ರಣವೀರ್ ಸಿಂಗ್ ಅಭಿನಯದ ‘ದುರಂಧರ್ 2’ ಚಿತ್ರವು ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 19ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಒಂದೂವರೆ ತಿಂಗಳಲ್ಲಿ ಚಿತ್ರವು 1,800 ಕೋಟಿ ಪ್ಲಸ್ ಗಳಿಸುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಈಗ ‘ದುರಂಧರ್ 2’ ಚಿತ್ರವು ಕರ್ನಾಟಕದಲ್ಲೂ ಹೊಸ ದಾಖಲೆ ಮಾಡಿದೆ. ಚಿತ್ರವು ರಾಜ್ಯವೊಂದರಲ್ಲೇ 140 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಬಾಕ್ಸ್ಆಫೀಸ್ ಟ್ರಾಕರ್ ಸಕ್ನಿಲ್ಕ್ ಡಾಟ್‍ಕಾಮ್ ಹೇಳಿದೆ. ಈ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರವಾಗಿ ‘ದುರಂಧರ್ 2’ ಹೊರಹೊಮ್ಮಿದೆ.
ಇದಕ್ಕೂ ಮೊದಲು ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಪರಭಾಷಾ ಚಿತ್ರವೆಂದರೆ ಅದು ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ಆಗಿತ್ತು. ಆ ಚಿತ್ರವು ಕರ್ನಾಟಕದಲ್ಲಿ 129 ಕೋಟಿ ರೂ. ಗಳಿಕೆ ಮಾಡಿತ್ತು ಎಂದು ಹೇಳಲಾಗುತ್ತದೆ. ನಂತರದ ಸ್ಥಾನ ‘ಪುಷ್ಪ 2’ (122 ಕೋಟಿ ರೂ.) ಚಿತ್ರಕ್ಕಿತ್ತು. ಈಗ ಆ ಎರಡೂ ಚಿತ್ರಗಳ ದಾಖಲೆ ಮುರಿದು, ‘ದುರಂಧರ್ 2’ ಚಿತ್ರವು ಕರ್ನಾಟಕದಲ್ಲಿ 140 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸಕ್ನಿಲ್ಕ್ ವರದಿ ಮಾಡಿದೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಂದ ಚಿತ್ರವು 300 ಕೋಟಿ ರೂ. ಸಂಗ್ರಹಿಸಿದ್ದು, ಈ ಪೈಕಿ ಕರ್ನಾಟಕದಲ್ಲೇ ದೊಡ್ಡ ಮಟ್ಟದ ಗಳಿಕೆ ಆಗಿದೆ ಎಂಬುದು ಗಮನಾರ್ಹ.

ಒಂದು ಕಾಲಕ್ಕೆ ಹಿಂದಿ ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಪ್ರೇಕ್ಷಕರ ವಲಯವಿತ್ತು. ಹಿಂದಿ ಚಿತ್ರಗಳು ಗಾಂಧಿನಗರದ ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜೊತೆಗೆ, ಹೌಸ್‍ಫುಲ್ ಪ್ರದರ್ಶನಗಳನ್ನು ಕಾಣುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಿಂದಿ ಚಿತ್ರಗಳು ಸುದ್ದಿ ಮಾಡಿದ್ದು ಕಡಿಮೆಯೇ. ಒಂದು ಕಡೆ ಹಿಂದಿ ಚಿತ್ರಗಳ ಅಬ್ಬರ ಕಡಿಮೆಯಾದರೆ, ಇನ್ನೊಂದು ಕಡೆ ತೆಲುಗು ಮತ್ತು ತಮಿಳು ಚಿತ್ರಗಳ ಅಬ್ಬರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಇತ್ತು. ಬರೀ ‘ಬಾಹುಬಲಿ 2’ ಅಥವಾ ‘ಪುಷ್ಪ 2’ ಅಷ್ಟೇ ಅಲ್ಲ, ‘RRR’, ‘ಕಲ್ಕಿ 2898 ಎಡಿ’, ‘ಜೈಲರ್’, ‘ಕೂಲಿ’, ‘ದೇವರ’, ‘ವಿಕ್ರಮ್’, ‘GOAT’ ಮುಂತಾದ ಚಿತ್ರಗಳು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿವೆ. ಮಧ್ಯೆ ಮಧ್ಯೆ, ‘ಪಠಾಣ್’, ‘ಜವಾನ್’, ‘ಅನಿಮಲ್’, ‘ವಾರ್’ ಮುಂತಾದ ಹಿಂದಿ ಚಿತ್ರಗಳು ಒಳ್ಳೇಯ ಗಳಿಕೆ ಮಾಡಿದ್ದು ಬಿಟ್ಟರೆ, 100 ಕೋಟಿ ರೂ. ಕ್ಲಬ್ ಸೇರಿರಲಿಲ್ಲ. ‘ದುರಂಧರ್ 2’ ಚಿತ್ರವು ರಾಜ್ಯದಲ್ಲಿ 100 ಕೋಟಿ ರೂ. ಕ್ಲಬ್ ಸೇರಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ, ಚಿತ್ರ ಬಿಡುಗಡೆಯಾಗಿ ಕೇವಲ 12 ದಿನಗಳಲ್ಲೇ ದಾಖಲಾಗಿತ್ತು. ಈಗ ಒಟ್ಟಾರೆ, ಕರ್ನಾಟಕದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಮೊದಲ ಪರಭಾಷಾ ಚಿತ್ರವಾಗಿದೆ.

ಒಂದು ಕಡೆ ಪರಭಾಷಾ ಚಿತ್ರವೊಂದು ಕರ್ನಾಟಕದಲ್ಲಿ ಹೊಸ ದಾಖಲೆ ಬರೆದರೆ, ಕನ್ನಡ ಚಿತ್ರಗಳು ಪ್ರೇಕ್ಷಕರು, ಯಶಸ್ಸು, ಗಳಿಕೆ … ಎಲ್ಲದರಲ್ಲೂ ಅಭಾವ ಎದುರಿಸುತ್ತಿವೆ. ಕಳೆದ 18 ವಾರಗಳಲ್ಲಿ 90 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ಈ 90 ಪ್ಲಸ್ ಚಿತ್ರಗಳು ಮಾಡದ ಗಳಿಕೆ, ‘ದುರಂಧರ್ 2’ ಒಂದೇ ಮಾಡಿದೆ ಎನ್ನುವುದು ಗಮನಾರ್ಹ. ಈ ಪೈಕಿ ‘ಲವ್ ಮಾಕ್ಟೇಲ್ 3’, ‘ರಕ್ಕಸಪುರದೊಳ್’ನಂತಹ ಬೆರಳಣಿಕೆಯಷ್ಟು ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದರ ಜೊತೆಗೆ ಒಂದಿಷ್ಟು ಲಾಭ ಕಂಡಿದ್ದು ಬಿಟ್ಟರೆ, ಮಿಕ್ಕಂತೆ ಬಹಳಷ್ಟು ಚಿತ್ರಗಳು ಲಾಭವಿರಲಿ, ಕನಿಷ್ಠ ಗಳಿಕೆಯನ್ನು ಮಾಡಲಿಲ್ಲ.

