ನಷ್ಟದ ಗುಸುಗುಸು ನಡುವೆ ‘ಅಯೋಗ್ಯ’ನ 50ನೇ ದಿನದ ಸಂಭ್ರಮ

ಚಂದನವನ, ಸಿನಿ ಸುದ್ದಿ

ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಚಿತ್ರವು 50 ದಿನಗಳನ್ನು ಪೂರೈಸಿದೆ. 50 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಮೈಸೂರಿನ ಲಿಡೋ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಹಾಗೂ ಅಭಿಮಾನಿಗಳೊಂದಿಗೆ ನಟ ನೀನಾಸಂ ಸತೀಶ್, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಚಿತ್ರತಂಡ, ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಒಂದೆರಡು ವಾರ ಚಿತ್ರಮಂದಿರಗಳಲ್ಲಿ ಸಿನಿಮಾ ಉಳಿಯುವುದೇ ದೊಡ್ಡ ಸಾಹಸದ ಕೆಲಸ. ಹೀಗಿದ್ದೂ ನಮ್ಮ ಸಿನಿಮಾ ಬರೋಬ್ಬರಿ 50 ದಿನಗಳ ಪ್ರದರ್ಶನ ಕಾಣಲು ಸಹಕಾರಿಯಾದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು. ಆದಷ್ಟು ಬೇಗ ‘ಅಯೋಗ್ಯ 3’ ಮೂಲಕ ನಿಮ್ಮ ಮುಂದೆ ಬರುವ ಆಲೋಚನೆಯಿದೆ’ ಎಂದು ಈ ಸಂದರ್ಭದಲ್ಲಿ ಸತೀಶ್‍ ನೀನಾಸಂ ಹೇಳಿಕೊಂಡಿದ್ದಾರೆ.

ಚಿತ್ರವೇನೋ 50 ದಿನಗಳ ಪ್ರದರ್ಶನ ಕಂಡಿದೆ. ಆದರೆ, ಚಿತ್ರದಿಂದ ನಿರ್ಮಾಪಕರು ಸೇಫ್‍ ಆಗಿದ್ದಾರಾ? ಕನ್ನಡ ಚಿತ್ರರಂಗದ ಮೂಲಗಳ ಪ್ರಕಾರ, ಚಿತ್ರ 50 ದಿನ ಪ್ರದರ್ಶನ ಕಂಡಿದ್ದರೂ, ನಿರ್ಮಾಪಕರು ಕನಿಷ್ಠವೆಂದರೂ ಐದು ಕೋಟಿ ನಷ್ಟದಲ್ಲಿದ್ದಾರಂತೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಅಯೋಗ್ಯ’ ಚಿತ್ರ ಗೆದ್ದಿದ್ದರಿಂದ ಮುಂದುವರೆದ ಭಾಗದ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಿದ್ದವು. ಆದರೆ, ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ.

ಅದರ ಹೊರತಾಗಿಯೂ, ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 6.5 ಕೋಟಿ ರೂ. ಗಳಿಕೆ ಮಾಡಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದರು. ಈ ಸಂಬಂಧ ಚಿತ್ರ ದೊಡ್ಡ ಗಳಿಕೆ ಮಾಡುತ್ತಿದೆ ಎಂದು ಪೋಸ್ಟರ್‍ಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ಬಾಕ್ಸ್ ಆಫೀಸ್‍ ಟ್ರಾಕರ್ ಸಕ್ನಿಲ್ಕ್ ಡಾಟ್‍ಕಾಮ್ ಪ್ರಕಾರ, ‘ಅಯೋಗ್ಯ 2’ ಚಿತ್ರದ ಮೂರು ದಿನಗಳ ಗಳಿಕೆ 2.26 ಕೋಟಿ ರೂ ಮಾತ್ರವಂತೆ. ಒಟ್ಟಾರೆ ಚಿತ್ರವು 50 ದಿನಗಳಲ್ಲಿ 6.5 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿ ಮಾಡಿದೆ.

ಇದರಲ್ಲಿ ನಿರ್ಮಾಪಕರ ಪಾಲಿಗೆ ದಕ್ಕುವುದು ಮೂರು ಕೋಟಿ ಮಾತ್ರ. ಚಿತ್ರದ ಬಜೆಟ್‍ 10 ಕೋಟಿ ರೂ. ಮೇಲಾಗಿರುವುದರಿಂದ, ನಿರ್ಮಾಪಕರಿಗೆ ಚಿತ್ರದಿಂದ ಕನಿಷ್ಠ ಐದು ಕೋಟಿ ನಷ್ಟವಾಗುತ್ತದೆ ಎಂಬ ಗುಸುಗುಸು ಕನ್ನಡ ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ. ಒಂದು ಕಡೆ ಚಿತ್ರ 50 ದಿನ ಪ್ರದರ್ಶನ ಕಂಡಿದೆ. ಇನ್ನೊಂದು ಕಡೆ ಐದು ಕೋಟಿ ರೂ.ಗೂ ಹೆಚ್ಚಿನ ನಷ್ಟ ಎಂದು ಹೇಳಲಾಗುತ್ತಿದೆ. ಹಾಗಾದರೆ, ಚಿತ್ರ ಗೆದ್ದಿದೆಯಾ? ಸೋತಿದೆಯಾ? ಅದು ಅವರವರ ಭಾವಕ್ಕೆ ಬಿಟ್ಟ ವಿಷಯ.

ಈ ಮಧ್ಯೆ, ಜೂನ್‍ 26ರಂದು ಬಿಡುಗಡೆಯಾಗಿದ್ದ ‘ರಕ್ಷಕ 2’ ಚಿತ್ರವು 100 ದಿನಗಳನ್ನು ಪೂರೈಸಿದೆಯಂತೆ. ಕಳೆದ ವರ್ಷ ಬಿಡುಗಡೆಯಾಗಿದ್ದ ‘ರಕ್ಷಕ’ ಚಿತ್ರದ ನಂತರ ‘ರಕ್ಷಕ 2’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಆರ್. ವಿಜಯಕುಮಾರ್ ಕಾಣಿಸಿಕೊಂಡಿದ್ದರು. ಸರ್ವೆ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಶಿವು ಸರ್ವೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿಜಯಕುಮಾರ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಜತೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿಜಯಕುಮಾರ್ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಲಯ ಕೋಕಿಲ, ರಾಜವಂಶಿ, ರಾಧಿಕಾ ಮುಂತಾದವರು ನಟಿಸಿದ್ದಾರೆ.

500 ಕೋಟಿ ಕಳೆದುಕೊಂಡ ಕೆ.ವಿ.ಎನ್‍ಗೆ ಸ್ವಲ್ಪ ಚೇತರಿಕೆ ಕೊಟ್ಟ ‘ಬೇಲ್‍’

Discover more from KannadaScreens

Subscribe now to keep reading and get access to the full archive.

Continue reading