ಕನ್ನಡದ ಅತ್ಯಂತ ಸೃಜನಶೀಲ ನಿರ್ದೇಶಕರ ಪೈಕಿ ಗುರುಪ್ರಸಾದ್ ಸಹ ಒಬ್ಬರು. ‘ಮಠ’ ಮತ್ತು ‘ಎದ್ದೇಳು ಮಂಜುನಾಥ’ದಂತ ಹಿಟ್ ಚಿತ್ರಗಳನ್ನು ಕೊಟ್ಟಿರುವ ಗುರುಪ್ರಸಾದ್, ಅತ್ಯಂತ ವಿವಾದಾಸ್ಪದ ನಿರ್ದೇಶಕರೂ ಹೌದು. ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡಿ ವಿವಾದಗಳನ್ನು ಮೈಮೇಲೆಳೆದುಕೊಳ್ಳುವ ಗುರುಪ್ರಸಾದ್, ಇತ್ತೀಚೆಗೆ ನಡೆದ ‘ರಂಗನಾಯಕ’ ಪತ್ರಿಕಾಗೋಷ್ಠಿಯಲ್ಲಿ ಹಲವು ಹೇಳಿಕೆಗಳನ್ನು ನೀಡುವ ಮುಳಕ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ, ಅವರ ಹೊಸ ಚಿತ್ರವೊಂದು ಶುರುವಾಗುವುದಕ್ಕಿಂತ ಮುನ್ನವೇ ನಿಂತು ಹೋಗಿದೆ.
ಅಂದಹಾಗೆ, ‘ರಂಗನಾಯಕ’ ಚಿತ್ರದಲ್ಲಿ ಗುರುಪ್ರಸಾದ್ ಒಂದು ಹೊಸ ಘೋಷಣೆ ಮಾಡಿದರು. ಜಗ್ಗೇಶ್ ಅಭಿನಯದಲ್ಲಿ ಹೊಸ ಚಿತ್ರ ಮಾಡುವುದಾಗಿ ಘೋಷಿಸಿದರು. ಈ ಚಿತ್ರಕ್ಕೆ ‘ರಂಗನಾಯಕ’ ನಿರ್ಮಾಪಕರೇ ಹಣ ಹಾಕಬೇಕೆಂದು ಕೇಳಿಕೊಂಡರು. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? ‘ಕಿತ್ತೋದ್ ನನ್ಮಗ’. ಇದನ್ನು ಕೇಳಿ ನಟ ಜಗ್ಗೇಶ್ ಸಹ ಒಂದು ಕ್ಷಣ ಶಾಕ್ ಆದರು. ಹೇಳದೇ ಕೇಳದೇ ಗುರುಪ್ರಸಾದ್ ಮಾಡಿದ ಘೋಷಣೆಯಿಂದ ಕಕ್ಕಾಬಿಕ್ಕಿಯಾದರು.
