ಮುಂಚಿನಂತೆ ಧಾರಾವಾಹಿಗಳನ್ನು ನೋಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೂ ಧಾರಾವಾಹಿಗಳ ಸಂಖ್ಯೆಯನೇ ಕಡಿಮೆಯಾಗಿಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ಉದಯ ಟಿವಿಯಲ್ಲಿ ‘ಮೂಗುತಿ ಮಲ್ಲಿʼ, ʻಮಹಾಲಕ್ಷ್ಮೀ ಮದುವೆʼ ಮುಂತಾದ ಧಾರಾವಾಹಿಗಳು ಪ್ರಾರಂಭವಾಗಿದ್ದವು. ʻಭಾಗ್ಯವಂತರುʼ ಎಂಬ ಮತ್ತೊಂದು ಧಾರಾವಾಹಿ ಇದೇ ಜುಲೈ 6 ರಿಂದ ಸೋಮವಾರದಿಂದ ಶನಿವಾರದವರಗೆ ರಾತ್ರಿ 7.30ಕ್ಕೆ ಪ್ರಸಾರಕ್ಕೆ ಸಜ್ಜಾಗಿದೆ.
ಈ ಕಥೆಯ ಕೇಂದ್ರಬಿಂದು ಜನನಿ ಎಂಬ ಅಪ್ಪನ ಮುದ್ದಿನ ಮಗಳು. ತನ್ನ ತಂದೆ ಶ್ಯಾಮಸುಂದರ್ ಅವರ ಕನಸನ್ನು ನನಸಾಗಿಸಲು ಶಿಕ್ಷಣವನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುತ್ತಾಳೆ. ತಂದೆಯ ಆಶಯದಂತೆ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಒತ್ತು ನೀಡಿದ ಜನನಿಯನ್ನು, ಉತ್ತಮ ಭವಿಷ್ಯಕ್ಕಾಗಿ ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿ ನಾಯಕ್ ಅವರೊಂದಿಗೆ ವಿವಾಹ ಮಾಡಲಾಗುತ್ತದೆ. ಶಕ್ತಿ, ಸಾಕಷ್ಟು ಸಂಪತ್ತನ್ನು ಗಳಿಸಿರುವ ಗುಣಶೇಖರ್ ನಾಯಕ್ ಅವರ ಕೊನೆಯ ಸಹೋದರ. ಗುಣಶೇಖರನ ಮನೆಯಲ್ಲಿ ಈಗಾಗಲೇ ಮೂರು ಡಬಲ್ ಡಿಗ್ರಿ ಸೊಸೆಯಂದಿರಿದ್ದು, ವ್ಯಾಪಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುತ್ತಾರೆ. ಇವರ ಜೊತೆಗೆ ನಾಲ್ಕನೇ ವಿದ್ಯಾವಂತ ಸೊಸೆಯಾಗಿ ಈ ಮನೆಗೆ ಕಾಲಿಡುತ್ತಾಳೆ ಜನನಿ. ಈ ಮನೆಯಲ್ಲಿ ಜನನಿ ಏನೆಲ್ಲಾ ಸವಾಲುಗಳನ್ನು ಎದರಿಸುತ್ತಾಳೆ ಎಂಬುದೇ ಕಥೆ.
ಈ ಧಾರಾವಾಹಿಯ ನಾಯಕಿ ಪಾತ್ರದಲ್ಲಿ ತನ್ವಿ ರಾವ್ ಮತ್ತು ನಾಯಕನಾಗಿ ವಿಕಾಸ್ ಅಭಿನಯಿಸುತ್ತಿದ್ದಾರೆ. ಹೆಸರಾಂತ ಕಲಾವಿದರಾದ ಸುಚೇಂದ್ರ ಪ್ರಸಾದ್, ಆರ್.ಕೆ.ಚಂದನ್ ಮತ್ತು ಶೋಭರಾಜ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ತಾರಾಗಣದಲ್ಲಿ ಸುರೇಶ್ ರೈ, ಶಾಲಿನಿ, ಸಮೀಕ್ಷಾ, ಧನ್ಯಾ, ವರ್ಷಾ, ಶ್ರೀವಾಯು, ಶೋಭರಾಜ್, ಮಧುಸಾಗರ, ಲಕ್ಷ್ಮೀ ಹೆಗ್ಡೆ, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್ ಮತ್ತು ಜಯಲಕ್ಷ್ಮೀ ಪಾಟೀಲ್ ಅಭಿನಯಿಸುತ್ತಿದ್ದಾರೆ.
ASM ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ʻಭಾಗ್ಯವಂತರುʼ ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನ ಮಾಡುತ್ತಿದ್ದಾರೆ. ರಮಣ ಬಂಗಾರು ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶುಭ್ರ ಪುತ್ರಕಳ ಅವರ ಕಥೆ-ಚಿತ್ರಕಥೆ ಶುಭ್ರ ಪುತ್ರಕಳ, ಸುಮಾ ಶಿಂಗ್ನಳ್ಳಿ ಸಂಭಾಷಣೆ ಈ ಧಾರಾವಾಹಿಗಿದೆ.


