ಜನರಿಂದ ದೂರವಾದರೆ ಏನೂ ಕಲಿಯುವುದಕ್ಕೆ ಸಾಧ್ಯವಿಲ್ಲ: ಬಲ ರಾಜ್ ವಾಡಿ

ಚಂದನವನ, ಸಂದರ್ಶನ, ಸಿನಿ ಸುದ್ದಿ

ಕನ್ನಡದ ಅತ್ಯಂತ ಬ್ಯುಸಿ ಪೋಷಕ ನಟ ಯಾರು? ಸದ್ಯಕ್ಕೆ ಈ ಸ್ಥಾನದಲ್ಲಿರುವವರು ಬಲ ರಾಜ್ ವಾಡಿ. ಕಳೆದ ವರ್ಷ ಬಿಡುಗಡೆಯಾದ 250 ಚಿತ್ರಗಳಲ್ಲಿ ಅವರ ಅಭಿನಯದ 38 ಚಿತ್ರಗಳು ಬಿಡುಗಡೆಯಾಗಿದ್ದವಂತೆ. ಅಲ್ಲಿಗೆ ಅವರು ಅದೆಷ್ಟು ಬ್ಯುಸಿ ಎನ್ನುವುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ.

ಕುಮಾರ್ ಗೋವಿಂದ್‍ ಅಭಿನಯದ ‘ನೋಡು ಬಾ ನಮ್ಮೂರ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಬಲ ರಾಜ್ ವಾಡಿ, ನಂತರ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. 2016ರಲ್ಲಿ ಬಿಡುಗಡೆಯಾದ ಪಿ.ಎಚ್‍ ವಿಶ್ವನಾಥ್‍ ನಿರ್ದೇಶನದ, ಶ್ರೀನಾಥ್‍ ಅಭಿನಯದ ‘ಸುಳಿ’ ಚಿತ್ರದ ಮೂಲಕ ವಾಪಸ್ಸಾದರು. 10 ವರ್ಷಗಳಲ್ಲಿ 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಕಳೆದ ವರ್ಷ 38 ಚಿತ್ರಗಳು ಬಿಡುಗಡೆಯಾಗಿವೆ. ಈ ವರ್ಷ ಬಲ ರಾಜ್ ವಾಡಿ ಅಭಿನಯದ ‘ಶಿಖಂಡಿ’, ‘ಶೇರ್’, ‘ಸೂರ್ಯ – ದಿ ಪವರ್ ಆಫ್‍ ಲವ್‍’, ‘ದೈವ’ ಸೇರಿದಂತೆ 14 ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಬಿಡುಗಡೆಯಾಗಬೇಕಿರುವ ಚಿತ್ರಗಳ ಸಂಖ್ಯೆ ದೊಡ್ಡದಿದೆ.

ಬರೀ ಕನ್ನಡವಷ್ಟೇ ಅಲ್ಲ, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ಬಲ ನಟಿಸಿ ಬಂದಿದ್ದಾರೆ. ಧನಂಜಯ್‍ ಅಭಿನಯದ ತೆಲುಗು ಚಿತ್ರ ‘ಭೈರವ ಗೀತ’ದ ನಂತರ ಬಲ 14 ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರಂತೆ. ಮಲಯಾಳಂನಲ್ಲಿ ಪೃಥ್ವಿರಾಜ್‍ ಸುಕುಮಾರನ್‍ ಜೊತೆಗೆ ‘ಮೇಷ್ಟ್ರೋ’ ಚಿತ್ರದ ಜೊತೆಗೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು, ತಮಿಳಿನಲ್ಲಿ ‘ಮಫ್ತಿ’ಯ ರೀಮೇಕ್‍ನಲ್ಲಿ ನಟಿಸಿದ್ದಾರೆ.

ಬಲ ರಾಜ್ ವಾಡಿ ಹೆಚ್ಚುಹೆಚ್ಚು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಬಹುತೇಕ ಪಾತ್ರಗಳನ್ನು ಗಡ್ಡದಲ್ಲೇ ಕಾಣಿಸಿಕೊಂಡಿದ್ದಾರೆ. ಅವರನ್ನು ಒಂದೇ ತರಹ ನೋಡಿದ್ದವರಿಗೆ, ಬಲ ರಾಜ್ ವಾಡಿ ಅವರನ್ನು ಈಗ ಬೇರೆ ಲುಕ್‍ನಲ್ಲಿ ಕಾಣಬಹುದು. ಈಗ ಅವರು ಗಡ್ಡ ತೆಗೆಸಿದ್ದಾರೆ. ‘ಇತ್ತೀಚೆಗೆ ಮೂರು ತೆಲುಗು ಸಿನಿಮಾ ಮಾಡಿದೆ. ಮೂರರಲ್ಲೂ ಕ್ಲೀನ್ ಶೇವ್‍ ಜೊತೆಗೆ ಪೊಲೀಸ್‍ ಪಾತ್ರಗಳು ಸಿಕ್ಕಿವೆ. ಜೊತೆಗೆ ‘ಕಡಲ ಕೋಟೆ’ ಚಿತ್ರದಲ್ಲೂ ಒಂದು ಪಾತ್ರವಿತ್ತು. ‘ಕ್ಷೇತ್ರಪಾಲ’ ಎಂಬ ಇನ್ನೊಂದು ಚಿತ್ರ ಒಪ್ಪಿಕೊಂಡಿದ್ದೇನೆ. ಅದಕ್ಕೂ ಕ್ಲೀನ್‍ ಶೇವ್‍ ಅವಶ್ಯಕತೆ ಇತ್ತು’ ಎನ್ನುತ್ತಾರೆ.

