‘ದೇಸಾಯಿ’ ಚಿತ್ರದಲ್ಲಿ ಮೂರು ತಲೆಮಾರಿನ ಕಥೆ …

ಚಂದನವನ, ಸಿನಿ ಸುದ್ದಿ

ಉತ್ತರ ಕರ್ನಾಟಕದ ಭಾಷೆಯನ್ನು ಕನ್ನಡದ ಕೆಲವು ಸಿನಿಮಾಗಳಲ್ಲಿ ಕೆಟ್ಟದಾಗಿ ತೋರಿಸುತ್ತಿದ್ದಾರೆ ಎಂಬ ಬೇಸರ ಮಹಾಂತೇಶ ವಿ ಚೋಳಚಗುಡ್ಡ ಅವರಿಗೆ ಇತ್ತಂತೆ. ‘ನಾವೂ ಚೆನ್ನಾಗಿಯೇ ಮಾತನಾಡುತ್ತೇವೆ, ನಮ್ಮ ಸಂಸ್ಕೃತಿಯೂ ಚೆನ್ನಾಗಿದೆ. ಅದನ್ನು ತೋರಿಸಬೇಕಿದೆ’ ಎಂಬ ನಿಟ್ಟಿನಲ್ಲಿ ಅವರು ಒಂದು ಚಿತ್ರ ಮಾಡಿದ್ದಾರೆ. ಅದೇ ‘ದೇಸಾಯಿ’.

ಒಂದು ಹಾಡು ಹೊರತುಪಡಿಸಿ ಮಿಕ್ಕಂತೆ ‘ದೇಸಾಯಿ’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಚಿತ್ರಕ್ಕೆ ನಾಗಿರೆಡ್ಡಿ ಭಡ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ‘ಲವ್‍ 360’ ಖ್ಯಾತಿಯ ಪ್ರವೀಣ್‍ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು,  ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳಚಗುಡ್ಡ ಕಥೆ ಬರೆದು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇತ್ತೀಚೆಗೆ ನಗರದ ಹೊರವಲಯದಲ್ಲಿರುವ ರೆಸಾರ್ಟ್‍ವೊಂದರಲ್ಲಿ ಚಿತ್ರದ ಹಾಡೊಂದರ ಚಿತ್ರೀಕರಣ ನಡೆಯುತ್ತಿತ್ತು. ಶಿವು ಬೇರ್ಗಿ ಅವರು ಬರೆದಿರುವ, ಸಾಯಿಕಾರ್ತಿಕ್ ಸಂಗೀತ ನೀಡಿರುವ ಈ ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ನಾಯಕ ಪ್ರವೀಣ್ ಕುಮಾರ್ ಹಾಗೂ ನಾಯಕಿ ರಾಧ್ಯ ಹೆಜ್ಜೆ ಹಾಕಿದ್ದಾರೆ. ಪಿ.ಕೆ.ಎಚ್‍. ದಾಸ್‍ ಛಾಯಾಗ್ರಹಣದಲ್ಲಿ ಈ ಹಾಡನ್ನು ಸೆರೆಹಿಡಿಯಲಾಗಿದೆ.

ಮೊದಲು ಮಾತನಾಡಿದ ನಿರ್ದೇಶಕ ನಾಗಿರೆಡ್ಡಿ ಭಡ, ‘ದೇಸಾಯಿ ಕುಟುಂಬ ಎಂದರೆ ಉತ್ತರ ಕರ್ನಾಟಕದ ದೊಡ್ಡ ಕುಟುಂಬ. ಅಂಥದ್ದೊಂದು ದೊಡ್ಡ ಕುಟುಂಬದಲ್ಲಿ ನಡೆಯುವ ಚಿತ್ರ. ಇದು ನನ್ನ ಮೊದಲ ನಿರ್ದೇಶನದ ಚಿತ್ರವಾಗಿದ್ದು, ಮೂರು ತಲೆಮಾರಿನ ಕಥೆ ಇದರಲ್ಲಿದೆ‌. ಜನರು ಬಯಸುವ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದ್ದು, ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ’ ಎಂದು ಮಾಹಿತಿ ನೀಡಿದರು.

ನಿರ್ಮಾಪಕರು ಬಾಗಲಕೋಟೆಯವರಂತೆ. ಚಿತ್ರ ನಿರ್ಮಾಣ ಮಾಡಬೇಕು ಎಂಬುದು ಅವರ ಹಲವು ವರ್ಷಗಳ ಕನಸಾಗಿತ್ತಂತೆ. ಅದು ಈ ಚಿತ್ರದ ಮೂಲಕ ಈಡೇರಿದೆ. ‘ಇದೊಂದು ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಚಿತ್ರ. ಸಂಭಾಷಣೆ ಕೂಡ ಅದೇ ಸೊಗಡಿನಲ್ಲಿರುತ್ತದೆ. ಹೆಚ್ಚಿನ ಚಿತ್ರೀಕರಣ ಬಾದಾಮಿ, ಬಾಗಲಕೋಟೆಯಲ್ಲಿ ನಡೆದಿದೆ‌’ ಎಂದರು ನಿರ್ಮಾಪಕ ಮಹಂತೇಶ್ ವಿ ಚೋಳಚಗುಡ್ಡ.

‘ಲವ್ 360’ ಚಿತ್ರದ ನಂತರ ಮುಂದೆ ಯಾವ ತರಹದ ಚಿತ್ರ ಮಾಡಬೇಕು ಎಂದು ಪ್ರವೀಣ್‍ 15-20 ಕಥೆಗಳನ್ನು ಕೇಳಿದರಂತೆ. ಈ ಕಥೆ ಕೇಳಿ ಮಾಡಿದರೆ ಇಂಥದ್ದೇ ಕಥೆ ಮಾಡಬೇಕು ಎಂದು ಅವರು ಈ ಚಿತ್ರ ಒಪ್ಪಿಕೊಂಡಿದ್ದಾರಂತೆ. ‘ನಿಜ ಹೇಳಬೇಕೆಂದರೆ, ಆ ಚಿತ್ರಕ್ಕಿಂತ 10 ಪಟ್ಟು ಕಷ್ಟಪಟ್ಟಿದ್ದೇನೆ. ಈ ಚಿತ್ರವನ್ನು ಬಹಳ ಖುಷಿಯಿಂದ ಮಾಡಿದ್ದೇನೆ. ಈ ಚಿತ್ರದಲ್ಲಿ ಅಥ್ಲೆಟಿಕ್‍ ಪಾತ್ರ ಮಾಡಿದ್ದೇನೆ. ನನ್ನ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ’  ಎಂದು ಪ್ರವೀಣ್ ತಿಳಿಸಿದರು.

‘ದೇಸಾಯಿ’ ಚಿತ್ರದಲ್ಲಿ ಪ್ರವೀಣ್‍ಗೆ ನಾಯಕಿಯಾಗಿ ರಾಧ್ಯ ನಟಿಸಿದ್ದು, ಮಿಕ್ಕಂತೆ ‘ಒರಟ’ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ (ಕಾಂತಾರ) ಮುಂತಾದವರು ನಟಿಸಿದ್ದಾರೆ.

‘ಮಂಡ್ಯ ಹೈದ’ನ ಆಗಮನಕ್ಕೆ ದಿನಾಂಕ ಫಿಕ್ಸ್ …