ಈ ಹಿಂದೆ ‘ಕ’ ಮತ್ತು ‘ಮಳೆಬಿಲ್ಲು’ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದ ಶರತ್, ಒಂದು ದೊಡ್ಡ ಗ್ಯಾಪ್‍ನ ನಂತರ ಮತ್ತೆ ವಾಪಸ್ಸಾಗುತ್ತಿದ್ದಾರೆ. ಅವರೀಗ ‘ಶಭ್ಬಾಸ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಮುಹೂರ್ತ ಸಂಕ್ರಾಂತಿ ಹಬ್ಬದಂದು ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆದಿದೆ.
ಈ ಚಿತ್ರಕ್ಕೆ ರುದ್ರಶಿವ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಅವರ ಗುರುಗಳಾದ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಮುಹೂರ್ತ ಸಮಾರಂಭಕ್ಕೆ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ರುದ್ರಶಿವ, ‘ಸಾಮಾನ್ಯವಾಗಿ ಮಹತ್ತರವಾದುದನ್ನು ಸಾಧಿಸಿದಾಗ ಅಥವಾ ಮೆಚ್ಚುವಂತಹ ಕೆಲಸಗಳನ್ನು ಮಾಡಿದಾಗ, ಶಭ್ಬಾಸ್ ಎನ್ನಲಾಗುತ್ತದೆ. ಇಲ್ಲಿ ನಾಯಕ ಸಹ ಎಲ್ಲರಿಂದ ಶಭ್ಬಾಸ್ ಎನಿಸಿಕೊಳ್ಳುತ್ತಾನೆ. ಅವನು ಯಾವ ಕೆಲಸ ಮಾಡುತ್ತಾನೆ? ಎಂಬುದೇ ಚಿತ್ರದ ಕಥೆ. ಈ ಚಿತ್ರಕ್ಕೆ ‘ಹೊಡಿರೋ ಸೆಲ್ಯೂಟ್’ ಎಂಬ ಅಡಿಬರಹ ಇದೆ’ ಎಂದರು ಮಾಹಿತಿ ನೀಡಿದರು. ರುದ್ರಶಿವ ಇದಕ್ಕೂ ಮುನ್ನ ಶಿವಮಣಿ, ಅಯ್ಯಪ್ಪ ಶರ್ಮಾ, ಪಲ್ಲಕ್ಕಿ ರಾಧಾಕೃಷ್ಣ, ಸಾಯಿಪ್ರಕಾಶ್ ಮುಂತಾದ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರಂತೆ.
ಚಿತ್ರದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಆ ನಂತರ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಈಗಾಗಲೇ ಚಿತ್ರಕ್ಕೆ ಆರು ಹಾಡುಗಳನ್ನು ರೂಪಿಸಲಾಗಿದೆ. ಶಂಕರ್ ಮಹಾದೇವನ್ , ರವೀಂದ್ರ ಸೊರಗಾವಿ, ಶಮಿತಾ ಮಲ್ನಾಡ್, ಇಂದೂ ನಾಗರಾಜ್, ವ್ಯಾಸರಾಜ್, ವಿಜಯ್ ಪ್ರಕಾಶ್, ಅನುರಾಧ್ ಭಟ್, ‘ಜೋಗಿ’ ಪ್ರೇಮ್, ನವೀನ್ ಸಜ್ಜು ಮುಂತಾದವರು ಈ ಚಿತ್ರಕ್ಕೆ ಹಾಡಿದ್ದಾರೆ.
ಏಸ್ 22 (ACE 22) ಬ್ಯಾನರಿನಡಿಯಲ್ಲಿ ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶರತ್‍ಗೆ ನಾಯಕಿಯಾಗಿ ನಿಸರ್ಗ ಕಾಣಿಸಿಕೊಳ್ಳುತ್ತಿದ್ದಾರೆ.


