ಒಂದು ಚಿತ್ರ ಹಿಟ್ ಆದರೆ, ಬೇರೆ ಭಾಷೆಗಳಿಗೆ ತಕ್ಷಣವೇ ಬೇರೆ ಭಾಷೆಗಳಿಗೆ ಡಬ್ ಅಥವಾ ರೀಮೇಕ್ ಆಗುವುದು ಸಹಜ. ಆದರೆ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಲಕ್ಷ್ಮೀ ಅಭಿನಯದ ತೆಲುಗು ಚಿತ್ರ ‘ಮಿಥುನಂ’ ಬಿಡುಗಡೆಯಾಗಿ 14 ವರ್ಷಗಳ ನಂತರ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.
ದೇಶ ಕಂಡ ಅತ್ಯುತ್ತಮ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅತ್ಯುತ್ತಮ ನಟರೂ ಹೌದು. ಅವರು ಅಭಿನಯಿಸಿದ ಚಿತ್ರ ‘ಮಿಥುನಂ’. ಈ ಚಿತ್ರ ತೆಲುಗಿನಲ್ಲಿ 2012ರಲ್ಲಿ ಬಿಡುಗಡೆಯಾಗಿತ್ತು. ತೆಲುಗಿನ ಖ್ಯಾತ ನಟ ತನಿಕೆಳ್ಳ ಭರಣಿ ನಿರ್ದೇಶನದ ಈ ಚಿತ್ರದ ಕನ್ನಡ ಅವತರಣಿಕೆ ಜೂನ್ 5 ರಂದು ಬಿಡುಗಡೆಯಾಗಲಿದೆ.
ಜೂನ್ 4 ಎಸ್.ಪಿ.ಬಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ. ಮಧುಸೂದನ್ ಹವಾಲ್ದಾರ್ ಹಾಗೂ ತ್ರಿವಿಕ್ರಮ ಜೋಶಿ ಅವರ ಸಾರಥ್ಯದಲ್ಲಿ ಈ ಚಿತ್ರದ ಕನ್ನಡದ ಅವತರಣಿಕೆ ಸಿದ್ದವಾಗಿದೆ. ಶ್ರೀದೇವಿ ಶ್ರೀನಿವಾಸ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ಬಿಡುಗಡೆ ಸಮಾರಂಭ ಹಾಗೂ ಪೂರ್ವಭಾವಿ ಪ್ರದರ್ಶನ ನಡೆಯಿತು. ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಸುಂದರರಾಜ್, ಎಸ್.ಪಿ.ಬಿ ಅವರ ಆಪ್ತರಾದ ಗೋಪಿ, ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್, ಪಿ.ಆರ್.ಓ ಸುಧೀಂದ್ರ ವೆಂಕಟೇಶ್, ಶ್ರೀದೇವಿ ಶ್ರೀನಿವಾಸ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಎಸ್ ಪಿ ಬಿ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ವಿದೇಶದಲ್ಲಿರುವ ಮಕ್ಕಳು ತಂದೆ ತಾಯಿ ವೃದ್ಧಾಪ್ಯದ ಸಮಯದಲ್ಲೂ ನೋಡಿಕೊಳ್ಳಲು ಬರದೆ ಇದ್ದಾಗ ಆ ತಂದೆ ತಾಯಿ ಪರಿಸ್ಥಿತಿ ಹೇಗಿರತ್ತದೆ ಎಂಬುದು ಈ ಚಿತ್ರದ ಸಾರಾಂಶ.
ಈ ಚಿತ್ರದ ಕುರಿತು ಮಾತನಾಡುವ ಮಧುಸೂಧನ್ ಹವಾಲ್ದಾರ್, ‘ನನಗೆ ತನಿಕೆಳ್ಳ ಭರಣಿ ಅವರು ಪರಿಚಯ. ಅವರ ಬಳಿ ಈ ಸಿನಿಮಾದ ರೈಟ್ಸ್ ಕೇಳಿದಾಗ, ಅವರು ನಿರ್ಮಾಪಕರನ್ನು ಕೇಳಿ ಎಂದರು. ನಿರ್ಮಾಪಕರು ಕನ್ನಡದಲ್ಲಿ ಬಿಡುಗಡೆ ಮಾಡುವುದಕ್ಕೆ ಖುಷಿಯಿಂದ ರೈಟ್ಸ್ ನೀಡಿದರು. ಅದರೆ, ಚಿತ್ರವನ್ನು ಆರು ತಿಂಗಳಲ್ಲಿ ಬಿಡುಗಡೆ ಮಾಡಬೇಕು ಮತ್ತು ಎಸ್.ಪಿ.ಬಿ ಅವರ ಧ್ವನಿಗೆ ಯಾವುದೇ ಧಕ್ಕೆ ಬಾರದ ಹಾಗೆ ಅಂತಹವರಿಂದ ಡಬ್ಬಿಂಗ್ ಮಾಡಿಸ ಬೇಕು ಎಂದರು. ಕನ್ನಡದಲ್ಲಿ ಪ್ರಭಾಕರ್ ಅವರ ಧ್ವನಿ ಕೇಳಿದಾಗ ಎಸ್.ಪಿ.ಬಿ ಅವರ ಧ್ವನಿ ಕೇಳಿದ ಹಾಗೆ ಅನಿಸುತ್ತದೆ’ ಎಂದರು.
‘ಮಿಥುನಂ’ ಚಿತ್ರವನ್ನು 14 ವರ್ಷಗಳ ನಂತರ ಬಿಡುಗಡೆ ಮಾಡುತ್ತಿರುವ ಕುರಿತಾಗಿ ಮಾತನಾಡಿದ ಅವರು, ‘ಈ ಚಿತ್ರ 14 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು, ಆಗಿನ ಸೆನ್ಸಾರ್ ಮಂಡಳಿ ನಿಯಮಗಳಿಗೂ ಈಗಿನ ನಿಯಮಗಳಿಗೂ ವ್ಯತ್ಯಾಸವಿದೆ. ಅನಿಮಲ್ ಬೋರ್ಡ್ ಪರ್ಮಿಷನ್ ದೊರಕುವುದು ಸ್ವಲ್ಪ ತಡವಾಗಿರುವುದರಿಂದ ಕನ್ನಡದ ಅವತರಣಿಕೆ ಬಿಡುಗಡೆ ಸ್ವಲ್ಪ ತಡವಾಯಿತು. ಈಗ ಜೂನ್ 5 ರಂದು ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ’ ಎಂದರು.


