ಆರು ನಿರ್ದೇಶಕರಿಂದ ನೀ ನಂಗೆ ಅಲ್ಲವಾ’ ಟ್ರೇಲರ್ ಬಿಡುಗಡೆ

ಚಂದನವನ, ಸಿನಿ ಸುದ್ದಿ

ಒಂದು ಚಿತ್ರದ ಟೀಸರ್, ಟ್ರೇಲರ್‍ ಮತ್ತು ಹಾಡುಗಳನ್ನು ಸ್ಟಾರ್‍ ನಟ-ನಟಿಯರಿಂದ ಬಿಡುಗಡೆ ಮಾಡಿಸುವುದು ಮಾಮೂಲಿ. ‘ನೀ ನಂಗೆ ಅಲ್ಲವಾ’ ಚಿತ್ರತಂಡದವರು ಇದೀಗ ತಮ್ಮ ಟ್ರೇಲರನ್ನು ಆರು ಜನಪ್ರಿಯ ನಿರ್ದೇಶಕರಿಂದ ಬಿಡುಗಡೆ ಮಾಡಿಸಿದ್ದಾರೆ.

ಜಯರಾಮ್ ದೇವಸಮುದ್ರ ಅವರ ನಿರ್ಮಾಣ ಹಾಗೂ ಮನೋಜ್ ಪಿ. ನಡಲಮನೆ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಬಹದ್ದೂರ್ ಚೇತನ್, ಮಹೇಶ್ ಕುಮಾರ್, ರೋಹಿತ್ ಪದಕಿ ಹಾಗೂ ಗುರುದತ್ ಗಾಣಿಗ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇವರ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಅನಾವರಣಗೊಂಡಿತು. ‘ಪ್ರೇಮದ ಊರಲಿ’ ಚಿತ್ರದ ನಿರ್ಮಾಪಕ ದೇವೇಂದ್ರ ಅವರೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ನವೆಂಬರ್ 13ರಂದು ಬಿಡುಗಡೆ ಆಗುತ್ತಿರುವ ‘ನೀ ನಂಗೆ ಅಲ್ಲವಾ’ ಚಿತ್ರದ ಕುರಿತು ಮಾತನಾಡಿದ ನಿರ್ಮಾಪಕ ಜಯರಾಮ್ ದೇವಸಮುದ್ರ, ‘ಹೊಸ ಪ್ರತಿಭೆಗಳ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿದೆ. ಒಂದು ಸಿನಿಮಾ ರೂಪುಗೊಳ್ಳುವ ಹಿಂದೆ ಕಲಾವಿದರು, ತಂತ್ರಜ್ಞರು ಸೇರಿದಂತೆ ಅನೇಕ ಮಂದಿಯ ಪರಿಶ್ರಮವಿರುತ್ತದೆ. ಪ್ರತಿಯೊಬ್ಬರ ಕನಸಿಗೂ ಪ್ರೋತ್ಸಾಹ ನೀಡುವುದು ಮುಖ್ಯ’ ಎಂದರು. ಅಷ್ಟೇ ಅಲ್ಲ, ತಮ್ಮ ಪ್ರಯತ್ನಕ್ಕೆ ಚಿತ್ರರಂಗದ ಗಣ್ಯರು ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.

ಟ್ರೇಲರ್‍ ಬಿಡುಗಡೆ ಮಾಡಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ ನಿರ್ದೇಶಕ ಮನೋಜ್ ಪಿ. ನಡಲಮನೆ, ‘ಸಿನಿಮಾ ಚೆನ್ನಾಗಿದೆಯೇ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯೇ ಎಂಬುದನ್ನು ಅಂತಿಮವಾಗಿ ಪ್ರೇಕ್ಷಕರೇ ನಿರ್ಧರಿಸುತ್ತಾರೆ. ನಮ್ಮ ತಂಡ ಪ್ರಾಮಾಣಿಕವಾಗಿ ಪರಿಶ್ರಮ ಹಾಕಿದ್ದು, ಟ್ರೇಲರ್ ಇಷ್ಟವಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರಕ್ಕೆ ಬೆಂಬಲ ನೀಡುವಂತೆ’ ಮನವಿ ಮಾಡಿದರು.

ನಾಯಕ ರಾಹುಲ್ ಆರ್ಕಾಟ್‍ಗೆ ಇದು ಮೊದಲ ಸಿನಿಮಾ. ‘ಸುಮಾರು ಮೂರೂವರೆ ವರ್ಷಗಳ ಹಿಂದೆ ಆರಂಭವಾದ ಈ ಸಿನಿಮಾ ಪಯಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಆದರೂ ನಿರ್ದೇಶಕ ಮನೋಜ್ ಸೇರಿದಂತೆ ತಂಡದ ಪ್ರತಿಯೊಬ್ಬರೂ ಪ್ರಯತ್ನ ಕೈಬಿಡದೆ ಶ್ರಮಿಸಿದ್ದಾರೆ’ ಎಂದರು.

ನಾಯಕಿ ಕಾಶಿಮಾ ಪಾಲಿಗೆ ‘ನೀ ನಂಗೆ ಅಲ್ಲವಾ’ ಚಿತ್ರ ವಿಶೇಷವಂತೆ. ‘ಚಿತ್ರರಂಗದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದ ಸಂದರ್ಭದಲ್ಲಿ ಮತ್ತೆ ಸಿನಿಮಾ ಮಾಡುವ ಭರವಸೆ ನೀಡಿದ ಚಿತ್ರವಿದು. ತಾವು ನಿರ್ವಹಿಸಿರುವ ಖುಷಿ ಪಾತ್ರದಲ್ಲಿ ನಗು, ಅಳು, ನೋವು, ಸಂತೋಷ ಸೇರಿದಂತೆ ಹಲವು ಭಾವನೆಗಳಿಗೆ ಅವಕಾಶವಿದೆ. ಮಹಿಳೆಯರು ಸಮಾಜದಲ್ಲಿ ಎದುರಿಸುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳನ್ನು ಚಿತ್ರದಲ್ಲಿ ನೈಜವಾಗಿ ಕಟ್ಟಿಕೊಡಲಾಗಿದೆ’ ಎಂದರು.

‘ನೀ ನಂಗೆ ಅಲ್ಲವಾ’ ಚಿತ್ರದಲ್ಲಿ ರಾಹುಲ್‍ ಆರ್ಕಾಟ್‍ ಮತ್ತು ಕಾಶಿಮಾ ಜೊತೆಗೆ ಗಿರಿ ಶಿವಣ್ಣ, ಮಂಜುನಾಥ್ ಹೆಗಡೆ, ಆರತಿ ಪಡುಬಿದ್ರೆ, ರೋಹಿತ್‍ ಭಾನುಪ್ರಕಾಶ್‍ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸೂರಜ್ ದೇಸಾಯಿ ಸಂಗೀತ ಮತ್ತು ಉದಯ್ ಲೀಲಾ ಛಾಯಾಗ್ರಹಣವಿದೆ.

ಬೆಳ್ಳಿತೆರೆಯ ಮೇಲೆ ಮಹಿಪತಿ ದಾಸರ ವೈರಾಗ್ಯದ ಪಯಣ …