲಿ ಯಾವುದೇ ಗೊಂದಲವಿರಲಿಲ್ಲ. ಇರುಸುಮುರುಸು ಆಗುವ ಪ್ರಶ್ನೆಯೇ ಇಲ್ಲ. ಯಾವ ದೊಡ್ಡ ಕಲಾವಿದ ಬೇಕಾದರೂ ಈ ಪಾತ್ರ ಮಾಡಬಹುದು ಎಂದು ಮೊದಲೇ ಹೇಳಿದ್ದೆ’ ಎಂದರು.


