ಈ ಹಿಂದೆ ಅಂಥದ್ದೊಂದು ಪ್ರಯೋಗವಾಗಿತ್ತು. ‘ನೀನೇ ಬರೀ ನೀನೇ’ ಎಂಬ ಆಲ್ಬಂ ಜನಪ್ರಿಯವಾದ ನಂತರ, ಆ ಹಾಡುಗಳ ಸುತ್ತ ಕಥೆ ಹೆಣೆದು ‘ನೀನೇ ಬರೀ ನೀನೇ’ ಎಂಬ ಚಿತ್ರ ಮಾಡಲಾಗಿತ್ತು. ಅನೀಶ್ ತೇಜೇಶ್ವರ್ ಅಭಿನಯದ ಈ ಚಿತ್ರವನ್ನು ದೀಪಕ್ ತಿಮ್ಮಯ್ಯ ನಿರ್ದೇಶನ ಮಾಡಿದ್ದರು. ಈಗ ಅಂಥದ್ದೇ ಇನ್ನೊಂದು ಪ್ರಯತ್ನ ಸದ್ದಿಲ್ಲದೆ ಕನ್ನಡದಲ್ಲಾಗುತ್ತಿದೆ.
ಮೊಗಾಚಿ ಲಾರಂ ಕ್ರಿಯೇಶನ್ ಅಡಿಯಲ್ಲಿ ಸಿದ್ದಗೊಂಡಿರುವ ’ನೀನಿದ್ದರೆ’ ಹಾಡು ಸದ್ಯದಲ್ಲೇ ಸಿನಿಮಾ ಆಗಲಿದೆ. ಈ ಚಿತ್ರವನ್ನು ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ ನಿರ್ದೇಶಲಿದ್ದಾರೆ.
ಅದಕ್ಕೂ ಮೊದಲು 5.52 ನಿಮಿಷದ ಆಲ್ಬಂ ‘ನೀನ್ಯಾರೆ’ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಸಿರಿ ಮ್ಯೂಸಿಕ್ ಸಂಸ್ಥೆಯು ಹೊರತಂದಿರುವ ಈ ಹಾಡನ್ನು ಹಿರಿಯ ನಟ ರಮೇಶ್ ಭಟ್ ಹಾಡನ್ನು ಲೋಕಾರ್ಪಣೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ಮಂಗಳೂರು ಮೂಲದ, ಸದ್ಯ ಆಸ್ಟೇಲಿಯಾ ನಿವಾಸಿ, ಅನಿವಾಸಿ ಭಾರತೀಯ ನಾರ್ಬಟ್ ನಿರ್ಮಾಣ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವುದರ ಜೊತೆಗೆ ಈ ಹಾಡನ್ನು ನಿರ್ದೇಶಿಸಿರುವುದು ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ.

ಈ ಹಾಡಿನ ಕುರಿತು ಮಾತನಾಡುವ ವಿನ್ಸೆಂಟ್ ಫರ್ನಾಂಡಿಸ್, ‘ಮೊದಲು ಒಂದು ಹಾಡು ಮಾಡುವುದೆಂದು ಯೋಜನೆ ಹಾಕಲಾಗಿತ್ತು. ಮುಂದೆ ಅದು ಐದಕ್ಕೆ ಬೆಳೆಯಿತು. ಇದನ್ನೇ ಸಿನಿಮಾ ಯಾಕೆ ಮಾಡಬಾರದು ಎಂಬ ಆಲೋಚನೆ ಬಂದು, ಅದಕ್ಕೂ ನಿರ್ಮಾಪಕರಿಂದ ಹಸಿರು ನಿಶಾನೆ ಸಿಕ್ಕಿದೆ. ಎಲ್ಲಾ ಅಂದುಕೊಂಡಂತೆ ಆದರೆ, ಮೂರು ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ’ ಎಂದರು.
ವಿಶೇಷವೆಂದರೆ, ಈ ಹಾಡಿನಲ್ಲಿ ನಿಜಜೀವನದ ತಾಯಿ-ಮಗಳು ನಟಿಸಿರುವುದು ವಿಶೇಷ. ನಾಯಕನಾಗಿ ಅವಿಲ್ ರೋಡ್ರೀಗಸ್, ನಾಯಕಿಯಾಗಿ ಕೆರನ್ ಪಿಂಟೋ ಹಾಗೂ ಹಳೇ ಪ್ರೇಯಸಿಯಾಗಿ ಸ್ಮಿತಾ ಪಿಂಟೋ ಅಭಿನಯಿಸಿದ್ದಾರೆ. ಈ ಹಾಡಿಗೆ ಲಕ್ಷ್ಮೀಕಾಂತ್ ಛಾಯಾಗ್ರಹಣ, ರಾಜೇಶ್ ಚೌಹಾಣ್ ಸಂಕಲನ ಮಾಡಿದ್ದು, ಶಿಲ್ಪಾ ಕುಟಿನ್ಹೋ ಹಾಡಿದ್ದಾರೆ.