ವಿಶೇಷವೆಂದರೆ, ಬಲ ರಾಜ್ ವಾಡಿ ಯಾವುದೇ ಪ್ರಾಂತ್ಯದ, ಯಾವುದೇ ಪಾತ್ರಕ್ಕೂ ಸೆಟ್‍ ಆಗುತ್ತಾರೆ. ‘ಕಾಂತಾರ’ದ ಬುಡಕಟ್ಟು ಜನಾಂಗದವರಾಗಿ ಕಾಣಿಸಿಕೊಳ್ಳುವ ಅವರು, ಉತ್ತರ ಕರ್ನಾಟಕದ ಇನ್ನೊಂದ್ಯಾವುದೋ ಪಾತ್ರಕ್ಕೂ ಒಗ್ಗುತ್ತಾರೆ. ಇನ್ನು, ಊರ ಗೌಡರ ಪಾತ್ರವಂತೂ ಸಲೀಸು. ಎಲ್ಲಾ ಪಾತ್ರಗಳಿಗೂ ಸೆಟ್ ಆಗೋದಕ್ಕೆ ಕಾರಣವೂ ರಂಗಭೂಮಿಯ ಒಡನಾಟ ಎಂಬುದು ಅವರ ಬಲವಾದ ನಂಬಿಕೆ.

ಈ ಕುರಿತು ಮಾತನಾಡುವ ಅವರು, ‘ಅದಕ್ಕೆ ಕಾರಣ ರಂಗಭೂಮಿ. ನಾನು ರಾಜ್ಯದ ಸಾಕಷ್ಟು ಊರುಗಳನ್ನು ಸುತ್ತಿದ್ದೇನೆ, ಬೀದಿ ನಾಟಕಗಳನ್ನು ಮಾಡಿದ್ದೇನೆ. ಹಾಗಾಗಿ ಈ ನೆಲದ ಪರಿಚಯ ನನಗಿದೆ. ರಂಗಭೂಮಿ ಎಲ್ಲವನ್ನೂ ಕಲಿಸಿಕೊಟ್ಟಿದೆ. ಬೆಳಗಾಗಿವೆಗೆ ಹೋದರೆ, ಅದೇ ಸೊಗಡಿನಲ್ಲಿ ಮಾತನಾಡಬಲ್ಲೆ. ಬಾಗಲಕೋಟೆ, ಬೀದರ್‍, ಬಿಜಾಪುರ ಎಲ್ಲಾ ಕಡೆ ಸುತ್ತಿ ಕೆಲಸ ಮಾಡಿರುವುದರಿಂದ, ಆ ಪರಿಸರ, ಆಲೋಚನೆ ಗೊತ್ತಿದೆ. ಆ ಶೈಲಿಯಲ್ಲಿ ಮಾತನಾಡಬಲ್ಲೆ. ಪ್ರತಿಯೊಂದು ಪ್ರಾಂತ್ಯಕ್ಕೆ ಒಂದು ಆಲೋಚನೆ ಇರುತ್ತದೆ, ವಿವೇಕ ಇರುತ್ತದೆ. ಆ ಆಲೋಚನೆಗೆ ನಾವು ಹತ್ತಿರವಾಗಬೇಕು. ರಂಗಭೂಮಿಯ ಒಡನಾಟದಿಂದ ಅದು ನನಗೆ ಸಾಧ್ಯವಾಯಿತು’ ಎನ್ನುತ್ತಾರೆ.

ಅವಕಾಶಗಳೇನೋ ಹೇರಳವಾಗಿ ಸಿಗುತ್ತಿವೆ. ಆದರೆ, ಪಾತ್ರಗಳ ವಿಷಯದಲ್ಲಿ ಅದೇ ಸಮಾಧಾನ ಮತ್ತು ತೃಪ್ತಿ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸುವ ಅವರು, ಕೆಲಸ ಮಾಡೋದೇ ನನಗೆ ತೃಪ್ತಿ ಎನ್ನುತ್ತಾರೆ. ‘ಯಾವ ಪಾತ್ರವಾದರೂ ಸರಿ, ಯಾವ ಸಂದರ್ಭವಾದರೂ ಸರಿ, ಯಾವ ಜಾಗವಾದರೂ ಸರಿ … ನನಗೆ ಅತ್ಯಂತ ಖುಷಿ ಕೊಡುವುದೆಂದರೆ ಅದು ಕೆಲಸ. ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ನನಗೂ ಇಲ್ಲಿ ಒಂದು ಸ್ಥಾನ ಸಕ್ಕಿದೆ. ಅದಕ್ಕಿಂತ ಇನ್ನೇನು ಬೇಕು. ಜನ ಪ್ರೀತಿಯಿಂದ ಮಾತನಾಡಿಸುತ್ತಾರೆ, ಗೌರವ ಕೊಡುತ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ. ನನ್ನನ್ನು ಜನ ಗುರುತಿಸುತ್ತಾರಲ್ಲ, ಆ ವಿಷಯ ಬಹಳ ಖುಷಿ ಕೊಡುತ್ತದೆ’ ಎಂಬುದು ಅವರ ಅಭಿಪ್ರಾಯ.

