‘ಪ್ರೇಮದ ಊರಲಿ’ ಮೊದಲ ವಾರದ ಕಲೆಕ್ಷನ್‍ ಎಷ್ಟು ಗೊತ್ತಾ?

ಚಂದನವನ, ಸಿನಿ ಸುದ್ದಿ

ಒಂದು ಕಡೆ ದೊಡ್ಡದೊಡ್ಡ ಚಿತ್ರಗಳೇ ಮಕಾಡೆ ಮಲಗುತ್ತಿರುವಾಗ, ಸಣ್ಣ ಬಜೆಟ್‍ನ ಗ್ರಾಮೀಣ ಸೊಗಡಿನ ಚಿತ್ರವೊಂದು, ಜನರನ್ನು ಸೆಳೆಯುತ್ತಿದೆ. ಈ ಚಿತ್ರ ಬಿಡುಗಡೆ ಆದಾಗ, ಯಾರಿಗೂ ಯಾವ ನಿರೀಕ್ಷೆಯೂ ಇರಲಿಲ್ಲ. ಆದರೆ, ಬಾಯ್ಮಾತಿನ ಪ್ರಚಾರದಿಂದ ಚಿತ್ರ ದಿನದಿಂದ ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಾ, ಈ ವರ್ಷದ ಸ್ಲೀಪರ್‍ ಹಿಟ್‍ ಆಗಿದೆ. ಅದೇ ಮನೋಜ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಪ್ರೇಮದ ಊರಲಿ’.

ಸೆಪ್ಟೆಂಬರ್ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ದೊಡ್ಡದೊಡ್ಡ ಚಿತ್ರಗಳು ಮಾಡದ ಕೆಲಸವನ್ನು ಮಾಡುತ್ತಿದೆ. ಶ್ರೀರಾಮ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯರಾಗಿ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರ ಹೆಚ್ಚು ಸದ್ದಿಲ್ಲದೆ, ಹೆಚ್ಚು ಸುದ್ದಿಯಾಗದೆ ಬಿಡುಗಡೆಯಾಗಿತ್ತು. ಆದರೆ, ಈಗ ಎಲ್ಲೆಡೆ ಈ ಚಿತ್ರದ ಬಗ್ಗೆ ಚರ್ಚೆಯಾಗುತ್ತಿದೆ.

‘ಪ್ರೇಮದ ಊರಲಿ’ ಚಿತ್ರವು ಹೆಚ್ಚು ಅಬ್ಬರವಿಲ್ಲದೆ, ಪ್ರಚಾರವಿಲ್ಲದೆ ಬಿಡುಗಡೆ ಆಗಿತ್ತು. ಆದರೆ, ಚಿತ್ರ ನೋಡಿದವರು, ಬಾಯ್ಮಾತಿನ ಪ್ರಚಾರದಿಂದ ಈ ಚಿತ್ರವನ್ನು ಗೆಲ್ಲಿಸುತ್ತಿದ್ದಾರೆ. ಹೊಸಹೊಸ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುತ್ತಿದ್ದಾರೆ. ಅಂದಹಾಗೆ, ಈ ಚಿತ್ರದ ಮೊದಲ ವಾರದ ಗಳಿಕೆ ಎಷ್ಟು ಗೊತ್ತಾ? ಬಾಕ್ಸ್ ಆಫೀಸ್‍ ಟ್ರಾಕರ್‍ ಸಕ್ನಿಲ್ಕ್ ಡಾಟ್‍ಕಾಮ್‍ ಪ್ರಕಾರ, 5.32 ಕೋಟಿ. ಈ ಪೈಕಿ ಮೊದಲ ದಿನದ ಗಳಿಕೆ ಕೇವಲ ಒಂಬತ್ತು ಲಕ್ಷವಷ್ಟೇ. ಚಿತ್ರ ನೋಡಿ ಮೆಚ್ಚಿಕೊಂಡವರ ಬಾಯ್ಮಾತಿನ ಪ್ರಚಾರದಿಂದ ಎರಡನೆಯ ದಿನದ ಗಳಿಕೆ 23 ಲಕ್ಷವಾಗಿದೆ. ವಾರದ ಕೊನೆಯ ದಿನ 1.70 ಕೋಟಿಯಷ್ಟಾಗಿದೆ. ದೊಡ್ಡ ತಾರಾಗಣವಿಲ್ಲದ ಚಿತ್ರವೊಂದು ಇಷ್ಟೊಂದು ಗಳಿಕೆ ಮಾಡುತ್ತಿರುವುದು ವಿಶೇಷ.

