ಪುನರ್ಜನ್ಮದ ಕಥೆಯಲ್ಲಿ ಪ್ರಮೋದ್‍ ಶೆಟ್ಟರಿಗೇನು ಕೆಲಸ?

ಚಂದನವನ, ಸಿನಿ ಸುದ್ದಿ

ಗ್ರಾಫಿಕ್ಸ್ ಡಿಸೈನರ್ ಆಗಿ ಮತ್ತು ಇವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ ಅನುಭವವಿರುವ ಉಡುಪಿಯ ಬೈಂದೂರಿನ ಶ್ರೀಷ ಇದೀಗ ಸದ್ದಿಲ್ಲದೆ ಒಂದು ಚಿತ್ರ ಮಾಡಿದ್ದಾರೆ. ಅದೇ ‘ತರಂಗಾಂತರಂಗ’. ಈ ಚಿತ್ರಕ್ಕೆ ಅವರು ನಿರ್ದೇಶಕರಷ್ಟೇ ಅಲ್ಲ, ನಾಯಕರೂ ಹೌದು. ಈ ಚಿತ್ರದ ಟೀಸರ್‍ ಇತ್ತೀಚೆಗೆ ಬಿಡುಗಡೆಯಾಗಿದೆ.

ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್ನಾರ್‍ ಕೆ. ವಿಶ್ವನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ‘ತರಂಗಾಂತರಂಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರವನ್ನು ಜಿಷ್ಣು ಸ್ಟುಡಿಯೋಸ್‍ ಮೂಲಕ ಅನುರಾಧಾ ಶ್ರೀಷ ನಿರ್ಮಾಣ ಮಾಡುತ್ತಿದ್ದಾರೆ.

‘ಇದೊಂದು ಪುನರ್ಜನ್ಮದ ಕಥೆ’ ಎನ್ನುವ ಶ್ರೀಷ, ‘ನಾವು ದೇವರಿಗೆ ಕಟ್ಟಿಕೊಂಡ ಹರಕೆ ಅಥವಾ ಸೇವೆಗಳನ್ನು ತೀರಿಸಲು ವಿಫಲವಾದರೆ, ಅದರಿಂದ ಏನು ಆಗಬಹುದು ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾವನ್ನು ನಿರ್ದೇಶನ ಮಾಡಿ, ತೆರೆಯ ಮೇಲೆ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನೋಡುಗರಿಗೆ ಈ ಸಿನಿಮಾ ಹೊಸ ಅನುಭವ ಕೊಡಲಿದೆ’ ಎಂದರು.

‘ತರಂಗಾಂತರಂಗ’ ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಶ್ರೀಷ ಮತ್ತು ಅವರ ತಂಡ ಸೇರಿಕೊಂಡು ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಾನು ಈ ಚಿತ್ರತಂಡದ ಭಾಗವಾಗಿರುವುದಕ್ಕೆ ಖುಷಿಯಿದೆ. ಯುನಿಫಾರ್ಮ್ ಧರಿಸಿಕೊಂಡು ಈ ಸಿನಿಮಾದ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರತಂಡದ ಜೊತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎಂದರು.

‘ತರಂಗಾಂತರಂಗ’ ಚಿತ್ರದಲ್ಲಿ ಶ್ರೀಷ ಅವರಿಗೆ ಚೆರಿಕಾ ಮೂರ್ತಿ ಮತ್ತು ಯಶಸ್ವಿನಿ ಸ್ವಾಮಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಲಿಖಿತಾ ಶೆಟ್ಟಿ, ಮುರಳಿ ಮತ್ತಿತರರು ಇತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿವಂಗತ ದಿನೇಶ್ ಮಂಗಳೂರು ಮತ್ತು ದಿವಂಗತ ರಾಕೇಶ್ ಪೂಜಾರಿ ಅಭಿನಯದ ಕೊನೆಯ ಚಿತ್ರ ಇದಾಗಲಿದೆ.

ಸದ್ಯ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ಜನವರಿ ತಿಂಗಳಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆ ಹಾಕಿಕೊಂಡಿದೆ.

ಇದು ಒನ್‍ ಮ್ಯಾನ್‍ ಶೋ ಅಲ್ಲ; ‘ಬೇಲ್‍’ ಬಗ್ಗೆ ಶಿವಣ್ಣ ಮಾತು

Discover more from KannadaScreens

Subscribe now to keep reading and get access to the full archive.

Continue reading