‘ಮ್ಯಾರೇಜ್ ಪಾರ್ಟಿ’ಗೆ ಬಂದವರು ‘ಗಲಾಟೆ …’ ಮಾಡಿದಾಗ …

ಚಂದನವನ, ಸಿನಿ ಸುದ್ದಿ

ಮದುವೆಗಳಲ್ಲಿ ಗಲಾಟೆಗಳು ಸಹಜ. ಕುಡಿದು ಚಿತ್ತಾದ ಮೇಲೆ ಏನೇನು ಗಲಾಟೆಗಳಾಗುತ್ತವೋ ಹೇಳುವುದು ಕಷ್ಟ. ಅಂಥದ್ದೇ ಒಂದು ಕುಡಿತದ ‘ಗಲಾಟೆ …’ಯ ಹಾಡು ಇದೀಗ ‘ಮ್ಯಾರೇಜ್‍ ಪಾರ್ಟಿ’ ಚಿತ್ರದಲ್ಲೂ ಮೂಡಿಬಂದಿದ್ದು, ಇತ್ತೀಚೆಗೆ AMB ಕಪಾಲಿಯಲ್ಲಿ ಬಿಡುಗಡೆ ಆಗಿದೆ.

ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಮ್ಯಾರೇಜ್ ಪಾರ್ಟಿ’ ಚಿತ್ರವು ಡಿಸೆಂಬರ್ 4ರಂದು ತೆರೆಕಾಣಲಿದೆ. ಅದಕ್ಕೂ ಮೊದಲು, ಗೌಜು, ಗಮ್ಮತ್ತನ್ನು ತೆರೆದಿಡುವ ‘ಗಲಾಟೆ …’ ಎಂಬ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ಒಂದು ರಾಶಿ ಕಲಾವಿದರು ಕಾಣಿಸಿಕೊಂಡಿದ್ದು, ಅದರಲ್ಲಿ ನಾಯಕ ವಿನೀತ್‍ ಹೊರತುಪಡಿಸಿ, ಬಹಳಷ್ಟು ಜನ ಕಲಾವಿದರು ಮದುವೆಗೆ ತಯಾರಾಗಿ ಬಂದಂತೆಯೇ ಹಾಡಿನ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು.

ಮದುವೆ ಮನೆಯಲ್ಲಿ ಗಮ್ಮತ್ತಿಗೆ ನಡೆಯೋ ಎಣ್ಣೆ ಪಾರ್ಟಿಯ ಈ ಹಾಡನ್ನು ಪ್ರಣವಮ್ ಸಸಿ ಹಾಡಿದ್ದಾರೆ. ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಲವಾರು ರಿಯಾಲಿಟಿ ಶೋಗಳ ಮೂಲಕ ಹೆಸರಾಗಿರುವ ಮುರುಗ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ.

ಈ ಹಾಡಿನ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಚಯನ್ ಶೆಟ್ಟಿ, ‘ಹೆಸರೇ ಸೂಚಿಸುವಂತೆ ಮದುವೆಯೊಂದರ ಸುತ್ತ ಸಾಗುವ ಚಿತ್ರ. ಇದರಲ್ಲಿ ಹಾರರ್ ಅಂಶಗಳೂ ಇವೆ. ‘ಮ್ಯಾರೇಜ್ ಪಾರ್ಟಿ’ ಅಂದಾಕ್ಷಣ ಇದು ಸಂಪೂರ್ಣವಾಗಿ ಮದುವೆ ಸುತ್ತಲೇ ಸುತ್ತುವ ಕಥೆ ಅಂದುಕೊಳ್ಳಬೇಕಿಲ್ಲ. ಅದರಲ್ಲಿ ಬೇರೆ ವಿಷಯಗಳೂ ಇವೆ’ ಎಂದರು. ಇನ್ನು, ಚಿತ್ರಕ್ಕೂ ‘ಸು ಫ್ರಮ್ ಸೋ’ಗೂ ಸಾಕಷ್ಟು ಸಾಮ್ಯತೆಗಳಿವೆ ಎಂಬ ಪ್ರಶ್ನೆಗೆ, ಎರಡೂ ಚಿತ್ರಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ ಸಂತೋಷ್ ವಿ. ಅವರಿಗೆ ಈ ಚಿತ್ರ ನಿರ್ಮಿಸುವುದಕ್ಕೆ ಪ್ರೇರಣೆ ‘ಸು ಫ್ರಮ್ ಸೋ’. ಆ ಚಿತ್ರವನ್ನು ನೋಡಿ ಇಷ್ಟವಾಗಿ, ಅಂಥದ್ದೇ ಒಂದು ಚಿತ್ರ ಮಾಡಬೇಕೆಂದನಿಸಿತಂತೆ. ಅದಕ್ಕೆ ಉತ್ತರ ‘ಮ್ಯಾರೇಜ್‍ ಪಾರ್ಟಿ’. ‘ಮೊದಲ ಪ್ರಯತ್ನದಲ್ಲೇ ಚಯನ್ ಶೆಟ್ಟಿ ನಿರ್ದೇಶಕರಾಗಿ ಸಿಕ್ಕಿರೋದು ಖುಷಿಯ ವಿಚಾರ. ಎಲ್ಲಾ ತಂತ್ರಜ್ಞರು, ಕಲಾವಿದ ಬೆಂಬಲದೊಂದಿಗೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ’ ಎಂದರು.

ಇನ್ನುಳಿದಂತೆ ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ, ಮತ್ತು ‘ಗಲಾಟೆ …’ ಹಾಡಿನಲ್ಲಿ ಹೆಜ್ಜೆ ಹಾಕಿರುವ ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ಮೈಮ್ ರಾಮ್‌ದಾಸ್ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರೀಕರಣದ ಕ್ಷಣಗಳನ್ನು ಮೆಲುಕು ಹಾಕುತ್ತಲೇ, ಚಿತ್ರ ಗೆಲ್ಲಲಿ ಎಂದು ಹಾರೈಸಿದರು.

ಈಗಾಗಲೇ ‘ರಾಜ್ ಸೌಂಡ್ಸ್ ಆಂಡ್ ಲೈಟ್ಸ್’ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ವಿನೀತ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ. ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿ.ಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿದೆ.

ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ‘ಸು ಫ್ರಂ ಸೋ’ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನವಿದೆ. ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಆರು ನಿರ್ದೇಶಕರಿಂದ ನೀ ನಂಗೆ ಅಲ್ಲವಾ’ ಟ್ರೇಲರ್ ಬಿಡುಗಡೆ