ಚಿತ್ರದ ಬಜೆಟ್‍ ಎರಡು ಕೋಟಿಯಷ್ಟಾಗಿರಬಹುದು ಎಂದು ಹೇಳಲಾಗುತ್ತಿದೆ. ಮೊದಲ ವಾರದ ಗಳಿಕೆಯಲ್ಲಿ ಚಿತ್ರಮಂದಿರಗಳ ಬಾಡಿಗೆ ಮತ್ತು ಮಿಕ್ಕ ಖರ್ಚುಗಳನ್ನು ಕಳೆದರೂ ಹಾಕಿದ ಬಂಡವಾಳ ವಾಪಸ್ಸು ಪಡೆದು, ಒಂದಿಷ್ಟು ಲಕ್ಷಗಳ ಲಾಭ ಸಿಗುತ್ತದೆ. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿರುವುದರಿಂದ, ಚಿತ್ರಮಂದಿರಗಳ ಮತ್ತು ಪ್ರದರ್ಶನಗಳ ಸಂಖ್ಯೆ ಸಹ ಜಾಸ್ತಿಯಾಗಿದೆ. ಸತತ ರಜೆಗಳಿರುವುದರಿಂದ ಚಿತ್ರ ಒಳ್ಳೆಯ ಗಳಿಕೆ ಕಾಣುತ್ತಿದೆ. ಎರಡನೆಯ ವಾರದಿಂದ ನಿರ್ಮಾಪಕರಿಗೆ ಬರುವುದೆಲ್ಲವೂ ಲಾಭವೇ. ಮೇಲಾಗಿ ಡಿಜಿಟಲ್‍ ಮತ್ತು ಸ್ಯಾಟಿಲೈಟ್‍ ಹಕ್ಕುಗಳಿಗೂ ಬೇಡಿಕೆ ಹೆಚ್ಚಾಗಿದೆ. ಇದೆಲ್ಲದರಿಂದ ಎರಡು ಕೋಟಿ ರೂ. ಹಾಕಿ ಮಾಡಿದ ಚಿತ್ರವು ಕಡಿಮೆ ಎಂದರೂ 20 ಕೋಟಿ ಲಾಭ ಗಳಿಸುತ್ತದೆ. ಮೂರನೆಯ ವಾರದ ನಂತರವೂ ಇದೇ ರೀತಿ ಗಳಿಕೆ ಇದ್ದರೆ, ಲಾಭದ ಪಾಲು ಇನ್ನಷ್ಟು ಹೆಚ್ಚಾಗಲಿದೆ.

ವೆನಿಲ್ಲಾ ಎಂಟರ್ಟೇನ್ಮೆಂಟ್ಸ್ ಮತ್ತು ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಪ್ರೇಮದ ಊರಲಿ’ ಚಿತ್ರ ನಿರ್ಮಾಣಗೊಂಡಿದ್ದು, ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್‍, ತಪಸ್ವಿನಿ ಪೂಣಚ್ಛ, ರಮಿಕಾ ಶಿವು, ಇಳಾ ವಿಟ್ಲ, ಗೋವಿಂದೇ ಗೌಡ, ಸ್ವಾತಿ ಗುರುದತ್‍ ಮುಂತಾದವರು ನಟಿಸಿದ್ದಾರೆ. ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ. ರಾಜ್‌ಕಾಂತ್ ಎಸ್.ಕೆ ಅವರ ಛಾಯಾಗ್ರಹಣ ಹಾಗೂ ಹರ್ಷಿತ್ ಪ್ರಭು ಅವರ ಸಂಕಲನ ಚಿತ್ರಕ್ಕಿದೆ.

‘ಬೇಲ್‍’ Review: ದುಷ್ಟರ ಅಂತ್ಯಕ್ಕೆ ಪರ್ಯಾಯ ಮಾರ್ಗ

Discover more from KannadaScreens

Subscribe now to keep reading and get access to the full archive.

Continue reading