ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ. ಆ ನಂತರ ಅವರು ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದರೂ, ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈ ವರ್ಷ ತಮ್ಮ ಅಭಿನಯದ ಎರಡೂ ಚಿತ್ರಗಳಾದರೂ ಬಿಡುಗಡೆಯಾಗುತ್ತವೆ ಎಂದು ಗಣೇಶ್, ಮಂಗಳವಾರವಷ್ಟೇ ಹೇಳಿಕೊಂಡಿದ್ದರು. ಎರಡ್ಮೂರು ವಾರಗಳ ಅಂತರದಲ್ಲಿ ಎರಡು ಚಿತ್ರಗಳು ಬಿಡುಗಡೆಯಾದರೂ ಆಶ್ಚರ್ಯವಿಲ್ಲ ಎಂದಿದ್ದರು.
ಅದೀಗ ನಿಜವಾಗಿದೆ. ಇತ್ತೀಚೆಗೆ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ಪಿನಾಕಾ ಮತ್ತು ‘ಬೃಂದಾವಿಹಾರಿ’ ಚಿತ್ರದ ಬಿಡುಗಡೆ ದಿನಾಂಕಗಳು ಘೋಷಣೆಯಾಗಿವೆ. ಎರಡು ವಾರಗಳ ಅಂತರದಲ್ಲಿ ಅವೆರಡೂ ಚಿತ್ರಗಳು ಬಿಡುಗಡೆ ಆಗಲಿವೆ. ಅಕ್ಟೋಬರ್ 02ರಂದು ‘ಪಿನಾಕ’ ಬಿಡುಗಡೆಯಾದರೆ, ಅಕ್ಟೋಬರ್ 16ರಂದು ‘ಬೃಂದಾವಿಹಾರಿ’ ಚಿತ್ರ ಬಿಡುಗಡೆಯಾಗಲಿದೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ಧನಂಜಯ್ ಮೊದಲ ನಿರ್ದೇಶನದ ಹಾಗೂ ಗಣೇಶ್ ನಾಯಕರಾಗಿ ನಟಿಸಿರುವ ‘ಪಿನಾಕ’ ಚಿತ್ರ ಇದೇ ಅಕ್ಟೋಬರ್ 2 ರಂದು ಬಿಡುಗಡೆಯಾಗುತ್ತಿದೆ. ಗಣೇಶ್ ಅವರ ಹುಟ್ಟುಹಬ್ಬದ ದಿನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ‘ಪಿನಾಕ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಇನ್ನು, ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ ‘ಬೃಂದಾವಿಹಾರಿ’ ಚಿತ್ರ ಅಕ್ಟೋಬರ್ 16 ರಂದು ಬಿಡುಗಡೆಯಾಗುತ್ತಿದೆ. ಗಣೇಶ್ ಅವರ ಹುಟ್ಟುಹಬ್ಬದ ದಿನ ವಿಶೇಷ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಗಣೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಬಿಡುಗಡೆಯ ದಿನಾಂಕ ಘೋಷಣೆ ಮಾಡಿದೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ ಹಾಗೂ ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದಾರೆ. ಜೊತೆಗೆ ರಾಮ್ ಕುಮಾರ್, ಸಾಧು ಕೋಕಿಲ, ಅವಿನಾಶ್, ‘ಕುರಿ’ ಪ್ರತಾಪ್, ರಂಗಾಯಣ ರಘು, ಅಚ್ಯುತ್ ಕುಮಾರ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.


