ಅಭಯ್ ಚಂದ್ರು ಅಭಿನಯದ ‘ಮಂಡ್ಯ ಹೈದ’ ಚಿತ್ರದ ಕೆಲಸಗಳೆಲ್ಲವೂ ಮುಗಿದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ, ಬಿಡುಗಡೆ ದಿನಾಂಕ ಮಾತ್ರ ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಈಗ ಚಿತ್ರತಂಡದವರು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಚಿತ್ರವು ಫೆ.16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
‘ಮನಸಾಗಿದೆ’ ಚಿತ್ರದ ಮೂಲಕ ಹೀರೋ ಆದ ಅಭಯ್ ಚಂದ್ರು ಅಭಿನಯದ ಎರಡನೇ ಚಿತ್ರವೇ ಈ ‘ಮಂಡ್ಯ ಹೈದ’. ಈ ಚಿತ್ರವನ್ನು ಅವರ ತಂದೆ ಚಂದ್ರಶೇಖರ್, ತೇಜಸ್ ಕ್ರಿಯೇಷನ್ಸ್ ಮೂಲಕ ನಿರ್ಮಿಸಿದ್ದು, ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೆಸರೇ ಹೇಳುವಂತೆ ಮಂಡ್ಯದ ಹೈದನೊಬ್ಬನ ಕಥೆ ಇದು. ಮಂಡ್ಯ ಹೈದನ ಲೈಫ್ ಸ್ಟೈಲ್ ಹೇಗಿರುತ್ತೆ, ಆತ ಪ್ರೀತಿಸಿದರೆ ಹೇಗಿರುತ್ತದೆ ಅನ್ನೋದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. ಈ ಚಿತ್ರದಲ್ಲಿ ಪ್ರೀತಿಸುವವರಿಗೆ, ಪೋಷಕರಿಗೆ ಹಾಗೂ ಸ್ನೇಹಿತರಿಗೆ ಸಂದೇಶವಿಗಳಿವೆಯಂತೆ.
ಈಗಾಗಲೇ ಚಿತ್ರದ ಟೀಸರ್ ಮತ್ತು ಎರಡು ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯದಲ್ಲೇ ಉಳಿದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಆಗಲಿದೆ. ಇತ್ತೀಚೆಗೆ ನಾಯಕ ಅಭಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆರ್.ಪಿ.ಸಿ. ಲೇಔಟ್ನ ಶಂಕರ್ ನಾಗ್ ಗೆಳೆಯರ ಬಳಗ ಆಟೋ ಸಂಘದವರು ಅಭಯ್ ಅವರನ್ನು ಕರೆಸಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿಸುವುದರ ಜೊತೆಗೆ, ಕೇಕ್ ಕತ್ತರಿಸಿ ಹುಟ್ಟುಹುಬ್ಬ ಆಚರಣೆ ಮಾಡಿದ್ದಾರೆ.
ಮನು ಗೌಡ ಅವರ ಛಾಯಾಗ್ರಹಣ, ಸುರೇಂದ್ರನಾಥ್ ಅವರ ಸಂಗೀತವಿರುವ ‘ಮಂಡ್ಯ ಹೈದ’ ಚಿತ್ರದಲ್ಲಿ ಅಭಯ್ಗೆ ಭೂಮಿಕಾ ಭೂಮೇಶ್ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ತೇಜಸ್, ಗಜೇಂದ್ರ, ದರ್ಶನ್ ಸೂರ್ಯ, ಸುಖೇಶ್, ಚಿದಂಬರ, ಬಾಲರಾಜ್ ವಾಡಿ ಮುಂತಾದವರು ನಟಿಸಿದ್ದಾರೆ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ 14 ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.


