ಕನ್ನಡ ಚಿತ್ರರಂಗದ ಸದ್ಯದ ಅತ್ಯಂತ ಬ್ಯುಸಿ ನಿರ್ದೇಶಕರೆಂದರೆ ಅದು ಮಧುಸೂದನ್ ಹವಾಲ್ದಾರ್ ಎಂದರೆ ತಪ್ಪಿಲ್ಲ. 2021ರಲ್ಲಿ ‘ಜಗನ್ನಾಥ ದಾಸರು’ ಚಿತ್ರದ ಮೂಲಕ ಆರಂಭವಾದ ಕನ್ನಡದ ದಾಸ ಸಾಹಿತ್ಯ ಮತ್ತು ಹರಿದಾಸರ ಜೀವನಗಾಥೆಯನ್ನು ಬೆಳ್ಳಿತೆರೆಯ ಮೂಲಕ ಜನರಿಗೆ ತಲುಪಿಸುವ ಪಯಣ, ‘ಪ್ರಸನ್ನ ವೆಂಕಟದಾಸರು’, ‘ವಿಜಯದಾಸರು’, ‘ಜಗನ್ನಾಥ ದಾಸರು ಭಾಗ-2’ ಚಿತ್ರಗಳ ಬಳಿಕ ಇದೀಗ ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ಚಿತ್ರದೊಂದಿಗೆ ಮುಂದುವರಿದಿದೆ.
ಇದೀಗ ಮಧುಸೂದನ್ ಹವಾಲ್ದಾರ್ ಅವರ ಐದನೇ ಹರಿದಾಸರ ಚಿತ್ರ ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ನವೆಂಬರ್ 27ರಂದು ಕನಕದಾಸರ ಜಯಂತಿಯ ಶುಭ ಸಂದರ್ಭದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ. ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸುವುದರ ಜೊತೆಗೆ ಚಿತ್ರದ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹವಾಲ್ದಾರ್ ಮತ್ತು ತಂಡದವರು ಮಾಧ್ಯಮದವರ ಎದುರು ಬಂದಿದ್ದರು.
‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ಚಿತ್ರದ ಕುರಿತು ಮಾತನಾಡುವ ಹವಾಲ್ದಾರ್, ‘ಆದಿಲ್ಶಾಹಿ ಅರಮನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಹಿಪತಿ ದಾಸರು, ಸೂಫಿ ಸಂತ ಶಾನುಂಗ ಅವರ ಪ್ರಭಾವಕ್ಕೆ ಒಳಗಾಗಿ, ಬಳಿಕ ಭಾಸ್ಕರ ಸ್ವಾಮಿಗಳ ಶಿಷ್ಯತ್ವ ಸ್ವೀಕರಿಸಿ ವೈರಾಗ್ಯದ ಹಾದಿ ಹಿಡಿದ ಜೀವನಗಾಥೆಯೇ ಈ ಚಿತ್ರದ ಪ್ರಮುಖ ಆಕರ್ಷಣೆ. ಆರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಮಹಿಪತಿ ದಾಸರ ಬದುಕಿನ ಮಹತ್ವದ ಘಟನೆಗಳನ್ನು ಇತಿಹಾಸಕ್ಕೆ ಧಕ್ಕೆಯಾಗದಂತೆ ಸಿನಿಮೀಯವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ’ ಎಂದರು.

ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಹನುಮ, ಭೀಮ ಮತ್ತು ಮಧ್ವ ಪಾತ್ರಗಳನ್ನು ಕಲ್ಪನಾತ್ಮಕವಾಗಿ ರೂಪಿಸಿ, ವಿಶೇಷ ವಿಎಫ್ಎಕ್ಸ್ ತಂತ್ರಜ್ಞಾನದ ಮೂಲಕ ದೃಶ್ಯವನ್ನು ತೋರಿಸಲಾಗಿದೆಯಂತೆ. ‘ಖ್ಯಾತ ಗಾಯಕ ರಾಯಚೂರು ಶೇಷಗಿರಿದಾಸ್ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ‘ಗುರುರಾಯನಂತ ಕರುಣಾಳು ಕಾಣೆ ಜಗದೊಳಗೆ’ ಹಾಡನ್ನೂ ಹಾಡಿದ್ದಾರೆ. ಮಹಿಪತಿ ದಾಸರ ಪಾತ್ರದಲ್ಲಿ ವಿಜಯಾನಂದ ನಾಯಕ್ ಕಾಣಿಸಿಕೊಂಡಿದ್ದಾರೆ. ಚಾಂದಿನಿ, ಮಹಿಪತಿ ದಾಸರ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ’ ಎಂದು ವಿವರ ನೀಡಿದರು.
ದಾಸ ಸಾಹಿತ್ಯದ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಚಿತ್ರವನ್ನು ರೂಪಿಸಲಾಗಿದೆ ಎಂದ ಅವರು, ‘ಮುಂದಿನ ದಿನಗಳಲ್ಲಿ ವ್ಯಾಸರಾಜರು, ಪುರಂದರದಾಸರು, ಕನಕದಾಸರು ಸೇರಿದಂತೆ ಪ್ರಮುಖ ಹರಿದಾಸರು ಮತ್ತು ಯತಿಗಳ ಜೀವನಗಾಥೆಗಳನ್ನು ಆಧರಿಸಿದ ಏಳು ಭಾಗಗಳ ಚಿತ್ರ ಸರಣಿ ನಿರ್ಮಿಸುವ ಯೋಜನೆಯನ್ನೂ ಹವಾಲ್ದಾರ್ ಹೊಂದಿದ್ದಾರೆ. ವರ್ಷಕ್ಕೆ ಕನಿಷ್ಠ ಎರಡು ಚಿತ್ರಗಳನ್ನು ಪ್ರೇಕ್ಷಕರ ಮುಂದೆ ತರುವ ಆಶಯ’ವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಿಪತಿ ದಾಸರ ಪತ್ನಿಯ ಪಾತ್ರ ನಿರ್ವಹಿಸಿರುವ ನಟಿ ಚಾಂದಿನಿ, ನಟ ಹೇರಂಬ, ‘ಸೌಂಡ್ ಆಫ್ ಮ್ಯೂಸಿಕ್’ ಖ್ಯಾತಿಯ ಗುರುರಾಜ್, ಗಾಯಕ ರಾಯಚೂರು ಶೇಷಗಿರಿದಾಸ್, ಸಹ ನಿರ್ದೇಶಕರಾದ ಸಾವಂತ್, ಬಾಬಿ, ನಟ ವಿಜಯ್ ಭಾಸ್ಕರ್ ಹಾಗೂ ಚಿತ್ರದ VFX ಕೆಲಸ ಮಾಡಿರುವ ದಯಾ ಮುಂತಾದವರಿದ್ದರು.