ಈ 18 ವಾರಗಳಲ್ಲಿ ಅದೆಷ್ಟು ಚಿತ್ರಮಂದಿರಗಳಲ್ಲಿ, ಅದೆಷ್ಟು ಪ್ರದರ್ಶನಗಳು ರದ್ದಾಗಿವೆ ಎಂದು ಹುಡುಕುತ್ತಾ ಹೊರಟರೆ, ಅದೇ ಒಂದು ದಾಖಲೆಯಾಗುತ್ತದೆ. ಇನ್ನು, ಹೆಸರೇ ಕೇಳದ ಚಿತ್ರಗಳು, ಯಾವಾಗಲೋ ಮಾಡಿಟ್ಟುಕೊಂಡ ಚಿತ್ರಗಳು, ಯಾರ ಪ್ರೋತ್ಸಾಹ ಮತ್ತು ಬೆಂಬಲವಿಲ್ಲದ ತಬ್ಬಲಿ ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆಯಾಗಿವೆ. ‘ದುನಿಯಾ’ ವಿಜಯ್, ಧ್ರುವ ಸರ್ಜಾ, ರಾಜ್ ಬಿ. ಶೆಟ್ಟಿ, ಸತೀಶ್ ನೀನಾಸಂ, ಉಪೇಂದ್ರ, ವಿಜಯ್ ರಾಘವೇಂದ್ರ, ಅಜೇಯ್ ರಾವ್, ಧನ್ವೀರ್, ಆದಿತ್ಯ, ಪೃಥ್ವಿ ಅಂಬಾರ್ ಮುಂತಾದ ಹಳಬರನ್ನು ಹೊರತುಪಡಿಸಿದರೆ, 90 ಪ್ಲಸ್ ಚಿತ್ರಗಳಲ್ಲಿ ಶೇ. 90ರಷ್ಟು ಹೊಸಬರ ಚಿತ್ರಗಳು ಸಿಗುತ್ತವೆ. ಕೆಲವು ಚಿತ್ರಗಳಲ್ಲಿ ನಾಯಕ-ನಾಯಕಿ, ನಿರ್ಮಾಪಕರು, ನಿರ್ದೇಶಕರು ಹೊಸಬರಾದರೂ, ಕೆಲವು ಹಳೆಯ ಮತ್ತು ಹಿರಿಯ ಪೋಷಕ ನಟ-ನಟಿಯರು ಮತ್ತು ತಂತ್ರಜ್ಞರು ಹಳಬರಿರುತ್ತಾರೆ. ಎಷ್ಟೋ ಚಿತ್ರಗಳಲ್ಲಿ ಸಂಪೂರ್ಣ ಹೊಸಬರೇ ಇರುವುದನ್ನು ಗಮನಿಸಬಹುದು.
ಕನ್ನಡದಲ್ಲಿ ಕಳೆದ ವರ್ಷ ಮೇ ಎರಡನೇ ವಾರದ ಹೊತ್ತಿಗೆ 100 ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷ ಒಂದೆರಡು ವಾರಗಳ ಕಾಲ ವಿಳಂಬವಾದರೂ, ಮೇ ತಿಂಗಳಲ್ಲೇ ಕನ್ನಡ ಚಿತ್ರರಂಗ ಸೆಂಚ್ಯುರಿ ಬಾರಿಸುವ ಸಾಧ್ಯತೆ ಇದೆ. ಸದ್ಯದ ಟ್ರೆಂಡ್ ನೋಡಿದರೆ, ಈ ವರ್ಷವೂ 250ರ ಆಸುಪಾಸಿನಲ್ಲಿ ಚಿತ್ರಗಳು ಬಿಡುಗಡೆಯಾಗುವ ನಿರೀಕ್ಷೆ ಇವೆ. ಸಂಖ್ಯೆ ದೊಡ್ಡದಾಗುವುದರ ಜೊತೆಗೆ ಸೋಲು, ನಷ್ಟವೂ ದೊಡ್ಡದಾಗುತ್ತಿದೆ. ಲಾಭ-ನಷ್ಟಕ್ಕಿಂತ ಕನ್ನಡ ಚಿತ್ರಗಳಿಂದ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ವಿಮುಖರಾಗುತ್ತಿದ್ದಾರೆ. ಪರಿಹಾರಗಳನ್ನು ಇನ್ನೂ ಹುಡುಕದಿದ್ದರೆ ಕಷ್ಟ ಕಷ್ಟ ಕಷ್ಟ …


