ಕಳೆದೊಂದು ವಾರದಿಂದ ರಂಗಾಯಣ ರಘು, ಶ್ರೀರಾಮ್ ಮುಂತಾದವರು ಅಭಿನಯಿಸಿರುವ ‘ಪ್ರೇಮದ ಊರಲಿ’ ಚಿತ್ರದ್ದೇ ಮಾತು. ಅದರ ಜೊತೆಗೆ ಮೊನ್ನೆ ಶಿವರಾಜಕುಮಾರ್ ಅಭಿನಯದ ‘ಬೇಲ್’ ಚಿತ್ರ ಬಿಡುಗಡೆಯಾಗಿದೆ. ಇವೆರಡು ಚಿತ್ರಗಳ ಅಬ್ಬರದ ಮಧ್ಯೆ, ಗಣೇಶ್ ಅಭಿನಯದ ‘ಪಿನಾಕ’ ಮರತೇ ಹೋಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ‘ಪಿನಾಕ’ ಚಿತ್ರವು ಮೊನ್ನೆ ಅಕ್ಟೋಬರ್ 02ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಚಿತ್ರ ಮುಂದಕ್ಕೆ ಹೋಗಿದೆ.
ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ. ಆ ನಂತರ ಅವರು ನಾಲ್ಕು ಚಿತ್ರಗಳನ್ನು ಒಪ್ಪಿಕೊಂಡಿದ್ದರೂ, ಯಾವೊಂದು ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈ ವರ್ಷ ತಮ್ಮ ಅಭಿನಯದ ಎರಡೂ ಚಿತ್ರಗಳಾದರೂ ಬಿಡುಗಡೆಯಾಗುತ್ತವೆ ಎಂದು ಗಣೇಶ್, ಕೆಲವು ತಿಂಗಳ ಹಿಂದೆ ಹೇಳಿಕೊಂಡಿದ್ದರು. ಎರಡ್ಮೂರು ವಾರಗಳ ಅಂತರದಲ್ಲಿ ಎರಡು ಚಿತ್ರಗಳು ಬಿಡುಗಡೆಯಾದರೂ ಆಶ್ಚರ್ಯವಿಲ್ಲ ಎಂದಿದ್ದರು.
ಅದಕ್ಕೆ ಸರಿಯಾಗಿ, ಗಣೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಪಿನಾಕಾ ಮತ್ತು ‘ಬೃಂದಾವಿಹಾರಿ’ ಚಿತ್ರದ ಬಿಡುಗಡೆ ದಿನಾಂಕಗಳು ಘೋಷಣೆಯಾಗಿವೆ. ಎರಡು ವಾರಗಳ ಅಂತರದಲ್ಲಿ ಅವೆರಡೂ ಚಿತ್ರಗಳು ಬಿಡುಗಡೆ ಆಗಲಿವೆ. ಅಕ್ಟೋಬರ್ 02ರಂದು ‘ಪಿನಾಕ’ ಬಿಡುಗಡೆಯಾದರೆ, ಅಕ್ಟೋಬರ್ 16ರಂದು ‘ಬೃಂದಾವಿಹಾರಿ’ ಚಿತ್ರ ಬಿಡುಗಡೆಯಾಗಲಿದೆ.
ಆದರೆ, ಅಂದುಕೊಂಡಂತೆ ‘ಪಿನಾಕ’ ಚಿತ್ರವು ಬಿಡುಗಡೆ ಆಗಲಿಲ್ಲ. ಮೂಲಗಳ ಪ್ರಕಾರ, ಚಿತ್ರದ ಕೆಲಸಗಳು ಮುಗಿದಿಲ್ಲವಂತೆ. ಆ ಕೆಲಸಗಳನ್ನು ಮುಗಿಸುವಲ್ಲಿ ‘ಪಿನಾಕ’ ಚಿತ್ರತಂಡ ತೊಡಗಿಸಿಕೊಂಡಿದೆ. ಸದ್ಯಕ್ಕೆ, ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ. ಚಿತ್ರ ಈ ವರ್ಷದ ಕೊನೆಗೆ ಬಿಡುಗಡೆ ಆಗಬಹುದು. ಮುಂದಿನ ವರ್ಷಕ್ಕೆ ಹೋದರೂ ಆಶ್ಚರ್ಯವೇನಿಲ್ಲ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ನಿರ್ಮಿಸುತ್ತಿರುವ, ‘ಪಿನಾಕ’ ಚಿತ್ರವನ್ನು ನೃತ್ಯ ನಿರ್ದೇಶಕ ಧನಂಜಯ್ ನಿರ್ದೇಶಿಸುತ್ತಿದ್ದು, ನಿರ್ದೇಶಕರಾಗಿ ಇದು ಅವರ ಮೊದಲ ಚಿತ್ರವಾಗಿದೆ. ಗಣೇಶ್ ಜೊತೆಗೆ ರಂಗಾಯಣ ರಘು, ಶ್ರೀನಿವಾಸಮೂರ್ತಿ, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು, ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ ‘ಬೃಂದಾವಿಹಾರಿ’ ಚಿತ್ರ ಅಕ್ಟೋಬರ್ 16 ರಂದು ಬಿಡುಗಡೆಯಾಗುತ್ತಿದೆ.
ಧ್ರುವಗೆ ಅಚ್ಛೇ ದಿನ್; ಹುಟ್ಟುಹಬ್ಬಕ್ಕೆ ಮೂರು ಚಿತ್ರ ಘೋಷಣೆ ಸಾಧ್ಯತೆ


