ಶಿವರಾಜಕುಮಾರ್ ಅಭಿನಯದ ‘ಬೇಲ್’ ಚಿತ್ರವು ಶುಕ್ರವಾರ ಬಿಡುಗಡೆಯಾಗಿ ಕೆಲವು ಕಡೆ ಹೌಸ್‍ಫುಲ್ ಪ್ರದರ್ಶನಗಳು ಕಾಣುತ್ತಿವೆ. ವಿಮರ್ಶಕರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಶಿವರಾಜಕುಮಾರ್ ಅಭಿನಯದ ಪಕ್ಕಾ ಕಮರ್ಷಿಯಲ್ ಚಿತ್ರವಾದ್ದರಿಂದ ಪ್ರೇಕ್ಷಕರು ದೊಡ್ಡ ಮಟ್ಟದಲ್ಲಿ ಬಂದು ಚಿತ್ರ ನೋಡುತ್ತಿದ್ದಾರೆ. ಇದಕ್ಕೆ ಮೂರು ದಿನ ರಜೆಗಳಿರುವುದೂ ಕಾರಣವಿರಬಹುದು.
ಬಾಕ್ಸ್ ಆಫೀಸ್ ಟ್ರಾಕರ್ ಸಕ್ನಿಲ್ಕ್ ಡಾಟ್‍ಕಾಮ್ ಪ್ರಕಾರ, ಚಿತ್ರದ ಮೊದಲ ದಿನದ ಗಳಿಕೆ 1.34 ಕೋಟಿ ರೂ. ಆದರೆ, ಎರಡನೆಯ ದಿನ 82 ಲಕ್ಷ ಗಳಿಕೆ ಮಾಡಿದೆ. ಮೂರನೆಯ ದಿನ ಸಹ ಚಿತ್ರ ಒಂದರಿಂದ ಒಂದೂವರೆ ಕೋಟಿ ಗಳಿಕೆ ಮಾಡುವ ನಿರೀಕ್ಷೆ ಇದೆ. ಒಟ್ಟಾರೆ ಚಿತ್ರದ ಮೊದಲ ಮೂರು ದಿನಗಳ ಗಳಿಕೆ ಮೂರವರೆಯಿಂದ ನಾಲ್ಕು ಕೋಟಿಯಷ್ಟು ಗಳಿಕೆ ಮಾಡಿದಂತಾಗುತ್ತದೆ.
ಹಾಗಂತ, ಇದು ದೊಡ್ಡ ಗೆಲುವಲ್ಲ. ‘ಬೇಲ್’ ಚಿತ್ರಕ್ಕೆ ಎಂಟರಿಂದ ಹತ್ತು ಕೋಟಿ ರೂ. ಬಜೆಟ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಮೊದಲ ವಾರ ಆರರಿಂದ ಎಂಟು ಕೋಟಿ ಗಳಿಕೆ ಆಗುವ ನಿರೀಕ್ಷೆ ಇದ್ದು, ಎಲ್ಲಾ ಕಳೆದು, ಕೂಡಿಸಿದರೂ ಚಿತ್ರ ಅಲ್ಲಿಂದಲ್ಲಿಗೆ ಹಣ ಮಾಡುವ ನಿರೀಕ್ಷೆ ಇದೆ. ಸೋಮವಾರದ ನಂತರವೂ ಜನರಿಂದ ಇದೇ ಪ್ರತಿಕ್ರಿಯೆ ಮುಂದುವರೆದರೆ, ಸ್ವಲ್ಪ ಲಾಭವಾಗುವ ಸಾಧ್ಯತೆ ಇದೆ.
‘ಬೇಲ್’ ಚಿತ್ರವನ್ನು ನಿರ್ಮಿಸಿರುವ ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಇತ್ತೀಚೆಗೆ ನಿರ್ಮಾಣವಾದ ಚಿತ್ರಗಳೆಲ್ಲವೂ ದೊಡ್ಡ ನಷ್ಟ ಕಂಡಿವೆ. ಇಂಟರ್ನೆಟ್ ಮಾಹಿತಿಯ ಪ್ರಕಾರ, ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಕೆವಿಎನ್ ನಿರ್ಮಾಣದ, ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ‘ಹೈವಾನ್’ ಚಿತ್ರಕ್ಕೆ 130 ಕೋಟಿ ರೂ. ಬಜೆಟ್ ಆದರೆ, ಅದರ ಗಳಿಕೆ 15 ಕೋಟಿ ಮೀರಲಿಲ್ಲವಂತೆ. ಈ ಚಿತ್ರದಿಂದ ಸಂಸ್ಥೆ 100 ಕೋಟಿವರೆಗೂ ಕಳೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇದಲ್ಲದೆ, ಈ ವರ್ಷ ಬಿಡುಗಡೆಯಾದ ಸಂಸ್ಥೆಯ ಬೇರೆ ಚಿತ್ರಗಳಾದ ‘ಟಾಕ್ಸಿಕ್’, ‘ಜನ ನಾಯಗನ್’, ‘ಕೆಡಿ – ದಿ ಡೆವಿಲ್’ ಚಿತ್ರಗಳಿಂದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು, 500ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಕಳೆದುಕೊಂಡಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಯಾವೊಂದು ನಿರ್ಮಾಣ ಸಂಸ್ಥೆಯು, ಒಂದೇ ವರ್ಷ ಇಷ್ಟೊಂದು ಹಣ ಕಳೆದುಕೊಂಡಿರುವ ಉದಾಹರಣೆ ಇಲ್ಲ. ಬೇರೆ ಸಂಸ್ಥೆಗಳಾಗಿದ್ದರೆ, ಇಷ್ಟೊಂದು ಸೋಲು ಮತ್ತು ನಷ್ಟದ ನಂತರ ಚಿತ್ರ ನಿರ್ಮಾಣ ಮುಂದುವರೆಸುತ್ತಿರಲಿಲ್ಲವೇನೋ? ಆದರೆ, ಕೆವಿನ್ ಪ್ರೊಡಕ್ಷನ್ಸ್ ಸಂಸ್ಥೆಯು ಧೈರ್ಯದಿಂದ ಚಿತ್ರ ನಿರ್ಮಾಣವನ್ನು ಮುಂದುವರೆಸಿದೆ. ಕನ್ನಡದಲ್ಲಿ ‘ಮಂಗಳಗೌರಿ’ ಮತ್ತು ‘ಬೀರ್ಬಲ್ 2’ ಚಿತ್ರಗಳ ಜೊತೆಗೆ ತೆಲುಗಿನಲ್ಲಿ ಚಿರಂಜೀವಿ ಅಭಿನಯದ ‘ಕಾಕ’ ಚಿತ್ರವನ್ನು ನಿರ್ಮಿಸುತ್ತಿದೆ.
ಕೆವಿಎನ್ ಸಂಸ್ಥೆ ಈ ವರ್ಷ ಕಳೆದುಕೊಂಡಿರುವ ಹಣವನ್ನು ‘ಬೇಲ್’ ಅಥವಾ ಮುಂಬರುವ ಯಾವುದೇ ಚಿತ್ರಕ್ಕೂ ತಂದುಕೊಡುವ ಶಕ್ತಿ ಇಲ್ಲ. ಆದರೂ ಜನ ಬರುತ್ತಿರುವುದರಿಂದ, ‘ಬೇಲ್’ ಸೋತಿರುವ ಕೆವಿಎನ್‍ಗೆ ಸಣ್ಣ ಚೇತರಿಕೆಯನ್ನಂತೂ ಕೊಟ್ಟಿದೆ.


