ರವಿಚಂದ್ರನ್‍ ಹುಟ್ಟುಹಬ್ಬಕ್ಕೆ ‘ಪ್ರೇಮ ಲೋಕ 2′ ಪ್ರಾರಂಭ

ಚಂದನವನ, ಸಿನಿ ಸುದ್ದಿ, ಸಿನಿ ಸ್ವಾರಸ್ಯ

‘ಕ್ರೇಜಿ ಸ್ಟಾರ್’ ಅವರಿಗೆ ದೊಡ್ಡ ಜನಪ್ರಿಯತೆ ಮತ್ತು ದುಡ್ಡು ತಂದುಕೊಟ್ಟ ಚಿತ್ರವೆಂದರೆ ಅದು ‘ಪ್ರೇಮಲೋಕ ’. 1987ರಲ್ಲಿ ಬಿಡುಗಡೆಯಾದ ಈ ಚಿತ್ರ, ಕನ್ನಡ ಚಿತ್ರರಂಗದ ಎವರ್‍ಗ್ರೀನ್‍ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ಮೇಕಿಂಗ್‍, ಅದ್ಧೂರಿತನ, ಹಾಡುಗಳು ಸದಾ ಚರ್ಚೆಯಾಗುತ್ತಿರುತ್ತದೆ. ‘ಪ್ರೇಮ ಲೋಕ’ದ ನಂತರ ರವಿಚಂದ್ರನ್‍ ಹಲವು ಚಿತ್ರಗಳನ್ನು ಮಾಡಿದರಾದರೂ, ಆ ತರಹದ ಯಶಸ್ಸನ್ನು ನೋಡೋಕೆ ಸಾಧ್ಯವಾಗಲೇ ಇಲ್ಲ.

ಈಗ್ಯಾಕೆ ಈ ಮಾತು ಎಂದರೆ, ‘ಪ್ರೇಮ ಲೋಕ 2’ ಮಾಡುವುದಾಗಿ ರವಿಚಂದ್ರನ್‍ ಕಳೆದ ಕೆಲವು ವರ್ಷಗಳಲ್ಲಿ ಹೇಳುತ್ತಲೇ ಇದ್ದರು. ಅದರಲ್ಲೂ 2024ರಲ್ಲಿ ಪ್ರಾರಂಭಿಸುವುದಾಗಿ ಅವರು ಹಿಂಟ್ ‍ಕೊಟ್ಟಿದ್ದರು. ಆದರೆ, ಯಾವಾಗ, ಚಿತ್ರದಲ್ಲಿ ಯಾರೆಲ್ಲಾ ಇರುತ್ತಾರೆ ಮುಂತಾದ ಯಾವ ವಿಷಯವನ್ನೂ ಅವರು ಬಹಿರಂಗಗೊಳಿಸಿರಲಿಲ್ಲ. ಈಗ ಅವರು ಮೊದಲ ಬಾರಿಗೆ ಈ ಚಿತ್ರದ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದ ‘ಕನಕಗಿರಿ ಉತ್ಸವ’ದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ರವಿಚಂದ್ರನ್‍, ‘ಪ್ರೇಮಲೋಕ 2’ ಚಿತ್ರದ ಕುರಿತು ಒಂದಿಷ್ಟು ಅಪ್‍ಡೇಟ್‍ಗಳನ್ನು ಕೊಟ್ಟಿದ್ದಾರೆ. ಪ್ರಮುಖವಾಗಿ, ಮೇ 30ರಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರ ಪ್ರಾರಂಭಿಸುವುದಾಗಿ ಅವರು ಹೇಳಿದ್ದಾರೆ. ಈ ಚಿತ್ರದಲ್ಲಿ ಅವರ ದೊಡ್ಡ ಮಗ ಮನೋರಂಜನ್ ನಾಯಕನಾಗಿ ನಟಿಸಿದರೆ, ಚಿಕ್ಕ ಮಗ ವಿಕ್ರಮ್‍ ಒಂದು ಚಿಕ್ಕ ಪಾತ್ರ ಮಾಡುತ್ತಾರಂತೆ. ಮಿಕ್ಕಂತೆ, ರವಿಚಂದ್ರನ್‍ ಅವರು ತಂದೆಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಪ್ರೇಮ ಲೋಕ’ ಚಿತ್ರದ ವಿಶೇಷವೆಂದರೆ, ಆ ಚಿತ್ರದಲ್ಲಿ 10ಕ್ಕೂ ಹೆಚ್ಚು ಹಾಡುಗಳಿದ್ದವು. ‘ಪ್ರೇಮ ಲೋಕ 2’ ಚಿತ್ರದಲ್ಲಿ 20ರಿಂದ 25 ಹಾಡುಗಳು ಇರುತ್ತವಂತೆ. ಈ ಸಿನಿಮಾದಲ್ಲಿ ಪ್ರೀತಿ ಇರುತ್ತದಂತೆ. ‘ನನಗೆ ಪ್ರೀತಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅದೊಂದೇ ಗೊತ್ತಿರೋದು ನನಗೆ’ ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರದ ಇನ್ನೊಂದು ಸ್ಪೆಷಾಲಿಟಿಯೆಂದರೆ, ಕಥೆ ನಡೆಯೋದು ಜನರ ಮಧ್ಯೆಯಂತೆ. ಯಾರಿಗೆಲ್ಲಾ ಈ ಚಿತ್ರದಲ್ಲಿ ನಟಿಸುವ ಆಸೆ ಇದೆಯೋ, ಅವೆರಲ್ಲರೂ ತಮ್ಮ ಇನ್‍ಸ್ಟಾಗ್ರಾಂ ಖಾತೆಗೆ ಫ್ಯಾಮಿಲಿ ಫೋಟೋ ಹಾಕಿ ಎಂದು ರವಿಚಂದ್ರನ್‍ ಮನವಿ ಮಾಡಿದ್ದಾರೆ.

