ಏನಿದು ‘ಗೀಕ್’? 50 ಸೆಲೆಬ್ರಿಟಿಗಳಿಂದ ಟೀಸರ್ ಅನಾವರಣ …

ಚಂದನವನ, ಸಿನಿ ಸುದ್ದಿ

ಬೇರೆ ಭಾಷೆಗಳಲ್ಲಿ ವಿಭಿನ್ನ ಕ್ರೈಂ ಥ್ರಿಲ್ಲರ್‍ಗಳು ನಿರ್ಮಾಣವಾಗುತ್ತಿದ್ದರೆ, ಕನ್ನಡ ಚಿತ್ರರಂಗದಲ್ಲಿ ಇನ್ನು ಹಳೆಯ ರೌಡಿಸಂ, ಲಾಂಗ್‍-ಮಚ್ಚು ಚಿತ್ರಗಳೇ ರಾರಾಜಿಸುತ್ತಿವೆ. ಅಲ್ಲೊಂದು ಇಲ್ಲೊಂದು ವಿಭಿನ್ನ ಶೈಲಿಯ ಕ್ರೈಮ್‍ ಥ್ರಿಲ್ಲರ್‍ಗಳು ಬರುತ್ತಿವೆ.

ಅದರಲ್ಲೂ ಸೈಬರ್ ಕ್ರೈಂ ಜಾನರ್ ಹೊಂದಿರುವ ಸಿನಿಮಾಗಳು ತೀರಾ ವಿರಳ. ಅದರ ಜಾಗವನ್ನು ತುಂಬಲು ‘ಗೀಕ್’ (GEEK) ಎಂಬ ಚಿತ್ರ ಸದ್ದಿಲ್ಲದೆ ತಯಾರಾಗಿದೆ. ಡಿ. ಹರಿ ಪ್ರಕಾಶ್ ನಿರ್ದೇಶಿಸಿರುವ ಈ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಏನಿದು ಗೀಕ್‍? ಅದನ್ನು ಗೂಗಲ್‍ನಲ್ಲಿ ಹುಡುಕಿ ನೋಡಿ. ಇದೊಂದು ಸೈಬರ್‍ ಕ್ರೈಮ್‍ ಕುರಿತ ಚಿತ್ರ. ಇತ್ತೀಚೆಗೆ ಮೊಬೈಲ್ ಸಂಬಂಧಿತ ಆ್ಯಪ್‌ಗಳು ಹಾಗೂ ಡೇಟಾ ದುರುಪಯೋಗಪಡಿಸಿಕೊಳ್ಳುತ್ತಿರುವ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ‘ಗೀಕ್‍’ ಕೂಡಾ ಇದೇ ವಿಷಯದ ಕುರಿತಾದ ಸೈಬರ್ ಕ್ರೈಂ, ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ. ಒಂದು ಹೊಸ ವಿಷಯದ ಜೊತೆಗೆ ಥ್ರಿಲ್ ನೀಡಬೇಕು ಎಂಬ ನಿಟ್ಟಿನಲ್ಲಿ ಈ ಸಿನಿಮಾ ತಯಾರಾಗಿದೆ.

ಇಷ್ಟಕ್ಕೂ ‘ಗೀಕ್‍’ನಲ್ಲೇನಿದೆ ಎಂದು ತೋರಿಸುವುದಕ್ಕೆ ಈ ಚಿತ್ರದ ಟೀಸರ್ ಅನ್ನು ಡಿ ಬೀಟ್ಸ್ ಯು ಟ್ಯೂಬ್ ಚಾನಲ್ ಮೂಲಕ ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ, ಚಂದನವನದ 50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಈ ಟೀಸರ್‍ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಬಹುತೇಕ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರದಲ್ಲಿ ಪ್ರವೀಣ್ ತೇಜ್, ಚೈತ್ರಾ ಆಚಾರ್, ಕಿರಣ್ ಶ್ರೀನಿವಾಸ್, ವಿರಾನಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್.ವಿ.ಎಂ ಪ್ರೊಡಕ್ಷನ್ಸ್ ಹಾಗೂ ಹರಿಪ್ರಕಾಶ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ನಾಗರಾಜ್ ಹಾಗೂ ಪ್ರಿಯಾಂಕಾ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಜೋ ಕೋಸ್ಟಾ ಸಂಗೀತ ಈ ಚಿತ್ರಕ್ಕಿದೆ.

ಗೌರ್ ನಾಯ್ಡು ಆದ ಶಿವಣ್ಣ; ‘ಪೆದ್ದಿ’ ಚಿತ್ರದ ಗೆಟಪ್ ಅನಾವರಣ

Discover more from KannadaScreens

Subscribe now to keep reading and get access to the full archive.

Continue reading