ಮಗನಿಗಾಗಿ ಅಪ್ಪ-ಅಮ್ಮ ಸಿನಿಮಾ ನಿರ್ಮಾಣ ಮಾಡಿರುವ ಅದೆಷ್ಟೋ ಉದಾಹರಣೆಗಳಿವೆ. ನಟನಾಗಬೇಕು ಎಂಬ ತಮ್ಮನ ಬಹುವರ್ಷಗಳ ಆಸೆಯನ್ನು ಈಡೇರಿಸುವುದಕ್ಕೆ ಅಕ್ಕ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ. ತಮ್ಮನಿಗಾಗಿ ‘ಕೀರ್ತಿ ಐ ಲವ್ ಯೂ’ ಎಂಬ ಚಿತ್ರ ನಿರ್ಮಾಣ ಮಾಡಿದ್ದಾರೆ.
ಪೂಜಿತ ಎಸ್. ರಾವ್ ನಿರ್ಮಾಣದಲ್ಲಿ, ನಿರಂಜನ್ ಆರಾಧ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕೀರ್ತಿ ಐ ಲವ್ ಯು’ ಚಿತ್ರದ ‘ಮುದ್ದಾದ ಮೂಗುತಿ’ ಹಾಡು ಇತ್ತೀಚೆಗೆ ಸಿರಿ ಮ್ಯೂಸಿಕ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ನಾಯಕನಾಗಿ ಪ್ರಜ್ಯೋತ್ ಎಸ್. ರಾವ್ ನಟಿಸಿದ್ದಾರೆ. ನಿಧಿ ಗೌಡ ಈ ಚಿತ್ರದ ನಾಯಕಿ. ಅಭಿರಾಮ್ ಸಂಗೀತ ನೀಡಿರುವ ಮೂರು ಹಾಡುಗಳು ಚಿತ್ರದಲ್ಲಿವೆ. ಆ ಪೈಕಿ, ಅರುಣ್ ಕುಮಾರ್ ಬರೆದು, ಆರ್ಫಾಜ್ ಉಲ್ಲಾಳ್ ಹಾಡಿರುವ ಮೊದಲ ಹಾಡು ಬಿಡುಗಡೆಯಾಗಿದೆ.
ಈ ಚಿತ್ರದ ಮೂಲಕ ಪ್ರೀತಿಯ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಹೊರಟಿದ್ದಾರಂತೆ ಚಿತ್ರಕ್ಕೆ ಕಥೆಯನ್ನೂ ಬರೆದಿರುವ ನಿರ್ದೇಶಕ ನಿರಂಜನ್ ಆರಾಧ್ಯ. ಈ ಕುರಿತು ಮಾತನಾಡುವ ಅವರು, ‘ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಪ್ರೀತಿಯ ಕುರಿತು ಹಲವು ಚಿತ್ರಗಳು ಬಂದಿದೆಯಾದರೂ ನಾವು ಈ ಚಿತ್ರದಲ್ಲಿ ಪ್ರೀತಿಯ ಬಗ್ಗೆ ಹೇಳಿರುವ ವ್ಯಾಖ್ಯಾನವೇ ಬೇರೆ. ಅದರಲ್ಲೂ ಈಗಂತೂ ಚಿಕ್ಕ ವಯಸ್ಸಿನಲ್ಲೇ ಲವ್, ಡೇಟಿಂಗ್ ಎನ್ನುತ್ತಾರೆ. ಅದೆಲ್ಲಾ ತಪ್ಪು ಎಂದು ಯುವಜನತೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ’ ಎಂದರು.

ಆದರ್ಶ ಫಿಲಂ ಇನ್ಸ್ಟಿಟ್ಯೂಟ್‍ನಲ್ಲಿ ನಟನೆ ಕಲಿತಿರುವ ಪ್ರಜ್ಯೋತ್‍ಗೆ ಸುದೀಪ್ ಸ್ಫೂರ್ತಿಯಂತೆ. ‘ಅವರು ನನ್ನ ಆರಾಧ್ಯ ದೈವ. ನನ್ನ ಅಕ್ಕ ಪೂಜಿತಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ’ ಎಂದರು.
ಚಿತ್ರ ನಿರ್ಮಾಣಕ್ಕಿಳಿದ ಕುರಿತು ಮಾತನಾಡಿದ ಪೂಜಿತಾ, ‘ನನ್ನ ತಮ್ಮ ಪ್ರಜ್ಯೋತ್‍ಗೆ ಮೊದಲಿನಿಂದಲೂ ನಾಯಕನಾಗಬೇಕೆಂಬ ಆಸೆ. ಅವನ ಆಸೆಯನ್ನು ಈ ಚಿತ್ರ ನಿರ್ಮಾಣ ಮಾಡುವ ಮೂಲಕ ಪೂರ್ಣ ಮಾಡಿದ್ದೇನೆ. ಈಗಿನ ಯುವಜನತೆ ನೋಡಲೇ ಬೇಕಾದ ಚಿತ್ರವಿದು’ ಎಂದರು.
‘ಕೀರ್ತಿ ಐ ಲವ್ ಯೂ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಜುಲೈ 31 ರಂದು ತೆರೆಗೆ ಬರುತ್ತಿದೆ. ಚಿತ್ರಕ್ಕೆ ಅಭಿಷೇಕ್ ಛಾಯಾಗ್ರಹಣವಿದೆ.


