ಯಾಕೋ ಧ್ರುವ ಸರ್ಜಾ ಅದೃಷ್ಟವೇ ಚೆನ್ನಾಗಿಲ್ಲ ಎಂದು ಮಾತಾಡಿಕೊಳ್ಳುತ್ತಿದೆ ಕನ್ನಡ ಚಿತ್ರರಂಗ. ಅದಕ್ಕೆ ಸರಿಯಾಗಿ, ಧ್ರುವ ಅಭಿನಯದ ‘ಮಾರ್ಟಿನ್’ ಮತ್ತು ‘ಕೆಡಿ – ದಿ ಡೆವಿಲ್’ ಚಿತ್ರಗಳೆರಡೂ ಕನ್ನಡ ಚಿತ್ರರಂಗದ ದೊಡ್ಡ ಸೋಲುಗಳ ಪಟ್ಟಿಗೆ ಸೇರಿವೆ. ಎರಡೂ ಚಿತ್ರಗಳು ನಿರ್ಮಾಪಕರಿಗೆ 50 ಕೋಟಿಗೂ ಹೆಚ್ಚು ನಷ್ಟ ಮಾಡಿದೆ. ಅದರ ಜೊತೆಗೆ, ಧ್ರುವ ಅಭಿನಯದ ‘ಕ್ರಿಮಿನಲ್’ ಎಂಬ ಚಿತ್ರ ನಿಂತು ಹೋಗಿರುವ ಸುದ್ದಿ ಇದೆ.
ಹೀಗೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡಿದ್ದ ಧ್ರುವಗೆ ಅಚ್ಛೇ ದಿನ್ ಬಂದಿರುವ ಹಾಗೆ ಕಾಣುತ್ತಿದೆ. ಮಂಗಳವಾರ (ಅಕ್ಟೋಬರ್ 06) ಧ್ರುವ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಪೈಕಿ ಮೂರು ಹೊಸ ಚಿತ್ರಗಳು ಘೋಷಣೆಯಾಗುವ ಸಾಧ್ಯತೆ ಇದೆ.
ಈ ಪೈಕಿ ಮೊದಲನೆಯದು, ತೆಲುಗಿನ ಜನಪ್ರಿಯ ನಿರ್ಮಾಣ ಸಂಸ್ಥೆಗಳಲ್ಲೊಂದಾದ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಹೊಸ ಚಿತ್ರ ನಿರ್ಮಿಸುತ್ತಿದ್ದು, ಚಿತ್ರದ ಘೋಷಣೆ ಕುರಿತಾದ ಪೋಸ್ಟರ್ ಬಿಡುಗಡೆ ಮಾಡಿದೆ. ಒಂದೂವರೆ ವರ್ಷಗಳ ಹಿಂದೆಯೇ ಪೀಪಲ್ ಮೀಡಿಯಾ ಫ್ಯಾಕ್ಟರಿಯ ವಿಶ್ವಪ್ರಸಾದ್, ಧ್ರುವ ಅಭಿನಯದ ಚಿತ್ರವೊಂದನ್ನು ನಿರ್ಮಿಸುವ ಯೋಚನೆ ಇದೆ ಎಂದಿದ್ದರು. ಅದೀಗ ಕಾರ್ಯರೂಪಕ್ಕೆ ಬಂದಿದೆ. ಈ ಚಿತ್ರದ ನಿರ್ದೇಶಕರು ಯಾರು, ತಾರಾಗಣದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಸಂಪೂರ್ಣ ವಿವರಗಳನ್ನು ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲೇ ಅಧಿಕೃತವಾಗಿ ಚಿತ್ರತಂಡ ಬಿಡುಗಡೆ ಮಾಡಲಿದೆ.
ಎರಡನೆಯದು, ನಿರ್ದೇಶಕ ನಂದಕಿಶೋರ್ ಜೊತೆಗೊಂದು ಚಿತ್ರ. ಈ ಹಿಂದೆ, ‘ಪೊಗರು’ ಚಿತ್ರದಲ್ಲಿ ಧ್ರುವ ಅವರನ್ನು ನಿರ್ದೇಶಿಸಿದ್ದರು ನಂದಕಿಶೋರ್. ಚಿತ್ರ ಯಶಸ್ಸು ಕಂಡಿತ್ತು. ಆ ನಂತರ ಧ್ರುವ ಅಭಿನಯದಲ್ಲಿ, ನಂದಕಿಶೋರ್, ‘ದುಬಾರಿ’ ಎಂಬ ಇನ್ನೊಂದು ಚಿತ್ರ ನಿರ್ದೇಶಿಸಬೇಕಿತ್ತು. ಈ ಚಿತ್ರದ ಮುಹೂರ್ತ ಮುಗಿದಿತ್ತಾದರೂ, ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಇದೀಗ ಧ್ರುವ ಅಭಿನಯದಲ್ಲಿ ನಂದಕಿಶೋರ್ ಇನ್ನೊಂದು ಚಿತ್ರ ನಿರ್ದೇಶಿಸುತ್ತಿದ್ದು, ಅಕ್ಟೋಬರ್ 06ರಂದು ಅಧಿಕೃತ ಘೋಷಣೆಯಾಗಲಿದೆ.
ಮೂರನೆಯದಾಗಿ, ಈ ಹಿಂದೆ ‘ತತ್ಸಮ ತತ್ಭವ’ ಚಿತ್ರವನ್ನು ನಿರ್ದೇಶಿಸಿದ್ದ ವಿಶಾಲ್ ಆತ್ರೇಯ, ಈಗ ಧ್ರುವ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರಂತೆ. ಈ ಚಿತ್ರಕ್ಕೆ ನಭಾ ನಟೇಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಘೋಷಣೆಯೂ ಮಂಗಳವಾರ ಅಧಿಕೃತವಾಗಿ ಆಗಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಧ್ರುವ, ಮೂರು ಹೊಸ ಚಿತ್ರಗಳಲ್ಲಿ ನಟಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಇದರಲ್ಲಿ ಮೊದಲು ಯಾವುದು ಪ್ರಾರಂಭವಾಗಲಿದೆ, ಯಾವುದು ಬಿಡುಗಡೆ ಆಗಲಿದೆ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.