ಜಗ್ಗೇಶ್ ಇದಕ್ಕೂ ಮುನ್ನ ‘ತರ್ಲೆ ನನ್ಮಗ’, ‘ಸೂಪರ್ ನನ್ಮಗ’, ‘ಬಲ್‍ನನ್ಮಗ’ದಂತಹ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ‘ಕಿತ್ತೋದ್ ನನ್ಮಗ’ ಎಂಬ ಶೀರ್ಷಿಕೆ ಕೇಳಿದರೆ ಯಾರಿಗೂ ನಟಿಸುವುದಕ್ಕೆ ಮನಸ್ಸು ಬರುವುದಿಲ್ಲ. ಅದರಲ್ಲೂ ಜಗ್ಗೇಶ್ ತಮ್ಮ 61ನೇ ವಯಸ್ಸಿನಲ್ಲಿ ಇಂಥದ್ದೊಂದು ಹೆಸರಿನ ಚಿತ್ರದಲ್ಲಿ ನಟಿಸಲಿ ಎಂದು ಯಾರೂ ಬಯಸುವುದಿಲ್ಲ. ಹಾಗಾಗಿ, ಅವರು ಚಿತ್ರದಲ್ಲಿ ನಟಿಸುವುದಕ್ಕೆ ನಯವಾಗಿಯೇ ಮತ್ತು ನೇರವಾಗಿಯೇ ನಿರಾಕರಿಸಿದರು. ತಮ್ಮ ನಡುವೆ ಯಾವುದೇ ಹೊಸ ಒಪ್ಪಂದವಾಗಿಲ್ಲ, ಇಂಥದ್ದೊಂದು ಚಿತ್ರದಲ್ಲಿ ನಟಿಸುವ ಯಾವುದೇ ಕಮಿಟ್‍ಮೆಂಟ್ ಆಗಿಲ್ಲ, ಇದು ಸಂಪೂರ್ಣ ನಿರ್ದೇಶಕರ ಪರಿಕಲ್ಪನೆ, ಇದಕ್ಕೂ ತಮ್ಗೂ ಸಂಬಂಧವಿಲ್ಲ, ತಮ್ಮ ಬಿಡುವಿನ ಕಾರ್ಯಚಟುವಟಿಕೆಗಳಿಂದ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಿದರು.
ಇದು ಬಹುಶಃ ಗುರುಪ್ರಸಾದ್ ಅವರಿಗೂ ಅರ್ಥವಾಯಿತೇನೋ? ಹಾಗಾಗಿ, ಅವರು ಇಡೀ ಪ್ರಕರಣವನ್ನು ತೇಲಿಸುವ ಕೆಲಸ ಮಾಡಿದರು. ಈ ಚಿತ್ರದಲ್ಲಿ ತಾವೇ ‘ಕಿತ್ತೋದ್ ನನ್ಮಗ’, ಅದರ ಬಗ್ಗೆ ಮುಂದಿನ ಬಾರಿ ಮಾತಾಡೋಣ ಎಂದು ‘ರಂಗನಾಯಕ’ ಚಿತ್ರದ ಬಗ್ಗೆ ಮಾತು ಹೊರಳಿಸಿದರು. ನಿಜಕ್ಕೂ ಗುರುಪ್ರಸಾದ್ ಅವರಿಗೆ ಅಂಥದ್ದೊಂದು ಚಿತ್ರ ನಿರ್ದೇಶಿಸುವ ಆಸೆ ಇತ್ತೋ ಅಥವಾ ಆ ಕ್ಷಣಕ್ಕೆ ಮಜಾ ತೆಗೆದುಕೊಳ್ಳುವುದಕ್ಕೆ ಅಂಥದ್ದೊಂದು ವಿಷಯವನ್ನು ತೇಲಿಬಿಟ್ಟರೋ ಗೊತ್ತಿಲ್ಲ, ಗುರುಪ್ರಸಾದ್ ನಿರ್ದೇಶಿಸಬೇಕಿದ್ದ ಚಿತ್ರವೊಂದು ಶುರುವಾಗುವುದಕ್ಕೆ ಮುನ್ನವೇ ನಿಂತು ಹೋದಂತಾಗಿದೆ.
ಈ ಚಿತ್ರ ಏನಾಗುತ್ತದೋ ಗೊತ್ತಿಲ್ಲ. ಆದರೆ, ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ರಂಗನಾಯಕ’ ಚಿತ್ರದ ಬಗ್ಗೆಯಂತೂ ಎಲ್ಲರಿಗೂ ಕುತೂಹಲವಿದೆ. ಇದಕ್ಕೂ ಮುನ್ನ, ಎರಡು ಬಾರಿ ಗೆದ್ದಿರುವ ಜಗ್ಗೇಶ್ ಮತ್ತು ಗುರುಪ್ರಸಾದ್ ಜೋಡಿ ಈ ಬಾರಿ ಹ್ಯಾಟ್ರಿಕ್ ಸಾಧಿಸುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.