ಹೀಗೆ ಸತತವಾಗಿ ಸಿನಿಮಾಗಳಲ್ಲಿ ಕೆಲಸ ಮಾಡ್ತಿರೋದ್ರಿಂದ, ರಂಗಭೂಮಿಯ ನಂಟು ಮುಂದುವರೆದಿದೆಯಾ? ಖಂಡಿತಾ ಇದೆ ಎನ್ನುವ ಬಲ, ‘ನಮ್ಮದೊಂದು ಡ್ಯಾನ್ಸ್ ಅಕಾಡೆಮಿ ಇದೆ. ನಾನು ಮತ್ತು ನನ್ನ ಪತ್ನಿ ಸೇರಿ ಈ ಅಕಾಡೆಮಿ ಮಾಡಿದ್ದೇವೆ. ಭರತನಾಟ್ಯ ಹೇಳಿಕೊಡುವುದರ ಜೊತೆಗೆ ನಿರಂತರವಾಗಿ ರಂಗಭೂಮಿ ಚಟುವಟಿಕೆಗಳನ್ನು ನಡೆಸುತ್ತಿರುತ್ತೇವೆ. ಇತ್ತೀಚೆಗಷ್ಟೇ, ಮಕ್ಕಳಿಗಾಗಿ ‘ರಂಗತಂತ್ರ’ ಎಂಬ ಶಿಬಿರ ಮಾಡಿದ್ದೇವೆ. ನಿಜ ಹೇಳಬೇಕೆಂದರೆ, ನಮ್ಮನ್ನು ಚೈತನ್ಯಯುತವಾಗಿ ಇಡುವುದು ರಂಗಭೂಮಿಯೇ. ಅಲ್ಲಿನ ಓದು, ಒಡನಾಟ, ತಿಳವಳಿಕೆ, ಭೌತಿಕತೆ ಎಲ್ಲವೂ ನಮ್ಮನ್ನು ಜೀವಂತವಾಗಿಡುತ್ತದೆ. ಜನರ ಮಧ್ಯೆ ಇರಬೇಕು. ಅವರ ನಡೆ, ನುಡಿ ಯಾವುದೋ ಒಂದು ಪಾತ್ರಕ್ಕೆ ಸಹಾಯಕವಾಗುತ್ತದೆ. ಅದೇ ಜನರಿಂದ ದೂರಾಗಿ ಫೈವ್‍ ಸ್ಟಾರ್‍ ಸಂಸ್ಕೃತಿಗೆ ಒಗ್ಗಿಕೊಂಡರೆ, ನಾವು ಸಹ ಈ ಸಮಾಜದಿಂದ Cut off ಆಗಿಬಿಡುತ್ತೇವೆ. ನಾವು ಬಸ್ಸು, ರೈಲಿನಲ್ಲಿ ಹೋದರೆ ಹಲವು ಜನರನ್ನು ನೋಡಬಹುದು, ಗಮನಿಸಬಹುದು. ಅದೇ ನಾನು ಕಾರ್‍ನಲ್ಲಿ ಹೋದರೆ, ಯಾರ ಪರಿಚಯವೂ ಆಗುವುದಿಲ್ಲ. ಪರಿಚಯವಿಲ್ಲವೆಂದರೆ ಏನೂ ಸಿಗುವುದಿಲ್ಲ, ಕಲಿಯೋಕೂ ಆಗುವುದಿಲ್ಲ. ನಾವು ಎಷ್ಟು ಜನರ ಮಧ್ಯೆ ಇರುತ್ತೇವೋ, ಅಷ್ಟೇ ನಮಗೆ ಅನುಭವವಾಗುತ್ತದೆ. ಅದರ ಜೊತೆಗೆ ಇವತ್ತಿನ ತಲೆಮಾರಿನವರ ಯೋಚನೆಗಳೇನಿವೆ? ಅವರಿಗೆ ಏನು ಬೇಕಿದೆ? ಅವರು ಯಾವುದರ ಬಗ್ಗೆ ಮಾತಾಡುತ್ತಿದ್ದಾರೆ? ಇವೆಲ್ಲವೂ ಅರ್ಥವಾಗುತ್ತದೆ’ ಎನ್ನುತ್ತಾರೆ.

Discover more from KannadaScreens

Subscribe now to keep reading and get access to the full archive.

Continue reading