‘’ಪ್ರೇಮ ಲೋಕ’ ರವಿಚಂದ್ರನ್‍ ಸಿನಿಮಾ ಅಲ್ಲ, ಅದು ಈಶ್ವರಿ ಸಂಸ್ಥೆಯದ್ದು. ಅದು ಜನರದ್ದು. ಆ ಗೆಲುವು ಜನರದ್ದು. ಮತ್ತೆ ಇನ್ನೊಂದು ‘ಪ್ರೇಮ ಲೋಕ’ವನ್ನು ಸೃಷ್ಟಿ ಮಾಡಬೇಕು ಎಂಬ ಆಸೆ ನನಗೆ. ಆ ಪ್ರೇಮ ಲೋಕದಲ್ಲಿ ನೀವೆಲ್ಲಾ ಇರಬೇಕು, ಅದ ನಿಮ್ಮದಾಗಬೇಕು’ ಎಂದು ರವಿಚಂದ್ರನ್‍ ತಮ್ಮ ಆಸೆ ಹೇಳಿಕೊಂಡಿದ್ದಾರೆ. ರವಿಚಂದ್ರನ್ ‍ಅವರು ‘ರವಿ ಬೋಪಣ್ಣ’ ಚಿತ್ರದ ನಂತರ ಯಾವೊಂದು ಚಿತ್ರವನ್ನು ನಿರ್ದೇಶಿಸಿಲ್ಲ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದ ದೊಡ್ಡ ಮಟ್ಟದಲ್ಲಿ ಸೋಲು ಕಂಡಿತ್ತು. ಈ ಬಗ್ಗೆ ರವಿಚಂದ್ರನ್‍ ಅವರಿಗೂ ಬೇಸರವಿದೆ. ಆ ಬೇಸರವನ್ನು ಮರೆಸುವಂತಹ ಒಂದು ಒಳ್ಳೆಯ ಚಿತ್ರ ಮಾಡುವುದಾಗಿ ಅವರು ಹೇಳುತ್ತಲೇ ಇದ್ದಾರೆ.

ಹೀಗಿರುವಾಗಲೇ, ಅವರು ‘ಪ್ರೇಮ ಲೋಕ 2’ ಬಗ್ಗೆ ಕನವರಿಸುತ್ತಿದ್ದಾರೆ. ಈ ಚಿತ್ರವು ತಮ್ಮ ಹಳೆಯ ಸೋಲುಗಳನ್ನೆಲ್ಲಾ ಮರೆಸಿ, ಯಶಸ್ಸಿನಲ್ಲಿ ‘ಪ್ರೇಮ ಲೋಕ’ ಚಿತ್ರವನ್ನೂ ಮೀರಿಸಲಿ ಎಂದು ಹಾರೈಸಿ.

ತಾನು ‘ಕಿತ್ತೋದ್‍ ನನ್ಮಗ’ ಎಂದ ‘ಮಠ’ ಗುರುಪ್ರಸಾದ್‍!

Discover more from KannadaScreens

Subscribe now to keep reading and get access to the full archive.

Continue reading